ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆಯ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನಡುವೆ ಪತ್ರ ಸಮರವೇ ಆರಂಭವಾಗಿದೆ. ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಚರ್ಚೆಗೆ ಬರುವಂತೆ ಬರೆದಿದ್ದ ಪತ್ರಕ್ಕೆ ಕುಮಾರಸ್ವಾಮಿ ಅವರು ಮರುಪತ್ರ ಬರೆಯುವ ಮೂಲಕ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ವಿಧಾನಸೌಧದ ಮುಚ್ಚಿದ ಕೋಣೆಯಲ್ಲಿ ಸಭೆ ನಡೆಸುವುದನ್ನು ತಿರಸ್ಕರಿಸಿರುವ ಅವರು, ಬಾಧಿತ ರೈತರ ಸಮ್ಮುಖದಲ್ಲೇ ಸಾರ್ವಜನಿಕ ಸ್ಥಳದಲ್ಲಿ ಸಭೆ ನಡೆಸುವಂತೆ ಹೊಸ ಷರತ್ತುಗಳನ್ನು ವಿಧಿಸಿದ್ದಾರೆ.
ಕುಮಾರಸ್ವಾಮಿ ಪತ್ರದಲ್ಲಿ ಏನಿದೆ?
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಿಗೆ ಬರೆದಿರುವ ಮರುಪತ್ರದಲ್ಲಿ, ಬಿಡದಿ ಸಮಗ್ರ ಉಪನಗರ ಯೋಜನೆಯಿಂದ ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಎಂಟು ಗ್ರಾಮಗಳು ಮತ್ತು ಹಾರೋಹಳ್ಳಿ ತಾಲೂಕಿನ ಒಂದು ಗ್ರಾಮದ ರೈತರು, ಗ್ರಾಮಸ್ಥರು ಹಾಗೂ ಪಾಲುದಾರರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆಂದು ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಭಾಗದಲ್ಲಿರುವ ಅಪಾರ ಪರಿಸರ ಸಂಪತ್ತಿಗೆ ಹಾನಿಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸ್ಥಳ ಬದಲಾವಣೆ ಷರತ್ತು
ತಾವು ಪ್ರಸ್ತಾಪಿಸಿರುವ ಸಭೆಯನ್ನು ರಾಮನಗರ ಜಿಲ್ಲೆಯ ಬಿಡದಿ ಅಥವಾ ಬಾಧಿತ ಪ್ರದೇಶವಾದ ಬೈರಮಂಗಲದ ಯಾವುದಾದರೂ ಸೂಕ್ತ ಸಾರ್ವಜನಿಕ ಸ್ಥಳದಲ್ಲಿ ಕರೆಯುವುದು ಸಮಂಜಸವೆನಿಸುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ಈ ಸಭೆಯಲ್ಲಿ ಬಾಧಿತರಾಗಿರುವ ರೈತರು, ಕೃಷಿ ಕಾರ್ಮಿಕರು, ಕೈಗಾರಿಕಾ ಉದ್ಯಮದಲ್ಲಿರುವ ರೈತ ಮಹಿಳೆಯರು, ಸಣ್ಣ ವ್ಯಾಪಾರಸ್ಥರು ಭಾಗವಹಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ವೈಯಕ್ತಿಕ ಹಿತಾಸಕ್ತಿ ಇಲ್ಲ
ಈ ಯೋಜನೆಯ ರಚನೆ ಮತ್ತು ಅನುಷ್ಠಾನದಲ್ಲಿ ತನಗೆ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ ಎನ್ನುವುದನ್ನು ಈ ಪತ್ರದ ಮೂಲಕ ಸ್ಪಷ್ಟಪಡಿಸಿರುವ ಕುಮಾರಸ್ವಾಮಿ, ವಿಧಾನಸೌಧದಲ್ಲಿ ಬಾಧಿತ ರೈತ ವರ್ಗ ಹಾಗೂ ಗ್ರಾಮಸ್ಥರನ್ನು ಕರೆಯದೆ ಕೇವಲ ತಮ್ಮ ನಡುವೆ ಸಭೆ ನಡೆಸುವುದರಿಂದ ಯಾವುದೇ ಫಲಪ್ರದವಾಗುವುದಿಲ್ಲ ಎಂದು ವಾದಿಸಿದ್ದಾರೆ.
ದಿನಾಂಕ ಬದಲಾವಣೆಗೆ ಮನವಿ
ಮುಖ್ಯಮಂತ್ರಿಗಳು ನಿಗದಿಪಡಿಸಿದ್ದ ಜೂನ್ 26 ರಂದು ತಮಗೆ ಪೂರ್ವ ನಿಯೋಜಿತ ಕಾರ್ಯಕ್ರಮಗಳು ಇರುವುದಾಗಿ ತಿಳಿಸಿರುವ ಕುಮಾರಸ್ವಾಮಿ, ಸಭೆಯನ್ನು ಮುಂದೂಡುವಂತೆ ಕೋರಿದ್ದಾರೆ. ಅಲ್ಲದೆ, ಈ ಸಭೆಯನ್ನು ದಿನಾಂಕ 27-06-2026 ರಂದು (ಶನಿವಾರ) ಬಿಡದಿ ಅಥವಾ ಬೈರಮಂಗಲದ ಮುಕ್ತ ಸಾರ್ವಜನಿಕ ಸ್ಥಳದಲ್ಲಿ ಆಯೋಜಿಸಿ, ಬಾಧಿತ ವರ್ಗದ ಜನರನ್ನು ಆಹ್ವಾನಿಸಿ ಸಭೆ ನಡೆಸಬೇಕೆಂದು ಕೋರಿದ್ದಾರೆ.
