ಬೆಂಗಳೂರು, ಜ.31: ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಕಾನ್ಫಿಡೆಂಟ್ ಗ್ರೂಪ್ (Confident Group) ಸಂಸ್ಥಾಪಕ ಮತ್ತು ಶ್ರೀಮಂತ ಉದ್ಯಮಿ ಸಿ.ಜೆ ರಾಯ್ (CJ Roy) ಅವರ ಆತ್ಮಹತ್ಯೆ ಪ್ರಕರಣ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಐಟಿ ಅಧಿಕಾರಿಗಳ ದಾಳಿ, ಚೇಂಬರ್‌ನಲ್ಲಿ ಕಳೆದ 10 ನಿಮಿಷಗಳು ಮತ್ತು ಬಳಿಕ ಸಂಭವಿಸಿದ ಗುಂಡಿನ ಸದ್ದು ಈ ಎಲ್ಲ ಅಂಶಗಳು ರಾಯ್ ಅವರ ಸಾವಿನ ಕುರಿತು ಗಂಭೀರ ಅನುಮಾನಗಳಿಗೆ ಕಾರಣವಾಗಿವೆ.
ಕಳೆದ ಕೆಲವು ದಿನಗಳಿಂದ ಕಾನ್ಫಿಡೆಂಟ್ ಗ್ರೂಪ್ ಮೇಲೆ ಆದಾಯ ತೆರಿಗೆ ಇಲಾಖೆ (IT Department) ನಿರಂತರವಾಗಿ ದಾಳಿ ನಡೆಸುತ್ತಿತ್ತು. ದಾಖಲೆಗಳ ಪರಿಶೀಲನೆ, ಕಚೇರಿ ಶೋಧನೆ ಹಾಗೂ ವಿಚಾರಣೆಗಳಿಂದ ಉದ್ಯಮಿ ರಾಯ್ ತೀವ್ರ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಇದೇ ಒತ್ತಡವೇ ಆತ್ಮಹತ್ಯೆಗೆ ಕಾರಣವಾಗಿದೆಯೇ ಎಂಬ ಪ್ರಶ್ನೆ ಇದೀಗ ಮೂಡಿದೆ.
ನಿನ್ನೆ ಐಟಿ ಅಧಿಕಾರಿಗಳು ಕಚೇರಿಯಲ್ಲಿ ಶೋಧ ನಡೆಸುತ್ತಿದ್ದ ಸಮಯದಲ್ಲೇ ಈ ದುರಂತ ಸಂಭವಿಸಿದೆ. ಐಟಿ ದಾಳಿ ನಡೆಯುತ್ತಿದ್ದ ವೇಳೆ ಸಿ.ಜೆ ರಾಯ್ ತಮ್ಮ ಕಚೇರಿಯ ಚೇಂಬರ್‌ಗೆ ತೆರಳಿದ್ದಾರೆ. ಈ ಸಂದರ್ಭ “ಯಾರನ್ನೂ ಒಳಗೆ ಬಿಡಬೇಡಿ” ಎಂದು ತಮ್ಮ ಗನ್‌ಮ್ಯಾನ್‌ಗೆ ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಾಯ್ ಚೇಂಬರ್‌ಗೆ ಹೋಗಿ ಸುಮಾರು 10 ನಿಮಿಷಗಳ ಕಾಲ ಯಾವುದೇ ಚಲನವಲನ ಕಾಣಿಸದ ಹಿನ್ನೆಲೆಯಲ್ಲಿ ಕಾನ್ಫಿಡೆಂಟ್ ಗ್ರೂಪ್‌ನ ಎಂಡಿ ಟಿಜೆ ಜೋಸೆಫ್ ರಾಯ್ ಅವರಿಗೆ ಅನುಮಾನ ಮೂಡಿದೆ. ಅವರು ಬಾಗಿಲು ತಟ್ಟಿ ನೋಡಿದರೂ ಒಳಗಡೆಯಿಂದ ಪ್ರತಿಕ್ರಿಯೆ ಬಂದಿಲ್ಲ. ಬಾಗಿಲು ಲಾಕ್ ಆಗಿದ್ದ ಕಾರಣ ಸಿಬ್ಬಂದಿಯ ಸಹಾಯದಿಂದ ಬಾಗಿಲು ಒಡೆದು ಒಳಗೆ ಪ್ರವೇಶಿಸಲಾಗಿದೆ.
ಒಳಗಡೆ ಕಂಡ ದೃಶ್ಯ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಸಿ.ಜೆ ರಾಯ್ ಅವರು ಕುರ್ಚಿಯ ಮೇಲೆ ರಕ್ತದ ಮಡುವಿನಲ್ಲಿ ಕುಳಿತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಟಿಜೆ ಜೋಸೆಫ್ ಸಂಪೂರ್ಣ ಮಾಹಿತಿ ಉಲ್ಲೇಖಿಸಿದ್ದಾರೆ.
ಈ ಪ್ರಕರಣದಲ್ಲಿ ಸಾವಿಗೂ ಮುನ್ನ ಸಿ.ಜೆ ರಾಯ್ “ತಾಯಿ ಜೊತೆ ಮಾತನಾಡಬೇಕು” ಎಂದು ಹೇಳಿದ್ದರು ಎನ್ನಲಾಗಿದೆ. ಆದರೆ ಅವರು ನಿಜವಾಗಿಯೂ ತಾಯಿಯೊಂದಿಗೆ ಮಾತನಾಡಿದ್ದಾರೆಯೇ? ಅಥವಾ ಬೇರೆ ಯಾರಾದರೂ ಜೊತೆ ಕೊನೆಯ ಕ್ಷಣದಲ್ಲಿ ಸಂಪರ್ಕದಲ್ಲಿದ್ದಾರೆಯೇ? ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಪೊಲೀಸರು ರಾಯ್ ಬಳಿಯಿದ್ದ ಐಫೋನ್ ಮತ್ತು ಆಂಡ್ರಾಯ್ಡ್ ಸೇರಿ ಎರಡು ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಎರಡೂ ಫೋನ್‌ಗಳಿಗೂ ಪಾಸ್‌ವರ್ಡ್ ಇದ್ದು, ಇದುವರೆಗೆ ಡೇಟಾ ತೆಗೆಯಲು ಸಾಧ್ಯವಾಗಿಲ್ಲ. ಡೆತ್‌ನೋಟ್ ಅಥವಾ ಯಾವುದೇ ಮಹತ್ವದ ಸಂದೇಶ ಮೊಬೈಲ್‌ನಲ್ಲಿ ಇದೆಯೇ ಎಂಬುದನ್ನು ಪತ್ತೆಹಚ್ಚಲು ಕೋರ್ಟ್ ಅನುಮತಿ ಪಡೆದು ಮೊಬೈಲ್‌ಗಳನ್ನು ಎಫ್‌ಎಸ್‌ಎಲ್ (Forensic Science Laboratory)ಗೆ ಕಳುಹಿಸಲು ಸಿದ್ಧತೆ ನಡೆಸಲಾಗುತ್ತಿದೆ.
ಈ ನಡುವೆ ಐಟಿ ಅಧಿಕಾರಿಗಳ ವರ್ತನೆ, ದಾಳಿ ವೇಳೆ ಉಂಟಾದ ಒತ್ತಡ ಮತ್ತು ಆತ್ಮಹತ್ಯೆಯ ನಡುವೆ ನೇರ ಸಂಬಂಧವಿದೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ಸತ್ಯಾಂಶ ಜನತೆಗೆ ತಿಳಿಯಬೇಕು ಎಂಬ ಉದ್ದೇಶದಿಂದ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಕಾನ್ಫಿಡೆಂಟ್ ಗ್ರೂಪ್ ನಿರ್ದೇಶಕ ಟಿಜೆ ಜೋಸೆಫ್ ಅಧಿಕೃತವಾಗಿ ದೂರು ನೀಡಿದ್ದಾರೆ.
