ಹವಾಮಾನ ವೈಪರೀತ್ಯದಿಂದ ಅಮೆರಿಕದಲ್ಲಿ 9000 ವಿಮಾನ ಹಾರಾಟ ರದ್ದು:15 ರಾಜ್ಯಗಳಿಗೆ ತುರ್ತು ಪರಿಸ್ಥಿತಿ ಘೋಷಣೆ

Untitled design 2026 01 25T090320.260

ಅಮೆರಿಕದಾದ್ಯಂತ ಪ್ರಕೃತಿಕ ವಿಕೋಪ ಸಂಭವಿಸಿದೆ. ಇದರಿಂದ ದಟ್ಟ ಮಂಜು ಮತ್ತು ಭಾರಿ ಹಿಮಪಾತದಿಂದಾಗಿ (Winter Storm) ಇಡೀ ದೇಶವೇ ಸ್ಥಗಿತಗೊಂಡಂತಿದೆ. ಭೀಕರ ಶೀತ ಗಾಳಿಯ ಹೊಡೆತಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಸಾರಿಗೆ ವ್ಯವಸ್ಥೆ ಕುಸಿದಿದೆ. ಮುನ್ನೆಚ್ಚರಿಕಾ ಕ್ರಮವಾಗಿ 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.

9000 ವಿಮಾನಗಳ ಹಾರಾಟ ರದ್ದು

ಹವಾಮಾನ ವೈಪರೀತ್ಯದಿಂದಾಗಿ ಅಮೆರಿಕದ ವಿವಿಧ ನಿಲ್ದಾಣಗಳಿಂದ ಹೊರಡಬೇಕಿದ್ದ ಮತ್ತು ಬರಬೇಕಿದ್ದ ಸುಮಾರು 9000ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಸಾವಿರಾರು ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡಿದ್ದು, ಸಂಚಾರ ವ್ಯವಸ್ಥೆ ಸಹಜ ಸ್ಥಿತಿಗೆ ಬರಲು ಇನ್ನೂ ಕೆಲವು ದಿನಗಳು ಬೇಕಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತುರ್ತು ಸಭೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಶುಕ್ರವಾರವೇ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ರಾಜ್ಯ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಫೆಡರಲ್ ಸರ್ಕಾರವು ಸಮನ್ವಯ ಸಾಧಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ಯಾವುದೇ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಲು ಫೆಡರಲ್ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ಏಜೆನ್ಸಿ (FEMA) ಸಜ್ಜಾಗಿದೆ ಎಂದು ಭರವಸೆ ನೀಡಿದ್ದಾರೆ.

ಮೈನಸ್ 34 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದ ತಾಪಮಾನ

ರಾಷ್ಟ್ರೀಯ ಹವಾಮಾನ ಇಲಾಖೆಯ ವರದಿಯಂತೆ, ಶೀತ ಅಲೆಯು ಅಪಾಯಕಾರಿ ಮಟ್ಟವನ್ನು ತಲುಪಿದೆ. ಉತ್ತರ ಟೆಕ್ಸಾಸ್ ಸೇರಿದಂತೆ ಹಲವು ಭಾಗಗಳಲ್ಲಿ ತಾಪಮಾನವು ಮೈನಸ್ 24 ಡಿಗ್ರಿ ಸೆಲ್ಸಿಯಸ್‌ನಿಂದ ಮೈನಸ್ 34 ಡಿಗ್ರಿ ಸೆಲ್ಸಿಯಸ್‌ವರೆಗೆ ಇಳಿಕೆಯಾಗಿದೆ. ಇದು ಮನುಷ್ಯನ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಜನರು ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಲಾಗಿದೆ. ಟೆಕ್ಸಾಸ್‌ನಿಂದ ನ್ಯೂ ಇಂಗ್ಲೆಂಡ್‌ವರೆಗೆ ಸುಮಾರು 2,000 ಮೈಲುಗಳಿಗೂ ಹೆಚ್ಚು ಪ್ರದೇಶವು ಹಿಮದ ಹೊದಿಕೆಯಿಂದ ಆವೃತವಾಗಿದೆ.

20 ಕೋಟಿ ಜನರಿಗೆ ಹಿಮದ ಭೀತಿ

ಅಮೆರಿಕದ ಒಟ್ಟು ಜನಸಂಖ್ಯೆಯ ಮೂರನೇ ಎರಡರಷ್ಟು ಭಾಗ, ಅಂದರೆ ಸುಮಾರು 20 ಕೋಟಿಗೂ ಹೆಚ್ಚು ಜನರು ಈ ಚಂಡಮಾರುತದ ನೇರ ಪ್ರಭಾವಕ್ಕೆ ಒಳಗಾಗಿದ್ದಾರೆ. ವಾಷಿಂಗ್ಟನ್, ನ್ಯೂಯಾರ್ಕ್ ಮತ್ತು ಬೋಸ್ಟನ್ ನಗರಗಳಲ್ಲಿ ಸುಮಾರು ಒಂದು ಅಡಿಗೂ ಹೆಚ್ಚು ಹಿಮಪಾತ ಸಂಭವಿಸುವ ಸಾಧ್ಯತೆ ಇದೆ. ಒಕ್ಲಹೋಮಾ ಮತ್ತು ನ್ಯೂಯಾರ್ಕ್‌ನ ಗ್ರಾಮೀಣ ಭಾಗಗಳಲ್ಲಿ ಹಿಮಪಾತದ ತೀವ್ರತೆ ವಿಪರೀತವಾಗಿದ್ದು, ರಸ್ತೆಗಳು ಮಂಜಿನಿಂದ ಮುಚ್ಚಿಹೋಗಿವೆ.

ಈ ಭೀಕರ ಚಂಡಮಾರುತವು ಸೋಮವಾರದವರೆಗೂ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ವಿದ್ಯುತ್ ಸಂಪರ್ಕ ಕಡಿತ ಮತ್ತು ಸಾರಿಗೆ ಅಡಚಣೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ನಾಗರಿಕರು ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ಸೂಚಿಸಲಾಗಿದೆ.

Exit mobile version