ಕಾಂಗ್ರೆಸ್ ಮುಖಂಡನಿಂದ ಹಲ್ಲೆ ಆರೋಪ: ನ್ಯಾಯಕ್ಕಾಗಿ ಪ್ರಧಾನಿ ಮೋದಿಗೆ ಪತ್ರ ಬರೆದ ‘ಕೈ’ ನಾಯಕಿ

Untitled design 2026 03 17T111824.042

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಜಕೀಯ ವಲಯವನ್ನು ಬೆಚ್ಚಿಬೀಳಿಸುವಂತಹ ಘಟನೆ ನಡೆದಿದೆ. ತಮ್ಮದೇ ಪಕ್ಷದ ಮುಖಂಡನಿಂದ ಹಲ್ಲೆಗೊಳಗಾದ ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿಯೊಬ್ಬರು, ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಘಟನೆ ನಡೆದಿದೆ.

ಚಿಕ್ಕಮಗಳೂರು ನಗರದ ಕಾಂಗ್ರೆಸ್ ಮುಖಂಡೆ, ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಚೇತನಾ ಅವರು ತಮ್ಮ ಮೇಲೆ ಹಲ್ಲೆ ನಡೆಸಿದ ಆರೋಪಿ ರಾಹಿಲ್ ಷರೀಫ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವಾಲಯ ಮತ್ತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಚೇತನಾ ಅವರು ಕಾಂಗ್ರೆಸ್ ಪಕ್ಷದ ಮುಖಂಡ ರಾಹಿಲ್ ಷರೀಫ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಫೆಬ್ರವರಿ 28ರಂದು ರಾತ್ರಿ ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಿವಾಸಕ್ಕೆ ರಾಹಿಲ್ ಷರೀಫ್ ನುಗ್ಗಿ, ಚೇತನಾ ಮತ್ತು ಅವರ ಪತಿ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಘಟನೆಯ ವೇಳೆ ಮಚ್ಚಿನಿಂದ ದಾಳಿ ನಡೆಸಲಾಗಿದ್ದು, ಚೇತನಾ ಅವರ ಪತಿಯ ಕೈಗೆ ಗಾಯಗಳಾಗಿವೆ ಎಂದು ಹೇಳಲಾಗಿದೆ.

ಘಟನೆಯ ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದರೂ, ಪ್ರಕರಣದಲ್ಲಿ ಸಮರ್ಪಕ ತನಿಖೆ ನಡೆಯುತ್ತಿಲ್ಲ ಎಂಬ ಆರೋಪವನ್ನು ಚೇತನಾ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಪ್ರಧಾನಿಗೆ ಪತ್ರ ಬರೆದು, ಕೇಂದ್ರ ಮಟ್ಟದಲ್ಲಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ತಮ್ಮ ಕುಟುಂಬದ ಸುರಕ್ಷತೆಗಾಗಿ ತಕ್ಷಣ ರಕ್ಷಣೆಯನ್ನು ಒದಗಿಸುವಂತೆ ಕೂಡ ಮನವಿ ಮಾಡಿದ್ದಾರೆ.

ರಾಹಿಲ್ ಷರೀಫ್ ಅವರ ಮೊಬೈಲ್‌ನಲ್ಲಿ ಕೆಲವು ಮಹಿಳೆಯರ ಅಶ್ಲೀಲ ವಿಡಿಯೋಗಳು ಮತ್ತು ಫೋಟೋಗಳು ಇದ್ದವೆ ಎಂಬ ಗಂಭೀರ ಆರೋಪವನ್ನು ಚೇತನಾ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕೆಲವು ಹಿಂದೂ ಯುವತಿಯರನ್ನು ಗುರಿಯಾಗಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. “ಲವ್ ಜಿಹಾದ್” ಸಂಬಂಧಿತ ಚಟುವಟಿಕೆಗಳಲ್ಲಿಯೂ ಆತ ತೊಡಗಿದ್ದಾನೆ ಎಂದು ಚೇತನಾ ಆರೋಪಿಸಿದ್ದಾರೆ.

ರಾಹಿಲ್ ಷರೀಫ್ ಅವರು ಚೇತನಾ ಅವರಿಗೆ ಸೇರಿದ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು ಎನ್ನಲಾಗಿದೆ. ಆ ಅಪಾರ್ಟ್‌ಮೆಂಟ್‌ನಲ್ಲಿ ಮಹಿಳೆಯೊಂದಿಗಿನ ಅವರ ಫೋಟೋಗಳು ವೈರಲ್ ಆದ ನಂತರ, ಆ ಫೋಟೋಗಳನ್ನು ಚೇತನಾ ಅವರೇ ಹಂಚಿಕೊಂಡಿದ್ದಾರೆ ಎಂಬ ಅನುಮಾನದಿಂದ ಕೋಪಗೊಂಡು ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಚೇತನಾ ಅವರು ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ, ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಹೇಳಿದ್ದಾರೆ. ಇದೇ ಕಾರಣಕ್ಕೆ ಅವರು ಪ್ರಧಾನಿ ಕಚೇರಿ, ಕೇಂದ್ರ ಸಚಿವಾಲಯ ಮತ್ತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೂ ಪತ್ರಗಳನ್ನು ರವಾನಿಸಿದ್ದಾರೆ.

Exit mobile version