ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬ್ಲ್ಯಾಕ್ ಮೇಲ್: ಆರೋಪಿ ಅರೆಸ್ಟ್

Woman dead living relationship age gap kodigehalli (6)

ಬೆಂಗಳೂರು: ನೊಂದ ಹಾಗೂ ಸಂಕಷ್ಟದಲ್ಲಿದ್ದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಪರಿಚಯ ಬೆಳೆಸಿ, ಬಳಿಕ ಅವರನ್ನು ಮೋಸಗೊಳಿಸಿ ಲೈಂಗಿಕ ದೌರ್ಜನ್ಯ ನಡೆಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ವ್ಯಕ್ತಿಯ ಕೃತ್ಯ ಇದೀಗ ಬಹಿರಂಗವಾಗಿದೆ. ರಾಮನಗರ ಮಕ್ಕಳ ಆಯೋಗ ಸಮಿತಿ ಸದಸ್ಯನಾಗಿದ್ದ ಚಂದ್ರೇಗೌಡ ಎಂಬಾತನನ್ನು ಬೆಂಗಳೂರಿನ ಆರ್.ಆರ್.ನಗರ ಠಾಣೆ ಪೊಲೀಸರು ಬಂಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಶಾಕ್ ಮೂಡಿಸುವ ಮಾಹಿತಿ ಹೊರಬಂದಿದೆ.

ಸಮಸ್ಯೆಗಳಲ್ಲಿ ಸಿಲುಕಿದ್ದ ಮಹಿಳೆಯರೊಂದಿಗೆ “ಸಹಾಯ ಮಾಡುತ್ತೇನೆ” ಎಂಬ ನೆಪದಲ್ಲಿ ಸ್ನೇಹ ಬೆಳೆಸುತ್ತಿದ್ದ. ಬಳಿಕ ಅವರನ್ನು ನಂಬಿಸಿ, ಮದುವೆಯಾಗುವುದಾಗಿ ಭರವಸೆ ನೀಡುತ್ತಿದ್ದ. ಈ ವೇಳೆ ಖಾಸಗಿ ಕ್ಷಣಗಳನ್ನು ವಿಡಿಯೋ ಅಥವಾ ಫೋಟೋ ಇಟ್ಟುಕೊಂಡು, ನಂತರ ಅದನ್ನೇ ಆಧಾರವನ್ನಾಗಿ ಮಾಡಿಕೊಂಡು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದನೆಂಬುದು ತನಿಖೆಯಲ್ಲಿ ತಿಳಿದುಬಂದಿದೆ.

ಚಂದ್ರೇಗೌಡ ತಾನು ವಕೀಲ, ಲೆಕ್ಚರರ್, ಪೊಲೀಸ್ ಅಧಿಕಾರಿ ಅಥವಾ ಮಾಧ್ಯಮ ವರದಿಗಾರನೆಂದು ಸುಳ್ಳು ಹೇಳಿ ಪರಿಚಯ ಮಾಡಿಕೊಳ್ಳುತ್ತಿದ್ದ. ಇದಕ್ಕಾಗಿ ನಕಲಿ ಐಡಿ ಕಾರ್ಡ್‌ಗಳನ್ನು ಸಿದ್ಧಪಡಿಸಿಕೊಂಡು, ತನ್ನ ನಂಬಿಕೆ ಮೂಡಿಸುತ್ತಿದ್ದ. ಇದೇ ನೆಪದಲ್ಲಿ ಹಲವಾರು ಮಹಿಳೆಯರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದನೆಂಬ ಆರೋಪ ಕೇಳಿಬಂದಿದೆ.

ಆದರೆ ಒಬ್ಬ ಮಹಿಳೆ ನೀಡಿದ ದೂರಿನಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ಗಂಡನಿಂದ ದೂರವಾಗಿದ್ದ ಆ ಮಹಿಳೆಯೊಂದಿಗೆ ಆರೋಪಿಯು ಪರಿಚಯ ಮಾಡಿಕೊಂಡು, ತಾನು ಲೆಕ್ಚರರ್ ಎಂದು ಹೇಳಿಕೊಂಡಿದ್ದ. “ನನಗೂ ವಿಚ್ಛೇದನವಾಗಿದೆ, ನಿನ್ನನ್ನು ಮದುವೆಯಾಗುತ್ತೇನೆ” ಎಂದು ನಂಬಿಸಿ, ಆಕೆಯೊಂದಿಗೆ ಶಾರೀರಿಕ ಸಂಪರ್ಕ ಹೊಂದಿದ್ದ. ಇದೇ ವೇಳೆ ಖಾಸಗಿ ಕ್ಷಣಗಳನ್ನು ಗುಪ್ತವಾಗಿ ದಾಖಲಿಸಿಕೊಂಡಿದ್ದಾನೆ. ನಂತರ ಆ ವಿಡಿಯೋಗಳನ್ನು ತೋರಿಸಿ ಬೆದರಿಸಿ, ಸುಮಾರು ಐದು ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದನೆಂದು ದೂರುದಲ್ಲಿ ಉಲ್ಲೇಖಿಸಲಾಗಿದೆ.

ಒಮ್ಮೆ ಆ ಮಹಿಳೆ ಆರೋಪಿಯ ಮೊಬೈಲ್ ಪರಿಶೀಲಿಸಿದಾಗ, ಹಲವು ಮಹಿಳೆಯರ ವಿಡಿಯೋ ಹಾಗೂ ಚಾಟ್‌ಗಳು ಪತ್ತೆಯಾಗಿದ್ದು, ಈತನ ದೌರ್ಜನ್ಯ ಬಯಲಾಗಿದೆ. ಇದರಿಂದ ಆ ಮಹಿಳೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಆರೋಪಿಯು ಆ ಮಹಿಳೆಯನ್ನು ನಿಜವಾಗಿ ಮದುವೆಯಾದಂತೆ ನಂಬಿಸಲು ಆಕೆಯ ಕೊರಳಿಗೆ ಅರಿಶಿನದ ಕೊಂಬನ್ನು ಕಟ್ಟಿದ್ದ. ಅಲ್ಲದೆ, ಆಕೆಯ ಆಧಾರ್ ಕಾರ್ಡ್‌ನ್ನು ಪಡೆದುಕೊಂಡು, ತಾನು ಆಕೆಯ ಗಂಡನೆಂದು ತೋರಿಸುವ ಪ್ರಯತ್ನ ಮಾಡಿದ್ದಾನೆ. ಮನೆಯ ಬಾಡಿಗೆ ಒಪ್ಪಂದದಲ್ಲಿಯೂ ತನ್ನನ್ನು ಗಂಡನೆಂದು ದಾಖಲಿಸಿಕೊಂಡಿದ್ದಾನೆ ಎನ್ನಲಾಗಿದೆ.

ಅಷ್ಟೇ ಅಲ್ಲದೆ, ತನ್ನ ತಾಯಿಯನ್ನು ಕೂಡ ಆ ಮಹಿಳೆಯ ಮನೆಗೆ ಕರೆತಂದು, ವರ್ಷಗಳ ಕಾಲ ಆಕೆಯಿಂದಲೇ ಆರೈಕೆ ಮಾಡಿಸಿಕೊಂಡಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇನ್ನೂ ಸಂತ್ರಸ್ತೆಯ ಮಗಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬದಲಾಯಿಸಲು ಯತ್ನಿಸಿದ ಆರೋಪ ಕೇಳಿ ಬಂದಿದೆ.

ಪೊಲೀಸರು ಆರೋಪಿಯನ್ನು ಬಂಧಿಸಿದ ನಂತರ ಅವನ ಮೊಬೈಲ್ ಪರಿಶೀಲನೆ ನಡೆಸಿದಾಗ, 20ಕ್ಕೂ ಹೆಚ್ಚು ಮಹಿಳೆಯರ ಫೋಟೋ ಮತ್ತು ವಿಡಿಯೋಗಳು ಪತ್ತೆಯಾಗಿವೆ.

Exit mobile version