ಬೆಂಗಳೂರು, ಜು.18: ಬಿಡದಿ ಟೌನ್ ಶಿಪ್ ಯೋಜನೆ ವಿಚಾರವಾಗಿ ಬಿಜೆಪಿ ನಾಯಕರು ಮಾಡಲು ಹೊರಟಿರುವುದು ಪಾದಯಾತ್ರೆಯಲ್ಲ, ತಾವು ಮಾಡಿರುವ ಪಾಪಕ್ಕೆ ಪ್ರಾಯಶ್ಚಿತ ಯಾತ್ರೆಯಾಗಿದೆ ಎಂದು ಮಾಗಡಿ ಶಾಸಕರಾದ ಹೆಚ್ ಸಿ ಬಾಲಕೃಷ್ಣ ಅವರು ತಿರುಗೇಟು ನೀಡಿದ್ದಾರೆ.
ಬಿಡದಿ ಟೌನ್ ಶಿಪ್ ವಿಚಾರವಾಗಿ ಮಾಗಡಿ ಕ್ಷೇತ್ರದ ಶಾಸಕರಾದ ಹೆಚ್ ಸಿ ಬಾಲಕೃಷ್ಣ ಅವರು ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಬಿಡದಿ ಟೌನ್ ಶಿಪ್ ವಿಚಾರವಾಗಿ ಇಂದಿನ ಕರ್ಮಕಾಂಡಕ್ಕೆ ಬಿಜೆಪಿಯವರು ಕೂಡ ಪಾಲುದಾರರು. ಬಿಜೆಪಿ ಅನೇಕ ಮುಖಂಡರು ವೀರಾವೇಷದ ಭಾಷಣ ಮಾಡಿದ್ದಾರೆ. ಪಾದಯಾತ್ರೆ ಮಾಡುವುದಾಗಿ ಹೇಳಿದ್ದಾರೆ. ಅವರು ಮಾಡಿರುವ ಪಾಪಕ್ಕೆ ಈಗ ಮಾಡಬೇಕಾಗಿರುವುದು ಪ್ರಾಯಶ್ಚಿತ ಯಾತ್ರೆ. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ನಮ್ಮ ಪಾಪದ ಕೂಸನ್ನು ನೀವು ಯಾಕೆ ಹೊತ್ತುಕೊಂಡು ತಿರುಗುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಅವರ ಪಾಪದ ಕೂಸು ವಿಕಲಚೇತನ ಪರಿಸ್ಥಿತಿಯಲ್ಲಿದೆ. ಅದನ್ನು ಮಾಡುವಾಗಲೇ ಕುಮಾರಸ್ವಾಮಿ ಅವರು ಕೈಕಾಲು ಮುರಿದಿದ್ದಾರೆ. ಕುಮಾರಸ್ವಾಮಿ ಅವರ ಪಾಪದ ಕೂಸನ್ನು ಮೊದಲು ಎತ್ತಿಕೊಂಡವರು ಯಡಿಯೂರಪ್ಪನವರು. ನಂತರ ಸದಾನಂದ ಗೌಡರು, ಜಗದೀಶ್ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿ ಅವರು ಎತ್ತಿಕೊಂಡರು. ಈಗ ಕಡೇಯದಾಗಿ ಆ ಕೂಸಿಗೆ ಚಿಕಿತ್ಸೆ ನೀಡಲು ನಾವು ಹೊತ್ತುಕೊಂಡಿದ್ದೇವೆ” ಎಂದು ಲೇವಡಿ ಮಾಡಿದರು.
“ಯಡಿಯೂರಪ್ಪನವರು ನಮ್ಮ ಹಳೆಯ ನಾಯಕರು. ಅವರ ಬಗ್ಗೆ ನನಗೆ ಗೌರವವಿದೆ. ಒಬ್ಬ ನಾಯಕರಾದವರಿಗೆ ತನ್ನ ನಡೆ ನುಡಿ ಒಂದೇ ರೀತಿ ಇರಬೇಕು. ಜನರ ಮುಂದೆ ಮಾತನಾಡುವುದು, ಹಿಂದೆ ಮಾಡವ ಕೆಲಸ ಬೇರೆ ಬೇರೆಯಾಗಬಾರದು. ಕುಮಾರಸ್ವಾಮಿ ಅವರು ಇದಕ್ಕೆ ನಾನು ಸಹಿ ಹಾಕಿದ್ದೇನಾ ಎಂದು ಕುಮಾರಸ್ವಾಮಿ ಅವರು ಹೇಳಿದ್ದು, ನಾನು ಈ ವಿಚಾರವನ್ನು ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ. ಅವರು ಎಷ್ಟು ಸಭೆ ನಡೆಸಿದ್ದಾರೆ. ನಮ್ಮ ಅಶೋಕಣ್ಣ ಬನ್ನಿ ಅಧಿವೇಶನಕ್ಕೆ ತೋರಿಸುತ್ತೇವೆ ಎಂದು ಕರೆಯುತ್ತಿದ್ದಾರೆ. ಅವರು ಏನು ತೋರಿಸುತ್ತಾರೋ ಅದಕ್ಕೆಲ್ಲ ನಾವು ಅಧಿವೇಶನದಲ್ಲಿ ಉತ್ತರ ನೀಡುತ್ತೇವೆ” ಎಂದು ತಿಳಿಸಿದರು.
ಡಿಎಲ್ಎಫ್ ಗೆ ಟೆಂಡರ್ ಕೊಟ್ಟ ಕುಮಾರಸ್ವಾಮಿ ಪಡೆದ ಕಿಕ್ ಬ್ಯಾಕ್ ಎಷ್ಟು?
“ಕುಮಾರಸ್ವಾಮಿ ಅವರು ಬಿಡದಿ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ಡಿಎಲ್ಎಫ್ ನವರಿಗೆ ನೀಡಿದರು. ಇದನ್ನು ನೀಡುವಾಗ ಅವರು ಎಷ್ಟು ಕಿಕ್ ಬ್ಯಾಕ್ ಪಡೆದಿದ್ದರು ಎಂದು ಕುಮಾರಸ್ವಾಮಿ ಅವರೇ ಹೇಳಬೇಕು. ಕುಮಾರಸ್ವಾಮಿ ಅವರು ಈ ಯೋಜನೆ ಮಾಡುವಾಗ ಡಿಸಿಎಂ ಆಗಿದ್ದು ಯಡಿಯೂರಪ್ಪನವರು. ಕನಿಷ್ಠ ಸೌಜನ್ಯಕ್ಕಾದರೂ ಯಡಿಯೂರಪ್ಪನವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಸಭೆ ಮಾಡಲಿಲ್ಲ. ಶಿವಕುಮಾರ್ ಅವರು ಕಿಕ್ ಬ್ಯಾಕ್ ಪಡೆದು ಕೇಂದ್ರದ ನಾಯಕರಿಗೆ ಕಳುಹಿಸುತಿದ್ದಾರೆ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಅನೇಕ ಬಾರಿ ಆರೋಪಿಸಿದ್ದಾರೆ. ಡಿಎಲ್ಎಫ್ ಗೆ ಜಾಗತಿಕ ಟೆಂಡರ್ ನೀಡುವಾಗ ಕುಮಾರಸ್ವಾಮಿ ಅವರು ಎಷ್ಟು ಕಿಕ್ ಬ್ಯಾಕ್ ಪಡೆದಿದ್ದರು? ಡಿಎಲ್ಎಫ್ ಅವರು ಕೊಟ್ಟ ಹಣವನ್ನು ಹಿಂತಿರುಗಿಸಲು ಸಾಧ್ಯವಿಲ್ಲ. ಆದರೆ ಜಾಗತಿಕ ಮುಗ್ಗಟ್ಟಿನಲ್ಲಿ ಈ ಯೋಜನೆ ಮಾಡುವುದು ಅಸಾಧ್ಯ ಎಂದು ಡಿಎಲ್ಎಫ್ ಹಿಂದಕ್ಕೆ ಸರಿದಾಗ ಇವರು 400 ಕೋಟಿ ಹಣ ವಾಪಸ್ ನೀಡಿದಾಗ ಯಡಿಯೂರಪ್ಪನವರು ಎಷ್ಟು ಕಿಕ್ ಬ್ಯಾಕ್ ಪಡೆದರು? ಅದರಲ್ಲಿ ಅವರ ಕೇಂದ್ರದ ನಾಯಕರಿಗೆ ಎಷ್ಟು ಪಾಲು ನೀಡಿದರು?” ಎಂದು ಪ್ರಶ್ನಿಸಿದರು
ತಮ್ಮ ಸ್ಥಾನ ಉಳಿಸಿಕೊಳ್ಳಲು ಬಿಜೆಪಿ ನಾಯಕರಿಂದ ಪ್ರಾಯಶ್ಚಿತ ಯಾತ್ರೆ
“ಯಡಿಯೂರಪ್ಪನವರು ಹಸಿರು ಶಾಲು ಹಾಕಿಕೊಂಡು ರೈತರ ಮೇಲೆ ಅನೇಕ ಬಾರಿ ಪ್ರೀತಿ ತೋರಿದ್ದಾರೆ. ಆದರೆ ಇದೇ ಡಿಎಲ್ಎಫ್ ಯೋಜನೆಯಿಂದ ಹಿಂದೆ ಸರಿದಾಗ, ಯಡಿಯೂರಪ್ಪನವರು ಮತ್ತೆ ಜಾಗತಿಕ ಟೆಂಡರ್ ಕರೆದಿದ್ದು ಯಾಕೆ? ನಿಮ್ಮ ಪಶ್ಚಾತಾಪ ಯಾತ್ರೆ ಆರಂಭಕ್ಕೂ ಮುನ್ನ ಈ ಪ್ರಶ್ನೆಗೆ ಉತ್ತರಿಸಬೇಕು. ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಅವರಿಗೆ ವೈದರು ತೂಕ ಇಳಿಸಬೇಕು ಎಂಬ ಸಲಹೆ ನೀಡಿದ್ದು, ಅದಕ್ಕಾಗಿ ಅವರು ಪಶ್ಚಾತಾಪಯಾತ್ರೆ ಮಾಡಲು ಮುಂದಾಗಿದ್ದಾರೆ. ಇದು ಇತ್ತೀಚೆಗೆ ನಡೆದ ಪರಿಷತ್ ಚುನಾವಣೆಯ ಪರಿಣಾಮ. ಎಲ್ಲರೂ ಪ್ರತಿವ್ರತೆಯ ಸ್ಪರ್ಧೆಗೆ ಬಿದ್ದವರಂತೆ ತಾವು ರೈತರ ಪರ ಎಂದು ಹೇಳುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಾಕ್ಷ ಸ್ಥಾನ ಬದಲಾವಣೆ ಮಾಡುತ್ತಾರೆ ಎಂಬ ಆತಂಕದಲ್ಲಿ ಈ ಪಶ್ಚಾತಾಪಯಾತ್ರೆ ಮಾಡುತ್ತಿದ್ದಾರೆ” ಎಂದು ಲೇವಡಿ ಮಾಡಿದರು.
“ಬಿಜೆಪಿಯವರ ಪಶ್ಚಾತಾಪ ಯಾತ್ರೆಗೆ ನಮ್ಮ ಅಭ್ಯಂಥರವಿಲ್ಲ. ಆದರೆ ಈ ಯಾತ್ರೆಗೂ ಮುನ್ನ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಿ ಮುಂದುವರಿಸಲಿ. ಇತ್ತೀಚೆಗೆ ನಂಜುಂಡಸ್ವಾಮಿ ಅವರ ಪುತ್ರಿ ಬಿಡದಿಯಲ್ಲಿ ರಾಜಕಾರಣಿಗಳಿಗೆ ಹಸಿರು ಶಾಲು ಹಾಕಿಕೊಳ್ಳುವ ಅರ್ಹತೆ ಇಲ್ಲ ಎಂದು ಹೇಳಿದ್ದರು. ಈ ಮಾತನ್ನು ಅವರು ಹೇಳಿದ್ದು, ರೈತರ ಜೊತೆ ಪ್ರತಿಭಟನೆಗೆ ಕೂತು ನಾಟಕ ಮಾಡಿದವರಿಗೆ ಹಾಗೂ ರೈತರ ಶಾಲು ಹಾಕಿಕೊಂಡು ಯಾತ್ರೆ ಮಾಡಲು ಮುಂದಾಗಿರುವವರಿಗೆ” ಎಂದರು.
ಪುತ್ರ ವ್ಯಾಮೋಹಕ್ಕಾಗಿ ವಿರೋಧ ಪಕ್ಷದ ನಾಯಕರಿಂದ ಹೋರಾಟ
“ರೈತರನ್ನು ರಕ್ಷಣೆ ಮಾಡುವ ವಿಚಾರವನ್ನು ನಾವು ಬಿಜೆಪಿಯಿಂದ ಕಲಿಯಬೇಕೆ? ದೆಹಲಿಯಲ್ಲಿ ರೈತರು ಪ್ರತಿಭಟನೆ ಮಾಡಿದಾಗ ಅವರನ್ನು ಎಷ್ಟು ದಿನಗಳ ಕಾಲ ಕಾಡಿದರು ಎಂಬುದು ಜಗತ್ತಿಗೆ ಗೊತ್ತಿದೆ. ಹಸಿರು ಟವಲ್ ಹಾಕಿಕೊಂಡ ತಕ್ಷಣ ಇವರು ರೈತ ಪರ. ನಮ್ಮ ರಾಜ್ಯದಲ್ಲಿ ಎಲ್ಲರಿಗೂ ಪುತ್ರ ವ್ಯಾಮೋಹ ಹೆಚ್ಚಾಗಿದೆ. ತಮ್ಮ ಮಕ್ಕಳನ್ನು ಸಿಎಂ ಮಾಡಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರು ತಮ್ಮ ಮಗನನ್ನು ಗೆಲ್ಲಿಸಬೇಕು ಎಂದು ಹೋರಾಡುತ್ತಿದ್ದರೆ, ಯಡಿಯೂರಪ್ಪನವರು ವಿಜಯೇಂದ್ರ ಅವರನ್ನು ಪ್ರಮೋಟ್ ಮಾಡಲು ಹೋರಾಟ ಮಾಡುತ್ತಿದ್ದಾರೆ. ಮಕ್ಕಳ ಉದ್ಧಾರಕ್ಕೆ ಇವರು ಹಠಕ್ಕೆ ಬಿದ್ದಿದ್ದಾರೆ. ವಿರೋಧ ಪಕ್ಷದ ನಾಯಕರುಗಳು ಗೋಸುಂಬೆ ರಾಜಕಾರಣ ಬಿಡಬೇಕು” ಎಂದು ತಿಳಿಸಿದರು.
“ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದ್ದು 2023ರಲ್ಲಿ ನಮ್ಮ ಸರ್ಕಾರ ತಕ್ಷಣವೇ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಿಲ್ಲ. ಈ ಭಾಗದ ರೈತರು ಬಂದು ನಮಗೆ ರೆಡ್ ಜೋನ್ ನಿಂದ ಮುಕ್ತಿ ಬೇಕು ಯೋಜನೆ ಮಾಡಿ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಡಿ ಕೆ ಶಿವಕುಮಾರ್ ಅವರು ಸರ್ವೇ ಮಾಡಿಸಿ ಬಹುತೇಕ ರೈತರು ಯೋಜನೆ ಪರವಾಗಿದ್ದಾರೆ ಎಂದು ತಿಳಿದ ಬಳಿಕವಷ್ಟೇ 2025ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಯಿತು. ಅಂತಿಮ ಅಧಿಸೂಚನೆ ಹೊರಡಿಸಿದ್ದು 2026ರಲ್ಲಿ. ಈ ಒಂದು ವರ್ಷ ಅವಧಿಯಲ್ಲಿ ಕುಮಾರಸ್ವಾಮಿ, ಅವರ ಮಗ ನಿಖಿಲ್ ಕುಮಾರಸ್ವಾಮಿ, ಯಡಿಯೂರಪ್ಪನವರು, ವಿಜಯೇಂದ್ರ, ಅಶೋಕ್ ಅವರಾಗಲಿ ಪ್ರಶ್ನೆ ಮಾಡಿದ್ದರ? ವಿರೋಧ ಪಕ್ಷದ ನಾಯಕರಾದ ಅಶೋಕ್ ಅಧಿವೇಶನದಲ್ಲಿ ಈ ವಿಚಾರ ಪ್ರಶ್ನೆ ಮಾಡಿದ್ದೀರಾ? ಅಂತಿಮ ಅಧಿಸೂಚನೆ ವೇಳೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾದರು ಎಂಬ ಕಾರಣಕ್ಕೆ ಹೊಟ್ಟೆಯುರಿ ಆರಂಭವಾದರೆ ನಿಮಗೆ ಮದ್ದು ನೀಡಲು ಸಾಧ್ಯವಿಲ್ಲ” ಎಂದು ಕಿಡಿಕಾರಿದರು.
