ಬೀದರ್, ಜೂನ್ 10: ಖಾಸಗಿ ಶಾಲೆಯಲ್ಲಿ ಮುಖ್ಯ ಶಿಕ್ಷಕರ ಕಿರುಕುಳಕ್ಕೆ ಬೇಸತ್ತು 10ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್‌ನಲ್ಲಿ ನಡೆದಿದೆ. ಇಂದು (ಜೂನ್ 10) ಬೆಳಿಗ್ಗೆ ಶಾಲೆಗೆ ತೆರಳಿದ 16 ವರ್ಷದ ಬಾಲಕ ಸಮೀರ್ (ಸಮೀರ್), ನಾಲ್ಕನೇ ಮಹಡಿಯಿಂದ ಹಾರಿ ಸಾವನ್ನಪ್ಪಿದ್ದಾನೆ.
ಜನಸೇವಾ ಶಾಲೆಯಲ್ಲಿ ನಡೆದ ದುರಂತ
ಬೀದರ್‌ನ ಎಲ್ಐಸಿ ಕಾಲೋನಿಯಲ್ಲಿರುವ ಜನಸೇವಾ ಖಾಸಗಿ ಶಾಲೆಯಲ್ಲಿ ಸಮೀರ್ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಅವರು ಬೀದರ್‌ನ ಶಾಂತಿನಗರದ ನಿವಾಸಿಯಾಗಿದ್ದರು. 1ನೇ ತರಗತಿಯಿಂದಲೂ ಈ ಶಾಲೆಯಲ್ಲೇ ಓದುತ್ತಿದ್ದ ಸಮೀರ್, ಇತ್ತೀಚೆಗೆ ಮುಖ್ಯ ಶಿಕ್ಷಕರಿಂದ ನಿರಂತರ ಕಿರುಕುಳವನ್ನು ಎದುರಿಸುತ್ತಿದ್ದ ಎಂದು ಹೇಳಲಾಗಿದೆ.
ಮೃತ ವಿದ್ಯಾರ್ಥಿ ಸಮೀರ್ ಯಾರು?
16 ವರ್ಷದ ಸಮೀರ್, ಶಾಲೆಯಲ್ಲಿ SSLC ವ್ಯಾಸಂಗ ಮಾಡುತ್ತಿದ್ದ. ಇತ್ತೀಚೆಗೆ ಅವರು ತಮ್ಮ ಸ್ನೇಹಿತರ ಬಳಿ ಮತ್ತು ಕೆಲವೊಮ್ಮೆ ಪೋಷಕರ ಬಳಿ ಕಿರುಕುಳದ ಬಗ್ಗೆ ತಿಳಿಸಿದ್ದರು ಎಂದು ತಿಳಿದುಬಂದಿದೆ.
“ಹೆಚ್ಚಿನ ಅಂಕ ತೆಗೆದುಕೊಳ್ಳಬೇಕು, ಕಸ ಗೂಡಿಸಬೇಕು ಎಂದು ಕಿರುಕುಳ”
ಮೃತನ ಪೋಷಕರು ಮಾತನಾಡಿ, “ನನ್ನ ಮಗ 1ನೇ ತರಗತಿಯಿಂದಲೂ ಇದೇ ಶಾಲೆಯಲ್ಲಿ ಓದುತ್ತಿದ್ದ. ಹೆಚ್ಚಿನ ಅಂಕ ತೆಗೆದುಕೊಳ್ಳಬೇಕು, ಶಾಲೆಯಲ್ಲಿ ಕಸ ಗೂಡಿಸುವ ಕೆಲಸ ಮಾಡಬೇಕು ಎಂದು ಮುಖ್ಯ ಶಿಕ್ಷಕರು ನಿರಂತರವಾಗಿ ಕಿರುಕುಳ ನೀಡಿದ್ದಾರೆ. ಹೀಗಾಗಿ ಕಿರುಕುಳದಿಂದ ಬೇಸತ್ತು ಸಾವನ್ನಪ್ಪಿದ್ದಾನೆ“ ಎಂದು ಆರೋಪ ಮಾಡಿದ್ದಾರೆ. ಶಾಲಾ ಸಿಬ್ಬಂದಿಗಳೇ ಸಮೀರ್‌ಗೆ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.
ಮಾಹಿತಿ ನೀಡದೇ ಮೃತದೇಹ ಸಾಗಣೆ
ಆತ್ಮಹತ್ಯೆ ವಿಷಯವನ್ನು ಪೋಷಕರಿಗೆ ತಿಳಿಸದೇ, ಶಾಲೆಯ ಆಡಳಿತ ಮಂಡಳಿಯು ಮೃತದೇಹವನ್ನು ನೇರವಾಗಿ ಬ್ರಿಮ್ಸ್ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದೆ. ಹೇಳದೇ ಕೇಳದೇ ಆಸ್ಪತ್ರೆಗೆ ರವಾನಿಸಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಪೋಷಕರ ಅನುಮತಿ ಅಥವಾ ಮಾಹಿತಿ ಇಲ್ಲದೆಯೇ ಪೋಸ್ಟ್ ಮಾರ್ಟಂ ವ್ಯವಸ್ಥೆ ಮಾಡಲಾಗಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶವಗಾರದ ಮುಂದೆ ಆಕ್ರಂದನ
ಬ್ರಿಮ್ಸ್ ಆಸ್ಪತ್ರೆಯ ಶವಗಾರದ ಮುಂದೆ ಸಮೀರ್‌ನ ಕುಟುಂಬಸ್ಥರು, ತಂದೆ-ತಾಯಿ ಮತ್ತು ಸಂಬಂಧಿಕರು ಕಂಬನಿ ಮಿಡಿದಿದ್ದಾರೆ. ಅವರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ದುರಂತ ಸಂಭವಿಸಿದ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ತನಿಖೆ ಆರಂಭ
ನ್ಯೂ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಇತರ ಸಿಬ್ಬಂದಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.