ಸಚಿವರಿಗೆ ಸಿಎಂ ಸಿದ್ದರಾಮಯ್ಯ ಕ್ಲಾಸ್: ಅಧಿವೇಶನಕ್ಕೆ ಕಡ್ಡಾಯ ಹಾಜರಾಗುವಂತೆ ಖಡಕ್ ಸೂಚನೆ

Untitled design 2026 01 24T201659.099

ಬೆಂಗಳೂರು: ರಾಜ್ಯದಲ್ಲಿ ಮನರೇಗಾ (MGNREGA) ಯೋಜನೆ ಹೆಸರು ಬದಲಾವಣೆ ವಿಚಾರವಾಗಿ ಕರೆಯಲಾಗಿರುವ ವಿಶೇಷ ಅಧಿವೇಶನದಲ್ಲಿ ಸಚಿವರ ಗೈರುಹಾಜರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯ ಕೆಲಸಗಳನ್ನು ಬದಿಗಿಟ್ಟು ಸದನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಸಿಎಂ ಸಚಿವರಿಗೆ ಪತ್ರ ಬರೆದಿದ್ದಾರೆ.

ಸಚಿವರಿಗೆ ಸಿಎಂ ಬರೆದ ಪತ್ರದಲ್ಲಿ ಏನಿದೆ ?

ವಿಧಾನಮಂಡಲದ ಅಧಿವೇಶನ ನಡೆಯುವಾಗ ಸಚಿವರು ಗೈರಾಗುತ್ತಿರುವುದಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿವೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರ ಅನುಪಸ್ಥಿತಿ ಸಾರ್ವಜನಿಕ ವಲಯದಲ್ಲಿ ತಪ್ಪು ಸಂದೇಶ ರವಾನಿಸುತ್ತದೆ ಎಂದು ಸಿಎಂ ಕಳವಳ ವ್ಯಕ್ತಪಡಿಸಿದ್ದಾರೆ.

ಪತ್ರದಲ್ಲಿ, ಅಧಿವೇಶನ ನಡೆಯುವ ಸಮಯದಲ್ಲಿ ಸಚಿವರು ಯಾವುದೇ ಇಲಾಖೆಯ ಸಭೆ ಅಥವಾ ಸಮಾರಂಭಗಳನ್ನು ಆಯೋಜಿಸಬಾರದು , ಉಭಯ ಸದನಗಳ ಘನತೆಯನ್ನು ಕಾಪಾಡಲು ಸಚಿವರು ಖುದ್ದಾಗಿ ಹಾಜರಿರಬೇಕು ಮತ್ತು ಪ್ರತಿದಿನದ ಕಾರ್ಯಕಲಾಪಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಸರ್ಕಾರದ ಕರ್ತವ್ಯ ಎಂದು ಪತ್ರದಲ್ಲಿ ಸೂಚಿಸಿದ್ದಾರೆ.

ಕೇಂದ್ರ ಸರ್ಕಾರವು ಮನರೇಗಾ ಯೋಜನೆಯನ್ನು ವಿಬಿ ಜಿ ರಾಮ್ ಜಿ ಯೋಜನೆ ಎಂದು ಮರುನಾಮಕರಣ ಮಾಡಲು ಹೊರಟಿರುವುದರ ವಿರುದ್ಧ ಚರ್ಚಿಸಲು ರಾಜ್ಯ ಸರ್ಕಾರ ಈ ವಿಶೇಷ ಅಧಿವೇಶನ ಕರೆದಿದೆ. ಆದರೆ ಒಂದು ವಾರದ ಅಧಿವೇಶನದ ಮೊದಲ ಎರಡು ದಿನಗಳು ರಾಜ್ಯಪಾಲರ ಭಾಷಣದ ವಿವಾದದಲ್ಲೇ ಕಳೆದುಹೋಗಿದೆ.

ಬಿ.ವೈ. ವಿಜಯೇಂದ್ರ ವಾಗ್ದಾಳಿ

ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸದನದಲ್ಲಿ ನಾಡಿನ ಜನರ ಕಲ್ಯಾಣದ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ ಕೇಂದ್ರದ ವಿರುದ್ಧ ಜನರನ್ನು ಎತ್ತಿಕಟ್ಟಲು ಈ ಅಧಿವೇಶನವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಬಡವರ ಹಿತದೃಷ್ಟಿಯಿಂದ ಪ್ರಧಾನಿ ಮೋದಿಯವರು ತಂದಿರುವ ಸುಧಾರಣೆಗಳ ವಿರುದ್ಧ ಕಾಂಗ್ರೆಸ್‌ ದ್ವೇಷ ಸಾಧಿಸುತ್ತಿದೆ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.

Exit mobile version