ಬೆಂಗಳೂರು: ಕರ್ನಾಟಕ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದೊಳಗಿನ ಸಮನ್ವಯದ ಕೊರತೆ ಮತ್ತೊಮ್ಮೆ ಬಹಿರಂಗವಾಗಿದ್ದು, ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಪಾದಯಾತ್ರೆ ನಡೆಸುವ ವಿಚಾರದಲ್ಲಿ ಉಭಯ ಪಕ್ಷಗಳ ನಡುವೆ ಗೊಂದಲ ಸೃಷ್ಟಿಯಾಗಿದೆ. ರಾಜ್ಯ ಬಿಜೆಪಿಯಲ್ಲಿ ಈಗಾಗಲೇ ಆಂತರಿಕ ಭಿನ್ನಾಭಿಪ್ರಾಯ, ಬಣ ರಾಜಕೀಯ ಹಾಗೂ ನಾಯಕತ್ವದ ಗೊಂದಲ ಮುಂದುವರಿದಿರುವ ಬೆನ್ನಲ್ಲೇ, ಈ ಬೆಳವಣಿಗೆ ಮೈತ್ರಿ ರಾಜಕೀಯದ ಬಗ್ಗೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಹೋರಾಟ ನಡೆಸುವುದಾಗಿ ಬಿಜೆಪಿ ಈ ಹಿಂದೆ ಘೋಷಿಸಿತ್ತು. ಈ ಸಂಬಂಧ ಜೆಡಿಎಸ್ ನಾಯಕರೊಂದಿಗೆ ಚರ್ಚಿಸಿ ಪಾದಯಾತ್ರೆಯ ದಿನಾಂಕ ನಿಗದಿಪಡಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದರು. ಆದರೆ, ಚರ್ಚೆ ಪೂರ್ಣಗೊಳ್ಳುವ ಮೊದಲುವೇ ಜೆಡಿಎಸ್ ತನ್ನದೇ ಆದ ಪ್ರತ್ಯೇಕ ಪಾದಯಾತ್ರೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇದರಿಂದ ಉಭಯ ಪಕ್ಷಗಳ ನಡುವೆ ಸಮನ್ವಯದ ಕೊರತೆ ಮತ್ತೆ ಬೆಳಕಿಗೆ ಬಂದಿದೆ.
ಜೆಡಿಎಸ್ ಪ್ರಕಟಿಸಿರುವ ಕಾರ್ಯಕ್ರಮದ ಪ್ರಕಾರ, ಜುಲೈ 30, 31 ಹಾಗೂ ಆಗಸ್ಟ್ 1ರಂದು ಮೂರು ದಿನಗಳ ಕಾಲ ಸುಮಾರು 38 ಕಿಲೋಮೀಟರ್ ಪಾದಯಾತ್ರೆ ನಡೆಯಲಿದೆ. ಜುಲೈ 30ರಂದು ಬೈರಮಂಗಲ ವೃತ್ತದಿಂದ ಬಿಡದಿ ವೃತ್ತ ಹಾಗೂ ಅಲ್ಲಿಂದ ಕ್ರೈಸ್ಟ್ ವಿಶ್ವವಿದ್ಯಾಲಯದವರೆಗೆ ಒಟ್ಟು 15 ಕಿಲೋಮೀಟರ್ ಪಾದಯಾತ್ರೆ ನಡೆಯಲಿದೆ. ಜುಲೈ 31ರಂದು ಕ್ರೈಸ್ಟ್ ವಿಶ್ವವಿದ್ಯಾಲಯ ಗೇಟ್‌ನಿಂದ ನೈಸ್ ಜಂಕ್ಷನ್ ಬಳಿಯ ಜೆಕೆ ಗ್ರ್ಯಾಂಡ್ ಅರೆನಾ ಹಾಗೂ ಅಲ್ಲಿಂದ ಆರ್.ಆರ್. ನಗರ ಕಮಾನು ವರೆಗೆ ಒಟ್ಟು 16 ಕಿಲೋಮೀಟರ್ ಪಾದಯಾತ್ರೆ ಆಯೋಜಿಸಲಾಗಿದೆ. ಆಗಸ್ಟ್ 1ರಂದು ಆರ್.ಆರ್. ನಗರದಿಂದ ಫ್ರೀಡಂ ಪಾರ್ಕ್‌ವರೆಗೆ 7 ಕಿಲೋಮೀಟರ್ ಪಾದಯಾತ್ರೆ ನಡೆಸಿ, ಬಳಿಕ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಸಮಾವೇಶ ನಡೆಸಲು ಜೆಡಿಎಸ್ ಯೋಜನೆ ರೂಪಿಸಿದೆ.
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಎಂಎಲ್‌ಸಿ ಎನ್. ರವಿಕುಮಾರ್, ಪಾದಯಾತ್ರೆ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಟೌನ್‌ಶಿಪ್ ಯೋಜನೆಗೆ ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದು, ಹೋರಾಟದ ಉದ್ದೇಶ ಒಂದೇ ಆಗಿದೆ. ಪಾದಯಾತ್ರೆಯನ್ನು ಒಟ್ಟಾಗಿ ನಡೆಸುವ ಕುರಿತು ಉಭಯ ಪಕ್ಷಗಳ ನಾಯಕರು ಶೀಘ್ರದಲ್ಲೇ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಆದರೆ, ಜೆಡಿಎಸ್ ಏಕಪಕ್ಷೀಯವಾಗಿ ಪಾದಯಾತ್ರೆಯ ದಿನಾಂಕ ಘೋಷಿಸಿರುವುದು ಮೈತ್ರಿ ಪಕ್ಷಗಳ ನಡುವೆ ಎಲ್ಲವೂ ಸುಗಮವಾಗಿಲ್ಲ ಎಂಬ ಸಂದೇಶವನ್ನು ನೀಡಿದೆ. ರಾಜಕೀಯ ವಲಯದಲ್ಲಿ ಈ ಬೆಳವಣಿಗೆ ಹಲವು ಚರ್ಚೆಗಳಿಗೆ ಕಾರಣವಾಗಿದ್ದು, ಜೆಡಿಎಸ್ ತನ್ನದೇ ರಾಜಕೀಯ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಲು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮೈತ್ರಿಕೂಟದ ಪ್ರಮುಖ ಮುಖವಾಗಿ ಬಿಂಬಿಸಲು ಪ್ರಯತ್ನಿಸುತ್ತಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ಒಟ್ಟಿನಲ್ಲಿ, ಬಿಡದಿ ಟೌನ್‌ಶಿಪ್ ವಿರೋಧದ ಹೋರಾಟ ಒಂದೇ ಗುರಿಯದ್ದಾಗಿದ್ದರೂ, ಅದರ ರೂಪುರೇಷೆ ಮತ್ತು ನಾಯಕತ್ವದ ವಿಚಾರದಲ್ಲಿ ಉಭಯ ಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳು ಗೋಚರಿಸುತ್ತಿವೆ. ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಒಗ್ಗಟ್ಟಿನ ನಿರ್ಧಾರಕ್ಕೆ ಬರುತ್ತಾರೆಯೇ ಅಥವಾ ಈ ಬೆಳವಣಿಗೆ ಮೈತ್ರಿ ಸಂಬಂಧದ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆಯೇ ಎಂಬುದು ರಾಜಕೀಯವಾಗಿ ಕುತೂಹಲ ಮೂಡಿಸಿದೆ.
