ಬಿಕ್ಲು ಶಿವ ಕೊಲೆ ಆರೋಪಿಗೂ ಸ್ಯಾಂಡಲ್‌ವುಡ್‌ಗೂ ಲಿಂಕ್? ರಚಿತಾ ರಾಮ್‌ಗೆ ಗಿಫ್ಟ್‌ ನೀಡಿದ್ದ ಜಗ್ಗ

111 (26)

ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಬಿಕ್ಲು ಶಿವ (Biklu Shiva) ಕೊಲೆ ಪ್ರಕರಣ ದೊಡ್ಡ ಸುದ್ದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ವ್ಯಕ್ತಿಗಳಿಗೆ ನೋಟೀಸ್‌ ಜಾರಿಯಾಗಿದ್ದು, ಪ್ರತಿದಿನ ಹೊಸ ತಿರುವುಗಳು ಬಯಲಿಗೆ ಬರುತ್ತಿವೆ. ಕೊಲೆಯ ಪ್ರಮುಖ ಆರೋಪಿ ಜಗ್ಗನಿಗೆ ಸ್ಯಾಂಡಲ್ವುಡ್ ನಟ-ನಟಿಯರ ಜೊತೆ ನಂಟು ಇದೆಯೆಂದು ತನಿಖೆಯಲ್ಲಿ ಬಹಿರಂಗವಾಗಿದೆ. ಇದೇ ಸಂದರ್ಭದಲ್ಲಿ, ನಟಿ ರಚಿತಾ ರಾಮ್‌ಗೆ ಜಗ್ಗ ಚಿನ್ನದ ನೆಕ್ಸಸ್ (ಗಿಫ್ಟ್) ನೀಡಿದ್ದರ ಬಗ್ಗೆ ಫೋಟೋ ವೈರಲ್ ಆಗಿದೆ.

ಸ್ಯಾಂಡಲ್‌ವುಡ್‌ಗೆ ಜಗ್ಗನ ನಂಟು

ತನಿಖೆಯಲ್ಲಿ ಬಿಕ್ಕು ಶಿವ ಕೊಲೆ ಆರೋಪಿಗೆ ಸ್ಯಾಂಡಲ್‌ವುಡ್‌ನ ಕೆಲವು ನಟ-ನಟಿಯರ ಜೊತೆಗೆ ಸಂಪರ್ಕ ಇದೆ ಎಂಬ ವಿಷಯ ಬೆಳಕಿಗೆ ಬಂದಿದೆ. ಜಗ್ಗನಿಗೆ ರಾಜಕೀಯ ವ್ಯಕ್ತಿಗಳ ಜೊತೆಗೆ ಸಿನಿಮಾ ಕ್ಷೇತ್ರದಲ್ಲಿಯೂ ಗಾಢ ಸಂಬಂಧವಿದೆ ಎನ್ನಲಾಗುತ್ತಿದೆ. ಈಗಾಗಲೇ ಶಾಸಕ ಭೈರತಿ ಬಸವರಾಜ್‌ರ ಹೆಸರು ಈ ಪ್ರಕರಣದಲ್ಲಿ ಕೇಳಿಬಂದಿದೆ. ಇದೀಗ ಸ್ಯಾಂಡಲ್‌ವುಡ್‌ನ ಕೆಲವು ಪ್ರಮುಖರ ಒಡನಾಟದ ಕುರಿತು ತನಿಖೆ ತೀವ್ರಗೊಂಡಿದೆ.

ರಚಿತಾ ರಾಮ್‌ಗೆ ಚಿನ್ನದ ಉಡುಗೊರೆ

ಪ್ರಕರಣದಲ್ಲಿ ಇದೀಗ ಹೊಸ ತಿರುವು ಸಿಕ್ಕಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೊವೊಂದರಲ್ಲಿ, ಕೊಲೆ ಆರೋಪಿ ಜಗ್ಗ, ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್‌ಗೆ ಉಡುಗೊರೆ ನೀಡುತ್ತಿರುವುದು ಕಂಡುಬಂದಿದೆ. ಮಾಹಿತಿಯ ಪ್ರಕಾರ, ‘ರವಿ ಬೋಪಣ್ಣ’ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಜಗ್ಗ, ರಚಿತಾ ರಾಮ್‌ಗೆ ಸೀರೆ ಮತ್ತು ಚಿನ್ನಾಭರಣವನ್ನು ಗಿಫ್ಟ್ ಆಗಿ ನೀಡಿದ್ದಾರೆ ಎನ್ನಲಾಗಿದೆ. ಈ ಫೋಟೊದಲ್ಲಿ ಜಗ್ಗ ಮತ್ತು ರಚಿತಾ ರಾಮ್ ಜೊತೆಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಕೂಡ ಕಾಣಿಸಿಕೊಂಡಿದ್ದಾರೆ. ಈ ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೂವರು ಆರೋಪಿಗಳ ಬಂಧನ

ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಮೂವರು ಆರೋಪಿಗಳಾದ ಅನಿಲ್, ಅರುಣ್, ಮತ್ತು ನವೀನ್‌ರನ್ನು ಬಂಧಿಸಿದ್ದಾರೆ. ಕೊಲೆಯ ನಂತರ ಈ ಮೂವರೂ ಪರಾರಿಯಾಗಿದ್ದರು. ಇನ್ನು, ಶಾಸಕ ಭೈರತಿ ಬಸವರಾಜ್ ಈ ಪ್ರಕರಣದಲ್ಲಿ ಎ5 ಆರೋಪಿಯಾಗಿದ್ದಾರೆ. ಐವರು ಆರೋಪಿಗಳು ಸ್ವಯಂಪ್ರೇರಿತವಾಗಿ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ಶನಿವಾರ ಭೈರತಿ ಬಸವರಾಜ್ ವಿಶೇಷ ನ್ಯಾಯಾಲಯದ ನೋಟೀಸ್‌ಗೆ ಒಳಗಾಗಿ ವಿಚಾರಣೆಗೆ ಹಾಜರಾಗಿದ್ದರು. ಮುಂದಿನ ವಿಚಾರಣೆ ಬುಧವಾರ ನಡೆಯಲಿದೆ.

ಭೈರತಿ ಬಸವರಾಜ್‌ರ ಸ್ಪಷ್ಟನೆ

ಕೊಲೆ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬಂದಿರುವ ಕುರಿತು ಶಾಸಕ ಭೈರತಿ ಬಸವರಾಜ್ ಪ್ರತಿಕ್ರಿಯೆ ನೀಡಿದ್ದಾರೆ. “ನನಗೆ ಈ ಕೊಲೆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಇದು ಸಂಪೂರ್ಣ ಸುಳ್ಳು ಆರೋಪವಾಗಿದ್ದು, ರಾಜಕೀಯ ದುರುದ್ದೇಶದಿಂದ ಈ ರೀತಿಯ ಆರೋಪಗಳನ್ನು ಮಾಡಲಾಗಿದೆ,” ಎಂದು ಅವರು ಹೇಳಿದ್ದಾರೆ.

Exit mobile version