ಕಾವೇರಿ ವಿವಾದ: ಆ.13ರ ಕರ್ನಾಟಕ ಬಂದ್‌ ಕೈಬಿಡುವ ಪ್ರಶ್ನೆಯೇ ಇಲ್ಲ: ವಾಟಾಳ್‌ ನಾಗರಾಜ್‌

ಬಲಿಷ್ಠ (46)

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ ಆಗಸ್ಟ್‌ 13ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್‌ ಕುರಿತು ಗೊಂದಲ ಮುಂದುವರಿದಿದೆ. ರಾಜ್ಯದಲ್ಲಿ ಇತ್ತೀಚೆಗೆ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಸಂಘಟನೆಗಳು ಬಂದ್‌ಗೆ ನೀಡಿದ್ದ ಬೆಂಬಲವನ್ನು ಹಿಂಪಡೆಯುತ್ತಿರುವ ಮಾತುಗಳು ಕೇಳಿಬಂದಿವೆ. ಹೀಗಾಗಿ ಆಗಸ್ಟ್‌ 13ರ ಬಂದ್‌ ಬಹುತೇಕ ರದ್ದಾಗುವ ಸಾಧ್ಯತೆ ಇದೆ ಎಂಬ ಚರ್ಚೆಯೂ ನಡೆದಿತ್ತು. ಆದರೆ ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಅವರು ಮಾತ್ರ ಬಂದ್‌ ವಿಚಾರದಲ್ಲಿ ತಮ್ಮ ನಿಲುವು ಬದಲಿಸಿಲ್ಲ.

ಬೆಂಗಳೂರಿನಲ್ಲಿ  ಮಾತನಾಡಿದ ವಾಟಾಳ್‌ ನಾಗರಾಜ್‌, ಆಗಸ್ಟ್‌ 13ರಂದು ಕರ್ನಾಟಕ ಬಂದ್‌ ನಡೆಯುವುದು ಖಚಿತ ಎಂದು ಹೇಳಿದ್ದಾರೆ. ‘ಬಂದ್‌ ಕೈಬಿಡುವ ಪ್ರಶ್ನೆಯೇ ಇಲ್ಲ, ಬಂದ್‌ ಮಾಡೇ ಮಾಡುತ್ತೇವೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರಾಜ್ಯದಾದ್ಯಂತ ಬಂದ್‌ಗೆ ವ್ಯಾಪಕ ಬೆಂಬಲವಿದೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ.

2 ಸಾವಿರಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ

ಕರ್ನಾಟಕ ಬಂದ್‌ಗೆ ರಾಜ್ಯದ ಉದ್ದಗಲಕ್ಕೂ ಬೆಂಬಲ ವ್ಯಕ್ತವಾಗುತ್ತಿದೆ. 2 ಸಾವಿರಕ್ಕೂ ಹೆಚ್ಚು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ ಎಂದು ವಾಟಾಳ್‌ ನಾಗರಾಜ್‌ ತಿಳಿಸಿದ್ದಾರೆ. ವಿದ್ಯಾರ್ಥಿಗಳಿಂದಲೂ  ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದ್ದಾರೆ.

‘ನಮ್ಮ ಬೇಡಿಕೆಗಳಿಗಾಗಿ ಬಂದ್‌ ನಡೆಸಿದರೆ ಅದರ ಶಕ್ತಿಯೇ ಬೇರೆ. ಕರ್ನಾಟಕದ ಉದ್ದಗಲಕ್ಕೂ ಬಂದ್‌ಗೆ ಬೆಂಬಲವಿದೆ. ಬಂದ್‌ ಬೇಡ ಎಂದು ನನ್ನ ಬಳಿ ಯಾರೂ ಹೇಳಿಲ್ಲ. ಎಲ್ಲರೂ ಬಂದ್‌ ಮಾಡಬೇಕು ಎಂದೇ ಹೇಳಿದ್ದಾರೆ’ ಎಂದು ವಾಟಾಳ್‌ ನಾಗರಾಜ್‌ ಹೇಳಿದ್ದಾರೆ.

ಇದೇ ವೇಳೆ ಕನ್ನಡ ಒಕ್ಕೂಟದಲ್ಲಿ ಯಾವುದೇ ರೀತಿಯ ಬಿರುಕು ಮೂಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಂಘಟನೆಗಳ ನಡುವೆ ಒಗ್ಗಟ್ಟು ಮುಂದುವರಿದಿದೆ ಎಂದು ಹೇಳಿದ್ದಾರೆ. ‘ಬಿರುಕು ಮೂಡಿದೆ ಎಂದರೆ ಸಿಮೆಂಟ್‌ ಹಾಕಿ ಸರಿ ಮಾಡುತ್ತೇವೆ’ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

‘ಮಳೆ ಬಂದು ಯಾವ ಡ್ಯಾಂ ತುಂಬಿದೆ?’

ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಬಂದ್‌ ಕೈಬಿಡಬೇಕು ಎಂಬ ವಾದಗಳಿಗೂ ವಾಟಾಳ್‌ ನಾಗರಾಜ್‌ ತಿರುಗೇಟು ನೀಡಿದ್ದಾರೆ. ‘ಮಳೆ ಬಂದು ಯಾವ ಡ್ಯಾಂ ತುಂಬಿದೆ? ಕೆಆರ್‌ಎಸ್‌ ಡ್ಯಾಂ ಇನ್ನೂ ತುಂಬಿಲ್ಲ’ ಎಂದು ಅವರು ಪ್ರಶ್ನಿಸಿದ್ದಾರೆ.

ಕಾವೇರಿ ನೀರಿನ ವಿಚಾರದಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾದರೆ ಮೇಕೆದಾಟು ಯೋಜನೆ ಅನುಷ್ಠಾನಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ‘ಮೇಕೆದಾಟು ಯೋಜನೆಗಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪಾದಯಾತ್ರೆ ನಡೆಸಿದ್ದರು. ಹಾಗಾದರೆ ಈವರೆಗೆ ಮೇಕೆದಾಟು ಯೋಜನೆಯನ್ನು ಏಕೆ ಜಾರಿಗೆ ತರಲಾಗಿಲ್ಲ?’ ಎಂದು ಪ್ರಶ್ನಿಸಿದ್ದಾರೆ.

‘ಭವಿಷ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ’

ಮೇಕೆದಾಟು ಯೋಜನೆ ಜಾರಿಯಾಗದಿದ್ದರೆ ಭವಿಷ್ಯದಲ್ಲಿ ಬೆಂಗಳೂರಿನಲ್ಲಿ ವಾಸಿಸುವ ಪ್ರತಿಯೊಬ್ಬರೂ ಕುಡಿಯುವ ನೀರಿನ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ವಾಟಾಳ್‌ ನಾಗರಾಜ್‌ ಎಚ್ಚರಿಸಿದ್ದಾರೆ. ಬೆಂಗಳೂರಿನಲ್ಲಿ ವಾಸಿಸುವ ತಮಿಳರು, ತೆಲುಗರು, ಮಲಯಾಳಿಗಳು ಸೇರಿದಂತೆ ಎಲ್ಲ ಭಾಷಿಕರಿಗೂ ನೀರಿನ ಸಮಸ್ಯೆ ಎದುರಾಗಬಹುದು ಎಂದು ಹೇಳಿದ್ದಾರೆ.

ಆಗಸ್ಟ್‌ 13ರಂದು ನಡೆಯಲಿರುವ ಕರ್ನಾಟಕ ಬಂದ್‌ಗೆ ಸರ್ವ ಭಾಷಿಕರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದ ವಾಟಾಳ್‌ ನಾಗರಾಜ್‌, ಪ್ರತಿಯೊಬ್ಬರೂ ಬೀದಿಗಿಳಿದು ಹೋರಾಟಕ್ಕೆ ಕೈಜೋಡಿಸಬೇಕು. ಮನೆ-ಮನೆಯಿಂದ ಈಡುಗಾಯಿ ಹೊಡೆದು ಬಂದ್‌ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದ್ದಾರೆ.

Exit mobile version