“ನಾನು ಆತ್ಮಹ**ತ್ಯೆಗೆ ಶರಣಾದರೆ ಐಟಿ ಅಧಿಕಾರಿಗಳೇ ಹೊಣೆ”: ಕೆಜಿಎಫ್ ಬಾಬು

Untitled design 2026 02 03T124123.969

ಬೆಂಗಳೂರು: ಖ್ಯಾತ ಉದ್ಯಮಿ ಸಿ.ಜೆ. ರಾಯ್ ಅವರ ಸಾವಿನ ಬೆನ್ನಲ್ಲೇ ರಾಜ್ಯದ ಉದ್ಯಮ ವಲಯದಲ್ಲಿ ಆತಂಕ ಹೆಚ್ಚಾಗುತ್ತಿರುವ ನಡುವೆ, ಇದೀಗ ಮತ್ತೊಬ್ಬ ಪ್ರಭಾವಿ ಉದ್ಯಮಿ ಕೆಜಿಎಫ್ ಬಾಬು ಆದಾಯ ತೆರಿಗೆ (ಐಟಿ) ಇಲಾಖೆಯ ವಿರುದ್ಧ ಗಂಭೀರ ಹಾಗೂ ಸ್ಪೋಟಕ ಆರೋಪಗಳನ್ನು ಹೊರಡಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ತಮ್ಮ ಮನಸ್ಸಿನ ನೋವು, ಭಯ ಮತ್ತು ಒತ್ತಡವನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ.

“ನಾನು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಐಟಿ ಅಧಿಕಾರಿಗಳೇ ನೇರವಾಗಿ ಹೊಣೆ” ಎಂದು ಕೆಜಿಎಫ್ ಬಾಬು ಅವರು ಹೇಳಿದ್ದಾರೆ. ಐಟಿ ಇಲಾಖೆಯಿಂದ ನಿರಂತರವಾಗಿ ನೋಟಿಸ್‌ಗಳು, ವಿಚಾರಣೆಗಳು ಹಾಗೂ ಮಾನಸಿಕ ಒತ್ತಡ ಎದುರಿಸುತ್ತಿರುವುದಾಗಿ ಅವರು ದೂರಿದ್ದಾರೆ.

“ನಾನು ಸಾವಿರಾರು ಕೋಟಿ ರೂಪಾಯಿಗಳ ಆಸ್ತಿ ಹೊಂದಿರುವ ಉದ್ಯಮಿಯಾಗಿರಬಹುದು. ಆದರೆ ಹಣ ಇದ್ದರೆ ನೆಮ್ಮದಿ ಇಲ್ಲ. ಕಳೆದ ಕೆಲ ತಿಂಗಳುಗಳಿಂದ ನನಗೆ ಜೀವನವೇ ಬೇಸರವಾಗುವ ಮಟ್ಟಿಗೆ ಐಟಿ ಅಧಿಕಾರಿಗಳ ವರ್ತನೆ ನನ್ನನ್ನು ಮಾನಸಿಕವಾಗಿ ಕುಗ್ಗಿಸಿದೆ,” ಎಂದು ಅವರು ಬೇಸರ ವ್ಯಕ್ತಪಡಿಸಿದರು. ತನಿಖೆಯ ಹೆಸರಿನಲ್ಲಿ ಅನಗತ್ಯ ಕಿರುಕುಳ ನೀಡಲಾಗುತ್ತಿದೆ, ಅಧಿಕಾರಿಗಳ ವರ್ತನೆ ಚಿತ್ರಹಿಂಸೆಯಂತಿದೆ ಎಂದು ಆರೋಪಿಸಿದರು.

ಇನ್ನೂ ಮಾತನಾಡಿದ ಅವರು, “ಈ ಹಿಂದೆ ನಾನು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಸು ಆಗಿತ್ತು. ಆದರೆ ನನ್ನ ಹೆಂಡತಿ ಮತ್ತು ಮಕ್ಕಳ ಮುಖ ನೋಡಿ ಆ ನಿರ್ಧಾರದಿಂದ ಹಿಂದೆ ಸರಿದೆ. ಆದರೆ ಇದೇ ಒತ್ತಡ ಮುಂದುವರಿದರೆ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ,” ಎಂದು ತಮ್ಮ ಮನಸ್ಥಿತಿಯನ್ನು ಬಹಿರಂಗಪಡಿಸಿದರು.

ಕೆಜಿಎಫ್ ಬಾಬು ತಮ್ಮ ಹೇಳಿಕೆಯಲ್ಲಿ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಅವರ ಆತ್ಮಹತ್ಯೆ ಪ್ರಕರಣ ಹಾಗೂ ಇತ್ತೀಚೆಗೆ ನಿಧನರಾದ ಉದ್ಯಮಿ ಸಿ.ಜೆ. ರಾಯ್ ಅವರ ಸಾವಿನ ವಿಚಾರವನ್ನು ಪ್ರಸ್ತಾಪಿಸಿದರು. “ಸಿದ್ಧಾರ್ಥ್ ಅವರ ಸಾವಿನ ಸಮಯದಲ್ಲಿಯೂ ಐಟಿ ಇಲಾಖೆಯ ಒತ್ತಡದ ಮಾತುಗಳು ಕೇಳಿಬಂದಿದ್ದವು. ಇತ್ತೀಚೆಗೆ ಸಿ.ಜೆ. ರಾಯ್ ಅವರ ಸಾವಿನ ಹಿಂದೆಯೂ ಇದೇ ಮಾದರಿಯ ಒತ್ತಡ ಇತ್ತು ಎಂಬ ಮಾತುಗಳು ಹರಿದಾಡುತ್ತಿವೆ. ನನ್ನ ಮೇಲೂ ಇದೇ ರೀತಿ ಭೀತಿ ಇದೆ ಎಂದು ಹೇಳಿಕೆ ನೀಡಿದ್ದಾರೆ..

“ಐಟಿ ಇಲಾಖೆಯ ಕೆಲ ಅಧಿಕಾರಿಗಳು ಅಧಿಕಾರದ ದುರುಪಯೋಗ ಮಾಡುತ್ತಿದ್ದಾರೆ. ಉದ್ಯಮಿಗಳನ್ನು ಅಪರಾಧಿಗಳಂತೆ ನಡೆಸಿಕೊಳ್ಳಲಾಗುತ್ತಿದೆ. ಇದರಿಂದ ಉದ್ಯಮ ವಾತಾವರಣಕ್ಕೆ ಭಾರೀ ಹಾನಿಯಾಗುತ್ತಿದೆ,” ಎಂದು ಅವರು ಕಿಡಿಕಾರಿದರು. ಇಂತಹ ವರ್ತನೆಯಿಂದ ಉದ್ಯಮಿಗಳು ಭಯದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಆರ್ಥಿಕ ಅಭಿವೃದ್ಧಿಗೂ ಅಪಾಯಕಾರಿಯಾಗಿದೆ ಎಂದು ಎಚ್ಚರಿಸಿದರು.

ಒಂದು ವೇಳೆ ತನಗೆ ಏನಾದರೂ ಅನಾಹುತ ಸಂಭವಿಸಿದರೆ, ಅದರ ಸಂಪೂರ್ಣ ಹೊಣೆಗಾರಿಕೆ ಐಟಿ ಅಧಿಕಾರಿಗಳು ಹೊಣೆ ಎಂದು ಸ್ಪಷ್ಟವಾಗಿ ಹೇಳಿದ ಕೆಜಿಎಫ್ ಬಾಬು, ಈ ವಿಷಯದಲ್ಲಿ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು. “ಐಟಿ ಇಲಾಖೆಯ ಕಾರ್ಯವೈಖರಿಯ ಕುರಿತು ಉನ್ನತ ಮಟ್ಟದ, ಸ್ವತಂತ್ರ ತನಿಖೆ ನಡೆಯಬೇಕು. ಅಧಿಕಾರಿಗಳ ವರ್ತನೆಗೆ ಸ್ಪಷ್ಟ ಮಾರ್ಗಸೂಚಿಗಳು ಅಗತ್ಯ,” ಎಂದು ಅವರು ಹೇಳಿದರು.

ಉದ್ಯಮಿಗಳ ಮೇಲೆ ನಡೆಯುತ್ತಿರುವ ನಿರಂತರ ದಾಳಿ, ನೋಟಿಸ್‌ಗಳು ಹಾಗೂ ಮಾನಸಿಕ ಒತ್ತಡಗಳು ಜೀವಕ್ಕೆ ಕುತ್ತು ತರುತ್ತಿವೆ ಎಂದು ಎಚ್ಚರಿಸಿದ ಅವರು, “ಉದ್ಯಮಿಗಳನ್ನು ರಕ್ಷಿಸುವುದು ಸರ್ಕಾರದ ಹೊಣೆ. ಇಲ್ಲವಾದರೆ ಮುಂದೆ ಇನ್ನಷ್ಟು ದುರ್ಘಟನೆಗಳು ನಡೆಯಬಹುದು,” ಎಂದು ಆತಂಕ ವ್ಯಕ್ತಪಡಿಸಿದರು.

Exit mobile version