ಚೆನ್ನೈ, ಆಗಸ್ಟ್ 20: ಕಾವೇರಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಮತ್ತೆ ಚರ್ಚೆ ತೀವ್ರವಾಗಿರುವ ಬೆನ್ನಲ್ಲೇ, ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರನ್ನು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭೇಟಿ ಮಾಡಲಿದ್ದಾರೆ. ಆಗಸ್ಟ್ 20ರಂದು ಚೆನ್ನೈ ಹೊರವಲಯದ ಕೋವಲಂನಲ್ಲಿ ನಡೆಯಲಿರುವ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮೇಳನದ ಬಳಿಕ ಇಬ್ಬರೂ ನಾಯಕರು ಪ್ರತ್ಯೇಕವಾಗಿ ಭೇಟಿಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಈ ಭೇಟಿ ನಡೆದರೆ ಕಾವೇರಿ ನೀರು ಹಂಚಿಕೆ ಹಾಗೂ ಕರ್ನಾಟಕದ ಮೇಕೆದಾಟು ಯೋಜನೆ ಪ್ರಮುಖ ಚರ್ಚೆಯ ವಿಷಯವಾಗುವ ನಿರೀಕ್ಷೆ ಇದೆ.
ದಕ್ಷಿಣ ಭಾರತದ ರಾಜ್ಯಗಳ ನಡುವೆ ಹಲವು ಪ್ರಮುಖ ವಿಚಾರಗಳ ಕುರಿತು ಸಮಾಲೋಚನೆ ನಡೆಸಲು ಈ ಸಮ್ಮೇಳನ ಆಯೋಜಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ದಕ್ಷಿಣ ಭಾರತದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮತ್ತು ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಿಗೆ ಸಂಬಂಧಿಸಿದ ಅಭಿವೃದ್ಧಿ, ಆಡಳಿತ ಹಾಗೂ ಅಂತರರಾಜ್ಯ ಸಮಸ್ಯೆಗಳು ಸಭೆಯಲ್ಲಿ ಚರ್ಚೆಯಾಗಲಿವೆ.
ಅಂತರರಾಜ್ಯ ನದಿ ನೀರು ಹಂಚಿಕೆ, ಗಡಿ ಸಮಸ್ಯೆಗಳು, ಕಾನೂನು ಮತ್ತು ಸುವ್ಯವಸ್ಥೆ, ಅಭಿವೃದ್ಧಿ ಯೋಜನೆಗಳು ಹಾಗೂ ಕ್ಷೇತ್ರ ಪುನರ್ವಿಂಗಡಣೆ ವಿಚಾರಗಳು ಸಮ್ಮೇಳನದ ಪ್ರಮುಖ ಅಜೆಂಡಾದಲ್ಲಿವೆ ಎನ್ನಲಾಗಿದೆ. ಕ್ಷೇತ್ರ ಪುನರ್ವಿಂಗಡಣೆ ಕುರಿತು ದಕ್ಷಿಣ ರಾಜ್ಯಗಳು ಈಗಾಗಲೇ ತಮ್ಮ ಆತಂಕವನ್ನು ವ್ಯಕ್ತಪಡಿಸಿರುವುದರಿಂದ, ಈ ಸಭೆ ರಾಜಕೀಯವಾಗಿಯೂ ಮಹತ್ವ ಪಡೆದಿದೆ.
ಕಾವೇರಿ, ಮೇಕೆದಾಟು ಕುರಿತು ಚರ್ಚೆ?
ಸಮ್ಮೇಳನ ಮುಗಿದ ಬಳಿಕ ಆಗಸ್ಟ್ 20ರ ಸಂಜೆ ವಿಜಯ್ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಪ್ರತ್ಯೇಕ ಭೇಟಿ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಭೇಟಿ ಖಚಿತವಾದರೆ, ಬಹುಕಾಲದಿಂದ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ವಿವಾದಕ್ಕೆ ಕಾರಣವಾಗಿರುವ ಕಾವೇರಿ ನೀರು ಹಂಚಿಕೆ ವಿಚಾರದ ಬಗ್ಗೆ ಇಬ್ಬರು ನಾಯಕರು ಮಾತುಕತೆ ನಡೆಸುವ ಅವಕಾಶ ಸಿಗಲಿದೆ.
ಇದರ ಜೊತೆಗೆ ಕರ್ನಾಟಕದ ಮಹತ್ವಾಕಾಂಕ್ಷೆಯ ಮೇಕೆದಾಟು ಅಣೆಕಟ್ಟು ಯೋಜನೆಯೂ ಚರ್ಚೆಗೆ ಬರುವ ಸಾಧ್ಯತೆ ಇದೆ. ಬೆಂಗಳೂರಿಗೆ ಕುಡಿಯುವ ನೀರು ಸೇರಿದಂತೆ ಕರ್ನಾಟಕದ ನೀರಿನ ಅಗತ್ಯಗಳನ್ನು ಪೂರೈಸುವ ದೃಷ್ಟಿಯಿಂದ ಮೇಕೆದಾಟು ಯೋಜನೆ ಅತ್ಯಂತ ಪ್ರಮುಖವಾಗಿದೆ ಎಂದು ಕರ್ನಾಟಕ ಸರ್ಕಾರ ಹಲವು ಬಾರಿ ಪ್ರತಿಪಾದಿಸಿದೆ. ಆದರೆ ತಮಿಳುನಾಡು ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ.
ಕಾವೇರಿ ನದಿ ನೀರು ಹಂಚಿಕೆ ವಿಚಾರವು ಎರಡೂ ರಾಜ್ಯಗಳ ನಡುವೆ ದಶಕಗಳಿಂದ ಸೂಕ್ಷ್ಮ ರಾಜಕೀಯ ಮತ್ತು ಕಾನೂನು ವಿಚಾರವಾಗಿ ಮುಂದುವರಿದಿದೆ. ಹೀಗಾಗಿ ಉಭಯ ರಾಜ್ಯಗಳ ಪ್ರಮುಖ ರಾಜಕೀಯ ನಾಯಕರ ನಡುವಿನ ಯಾವುದೇ ಮಾತುಕತೆಗೂ ಹೆಚ್ಚಿನ ಮಹತ್ವ ಸಿಗಲಿದೆ.
ಕರ್ನಾಟಕಕ್ಕೆ ಬರಬೇಕಿದ್ದ ವಿಜಯ್
ಕಾವೇರಿ ವಿಚಾರವಾಗಿ ಚರ್ಚಿಸಲು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಈ ಹಿಂದೆ ಕರ್ನಾಟಕಕ್ಕೆ ಭೇಟಿ ನೀಡುವ ಯೋಜನೆ ಹೊಂದಿದ್ದರು ಎನ್ನಲಾಗಿದೆ. ಆದರೆ ಈ ಭೇಟಿಗೆ ಕರ್ನಾಟಕದ ಕೆಲವು ರಾಜಕೀಯ ನಾಯಕರಿಂದ ವಿರೋಧ ವ್ಯಕ್ತವಾಗಿತ್ತು. ಬಳಿಕ ಡಿ.ಕೆ. ಶಿವಕುಮಾರ್ ಕೂಡ ವಿಜಯ್ ಅವರು ಕರ್ನಾಟಕಕ್ಕೆ ಭೇಟಿ ನೀಡುವ ಬದಲು ಬೇರೆ ರೀತಿಯಲ್ಲಿ ಮಾತುಕತೆ ನಡೆಸುವುದು ಸೂಕ್ತ ಎಂಬ ಸಲಹೆ ನೀಡಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಇದೀಗ ಇಬ್ಬರೂ ನಾಯಕರು ಚೆನ್ನೈನಲ್ಲೇ ಭೇಟಿಯಾಗುವ ಸಾಧ್ಯತೆ ಕುತೂಹಲ ಮೂಡಿಸಿದೆ. ಭೇಟಿ ನಡೆದರೆ, ಕಾವೇರಿ ನೀರು ಹಂಚಿಕೆ ಹಾಗೂ ಮೇಕೆದಾಟು ಯೋಜನೆ ಕುರಿತು ಕರ್ನಾಟಕ ಮತ್ತು ತಮಿಳುನಾಡಿನ ನಿಲುವುಗಳನ್ನು ನೇರವಾಗಿ ಚರ್ಚಿಸಲು ಅವಕಾಶ ಸಿಗಬಹುದು.
ದಕ್ಷಿಣ ರಾಜ್ಯಗಳ ಸಭೆಗೆ ಮಹತ್ವ
ಅಮಿತ್ ಶಾ ನೇತೃತ್ವದಲ್ಲಿ ನಡೆಯಲಿರುವ ದಕ್ಷಿಣ ರಾಜ್ಯಗಳ ಸಮ್ಮೇಳನವು ಹಲವು ಕಾರಣಗಳಿಂದ ಗಮನ ಸೆಳೆದಿದೆ. ಅಂತರರಾಜ್ಯ ಸಮಸ್ಯೆಗಳ ಜೊತೆಗೆ ದಕ್ಷಿಣ ಭಾರತದ ಅಭಿವೃದ್ಧಿ, ಮೂಲಸೌಕರ್ಯ, ಆಡಳಿತಾತ್ಮಕ ಸವಾಲುಗಳು ಮತ್ತು ಕ್ಷೇತ್ರ ಪುನರ್ವಿಂಗಡಣೆ ಕುರಿತ ವಿಚಾರಗಳೂ ಚರ್ಚೆಯಾಗುವ ಸಾಧ್ಯತೆ ಇದೆ.
