ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ, ಸ್ಯಾಂಡಲ್‌ವುಡ್ ಮತ್ತು ಮಾಲಿವುಡ್‌ನ ಖ್ಯಾತ ನಿರ್ಮಾಪಕ ಡಾ. ಸಿ.ಜೆ ರಾಯ್ ಅವರ ನಿಗೂಢ ಸಾವಿನ ಪ್ರಕರಣಕ್ಕೆ ಈಗ ಮಹತ್ವದ ತಿರುವು ಸಿಕ್ಕಿದೆ. ಮರಣೋತ್ತರ ಪರೀಕ್ಷೆಯ (Autopsy) ವರದಿಯು ಅಧಿಕೃತವಾಗಿ ಹೊರಬಿದ್ದಿದ್ದು, ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ.
ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿದಂತೆ, ಸಿಜೆ ರಾಯ್ ಅವರು ಅತ್ಯಂತ ಯೋಜಿತವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ತಮ್ಮ ಬಲಗೈಯಿಂದ ಎದೆಯ ಎಡಭಾಗಕ್ಕೆ ಗನ್ ಇಟ್ಟು ಟ್ರಿಗರ್ ಒತ್ತಿದ್ದಾರೆ. ಅತ್ಯಂತ ಸಮೀಪದಿಂದ ಅಂದರೆ ಪಾಯಿಂಟ್ ಬ್ಲಾಂಕ್ ರೇಂಜ್‌ನಲ್ಲಿ ಗುಂಡು ಹಾರಿಸಿಕೊಂಡಿದ್ದರಿಂದ, ಎದೆಯ ಮೇಲ್ಭಾಗದ ಮಾಂಸಖಂಡಗಳು ಚದುರಿಲ್ಲ. ಬದಲಾಗಿ, ಗುಂಡು ನೇರವಾಗಿ ದೇಹದೊಳಗೆ ಆಳವಾಗಿ ಇಳಿದಿದೆ. ಈ ಬುಲೆಟ್ ಹೃದಯವನ್ನು ಸೀಳಿ, ಶ್ವಾಸಕೋಶ ಮತ್ತು ರಕ್ತನಾಳಗಳ ಮೂಲಕ ಹಾದುಹೋಗಿ ಕೊನೆಗೆ ಬೆನ್ನಿನ 11ನೇ ಪಕ್ಕೆಲುಬಿನ ಬಳಿ ಸಿಲುಕಿಕೊಂಡಿದೆ. ವಿಧಿವಿಜ್ಞಾನ ತಜ್ಞರು ಬೆನ್ನಿನಲ್ಲಿದ್ದ ಬುಲೆಟ್ ಅನ್ನು ಹೊರತೆಗೆದಿದ್ದು, ಹೆಚ್ಚಿನ ತನಿಖೆಗಾಗಿ ಎಫ್‌ಎಸ್‌ಎಲ್‌ಗೆ (FSL) ರವಾನಿಸಿದ್ದಾರೆ.
ಆತ್ಮಹತ್ಯೆಗೆ ಬಳಸಲಾದ NP Bore 0.25 ಪಿಸ್ತೂಲ್ ಸಿಜೆ ರಾಯ್ ಅವರ ಹೆಸರಿನಲ್ಲೇ ಪರವಾನಗಿ ಪಡೆಯಲಾಗಿದೆ ಎಂದು ಖಚಿತವಾಗಿದೆ. ಪೊಲೀಸರು ಈಗಾಗಲೇ ಈ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ಅಸಲಿ ಪ್ರಶ್ನೆ ಇರುವುದು ಅವರ ಸಾವಿನ ಕಾರಣದ ಹಿಂದೆ. ಯಾವುದೇ ಸಾಲಬಾಧೆ ಇಲ್ಲದ, ಸಾವಿರಾರು ಕೋಟಿ ಒಡೆಯ ಇಂತಹ ನಿರ್ಧಾರ ಏಕಕಾಲಕ್ಕೆ ತೆಗೆದುಕೊಳ್ಳಲು ಸಾಧ್ಯವೇ ? ಎಂಬ ಪ್ರಶ್ನೆ ಕಾಡುತ್ತಿದೆ. ಸದ್ಯ ಅವರ ಮೊಬೈಲ್ ಫೋನ್ ಅನ್ನು ಸಿಐಡಿ ವಿಭಾಗಕ್ಕೆ ಕಳುಹಿಸಲಾಗಿದ್ದು, ಡಿಲೀಟ್ ಆಗಿರುವ ಡೇಟಾವನ್ನು ಮರುಪಡೆಯುವ ಪ್ರಯತ್ನ ಸಾಗಿದೆ. ಐಟಿ (Income Tax) ಅಧಿಕಾರಿಗಳ ಇತ್ತೀಚಿನ ಒತ್ತಡವೇ ಈ ಸಾವಿಗೆ ಕಾರಣವಾಯಿತೇ ಎಂಬ ಆಯಾಮದಲ್ಲಿ ತನಿಖೆ ತೀವ್ರಗೊಂಡಿದೆ.
ಡಾ. ಸಿ.ಜೆ ರಾಯ್ ಕೇರಳದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಇವರು, ಉದ್ಯಮದ ಸಲುವಾಗಿ ದುಬೈಗೆ ತೆರಳಿ ಅಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದರು. ನಂತರ ಬೆಂಗಳೂರನ್ನು ಕೇಂದ್ರವಾಗಿಸಿಕೊಂಡು ಕಾನ್ಫಿಡೆಂಟ್ ಗ್ರೂಪ್ ಎಂಬ ಬೃಹತ್ ಸಾಮ್ರಾಜ್ಯ ಕಟ್ಟಿದರು. ಇಂದು ಇವರ ಸಂಸ್ಥೆಯ ಮೌಲ್ಯ 8,500 ಕೋಟಿ ರೂಪಾಯಿಗೂ ಅಧಿಕವಾಗಿದೆ. ಸಿನಿಮಾ ರಂಗದಲ್ಲೂ ಮೋಹನ್‌ಲಾಲ್, ಸುದೀಪ್ ಅವರಂತಹ ಸ್ಟಾರ್‌ಗಳ ಆಪ್ತರಾಗಿದ್ದ ರಾಯ್, ಕಲಾ ಪೋಷಕರಾಗಿ ಗುರುತಿಸಿಕೊಂಡಿದ್ದರು.
ಸಿಜೆ ರಾಯ್ ಅವರ ಇಚ್ಛೆಯಂತೆ ಬನ್ನೇರುಘಟ್ಟದ ಕಾಸಾಗ್ರಾಂಡ್‌ನಲ್ಲಿ ಅವರ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಸಜ್ಜಾಗಿದ್ದಾರೆ. ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಸೇರಿದಂತೆ ಚಿತ್ರರಂಗದ ಗಣ್ಯರು ರಾಯ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
