ಬೆಂಗಳೂರು, ಮೇ 28: ಕರ್ನಾಟಕದ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಪ್ರಕ್ರಿಯೆ ಬಿರುಸುಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರಾಜೀನಾಮೆ ನೀಡಲಿದ್ದಾರೆ. ಆದರೆ, ಇದೇ ಹೊತ್ತಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ದಿಢೀರ್ ಮುಂಬೈಗೆ ಪ್ರಯಾಣ ಬೆಳೆಸಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ರಾಜ್ಯಪಾಲರು ಬೆಂಗಳೂರಿನಲ್ಲಿ ಇಲ್ಲದ ಈ ಸಮಯದಲ್ಲಿ ಮುಖ್ಯಮಂತ್ರಿಗಳು ಅವರ ಹಾಜರಾತಿ ಇಲ್ಲದೆಯೇ ಅಧಿಕೃತವಾಗಿ ರಾಜೀನಾಮೆ ನೀಡಬಹುದೇ? ಎಂಬ ಕಾನೂನಾತ್ಮಕ ಪ್ರಶ್ನೆಗಳು ಈಗ ಎದ್ದಿವೆ.
ಸಾಂವಿಧಾನಿಕ ನಿಯಮಗಳ ಪ್ರಕಾರ, ಮುಖ್ಯಮಂತ್ರಿ ರಾಜೀನಾಮೆ ನೀಡಲು ರಾಜ್ಯಪಾಲರು ಭೌತಿಕವಾಗಿ ಎದುರಲ್ಲೇ ಇರಬೇಕು ಎಂಬ ಯಾವುದೇ ಕಡ್ಡಾಯ ನಿಯಮ ಇಲ್ಲ. ಮುಖ್ಯಮಂತ್ರಿ ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರನ್ನು ಉದ್ದೇಶಿಸಿ ಬರೆದು ಅಧಿಕೃತ ಸರ್ಕಾರಿ ಚಾನೆಲ್‌ಗಳ ಮೂಲಕ ಕಳುಹಿಸಬಹುದು. ಸಾಮಾನ್ಯವಾಗಿ ಮುಖ್ಯಮಂತ್ರಿ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ನೇರವಾಗಿ ಭೇಟಿಯಾಗಿ ರಾಜೀನಾಮೆ ಪತ್ರ ಹಸ್ತಾಂತರಿಸುವುದು ರಾಜಕೀಯ ಸಂಪ್ರದಾಯವಾಗಿದೆ. ಆದರೆ, ಅದು ಕಾನೂನುಬದ್ಧ ಕಡ್ಡಾಯವಲ್ಲ.
ಭಾರತೀಯ ಸಂವಿಧಾನದ ವಿಧಿ 164(1) ಪ್ರಕಾರ, ರಾಜ್ಯಪಾಲರು ಮುಖ್ಯಮಂತ್ರಿಯನ್ನು ನೇಮಕ ಮಾಡುತ್ತಾರೆ ಹಾಗೂ ಸಚಿವ ಸಂಪುಟ ರಾಜ್ಯಪಾಲರ ಇಚ್ಛೆಯ ಮೇರೆಗೆ ಅಧಿಕಾರದಲ್ಲಿ ಮುಂದುವರಿಯುತ್ತದೆ. ಹೀಗಾಗಿ ಮುಖ್ಯಮಂತ್ರಿ ಕಳುಹಿಸುವ ರಾಜೀನಾಮೆ ಪತ್ರವನ್ನು ರಾಜ್ಯಪಾಲರು ಅಧಿಕೃತವಾಗಿ ಅಂಗೀಕರಿಸಿದ ಬಳಿಕವೇ ರಾಜೀನಾಮೆ ಜಾರಿಗೆ ಬಂದಂತೆ ಪರಿಗಣಿಸಲಾಗುತ್ತದೆ.
ರಾಜಕೀಯ ಮೂಲಗಳ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನ 2:30ರಿಂದ 3 ಗಂಟೆಯೊಳಗೆ ರಾಜಭವನಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ರಾಜ್ಯಪಾಲರು ಬೆಂಗಳೂರಿನಲ್ಲಿ ಇಲ್ಲದ ಕಾರಣ, ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ಕಾರ್ಯದರ್ಶಿಗೆ ಹಸ್ತಾಂತರಿಸುವ ಸಾಧ್ಯತೆ ಹೆಚ್ಚಿದೆ. ಬಳಿಕ ಕಾರ್ಯದರ್ಶಿಯ ಮೂಲಕ ಆ ಪತ್ರ ರಾಜ್ಯಪಾಲರಿಗೆ ರವಾನೆಯಾಗಲಿದೆ ಎಂದು ತಿಳಿದುಬಂದಿದೆ.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಂಜೆ ದೆಹಲಿಗೆ ತೆರಳಲಿದ್ದಾರೆ ಎಂಬ ಮಾಹಿತಿಯೂ ಹೊರಬಿದ್ದಿದೆ. ಅಧಿಕೃತ ಕಾರ್ಯಕ್ರಮ ಘೋಷಣೆಯಾಗದಿದ್ದರೂ, ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಮುಂದಿನ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮಾಡಿ ಧನ್ಯವಾದ ತಿಳಿಸುವ ಉದ್ದೇಶವೂ ಈ ಭೇಟಿಯ ಹಿಂದೆ ಇದೆ ಎಂದು ಮೂಲಗಳು ಹೇಳುತ್ತಿವೆ.
ರಾಜ್ಯಪಾಲರ ಅನುಪಸ್ಥಿತಿಯಿಂದ ತಕ್ಷಣದ ರಾಜಕೀಯ ಪ್ರಕ್ರಿಯೆಗಳು ನಿಧಾನಗೊಳ್ಳುವ ಸಾಧ್ಯತೆ ಇದೆ. ಹೊಸ ಮುಖ್ಯಮಂತ್ರಿ ಆಯ್ಕೆ, ಸರ್ಕಾರ ರಚನೆ ಹಾಗೂ ಪ್ರಮಾಣ ವಚನ ಸ್ವೀಕಾರದಂತಹ ಪ್ರಮುಖ ಕ್ರಮಗಳು ರಾಜ್ಯಪಾಲರ ಅಧಿಕೃತ ಅನುಮೋದನೆ ಬಳಿಕವೇ ನಡೆಯಬೇಕಾಗುತ್ತದೆ. ಹೀಗಾಗಿ ರಾಜ್ಯಪಾಲರು ಮರಳಿ ಬೆಂಗಳೂರಿಗೆ ಆಗಮಿಸುವವರೆಗೂ ಯಾವುದೇ ತ್ವರಿತ ನಿರ್ಧಾರ ಸಾಧ್ಯವಾಗುವುದಿಲ್ಲ ಎನ್ನಲಾಗುತ್ತಿದೆ.
ಆದರೆ ಈ ಮಧ್ಯಂತರ ಅವಧಿಯನ್ನು ಕಾಂಗ್ರೆಸ್ ಹೈಕಮಾಂಡ್ ರಾಜಕೀಯ ಸಮಾಲೋಚನೆಗಳಿಗೆ ಬಳಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲ ಈಗಾಗಲೇ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಹೈಕಮಾಂಡ್ ಅಂತಿಮ ತೀರ್ಮಾನಕ್ಕೆ ಬರಲು ಹಲವು ಸುತ್ತಿನ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.
