ಕರ್ನಾಟಕಕ್ಕೂ ತಟ್ಟಿದ ಇರಾನ್-ಇಸ್ರೇಲ್ ಯುದ್ಧದ ಬಿಸಿ: ಡೀಸೆಲ್, ಪೆಟ್ರೋಲ್​​ಗಾಗಿ ಕ್ಯೂ ನಿಂತ ಜನ!

Untitled design 2026 03 04T181601.605

ಉತ್ತರ ಕನ್ನಡ (ಮಾ.04): ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಈಗ ಕರ್ನಾಟಕದ ಕರಾವಳಿಗೂ ತಟ್ಟಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದಲ್ಲಿ ಪೆಟ್ರೋಲ್ ಬಂಕ್‌ಗಳ ಮುಂದೆ ಮಧ್ಯರಾತ್ರಿಯಿಂದಲೇ ವಾಹನ ಸವಾರರು ಸಾಲುಗಟ್ಟಿ ನಿಂತಿರುವ ದೃಶ್ಯಗಳು ಕಂಡುಬಂದಿವೆ. ಇಂಧನ ಬೆಲೆ ಏರಿಕೆ ಅಥವಾ ಪೂರೈಕೆ ಸ್ಥಗಿತಗೊಳ್ಳುವ ಭೀತಿಯಿಂದ ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮವಾಗಿ ಪೆಟ್ರೋಲ್ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಹೋರ್ಮುಜ್ ಕಣಿವೆ ನಿರ್ಬಂಧದ ಪರಿಣಾಮ

ಪರ್ಶಿಯನ್ ಕೊಲ್ಲಿಯನ್ನು ಓಮಾನ್ ಕೊಲ್ಲಿಯೊಂದಿಗೆ ಸಂಪರ್ಕಿಸುವ ಅತ್ಯಂತ ಪ್ರಮುಖ ತೈಲ ಸಾಗಣೆ ಮಾರ್ಗವಾದ  ‘ಹೋರ್ಮುಜ್ ಜಲಸಂಧಿ’ ಸಮುದ್ರ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಜಗತ್ತಿನ ಒಟ್ಟು ಕಚ್ಚಾ ತೈಲ ರಫ್ತಿನ ಬಹುಪಾಲು ಈ ಮಾರ್ಗದ ಮೂಲಕ ಸಾಗುವುದರಿಂದ, ಇಲ್ಲಿ ವ್ಯತ್ಯಯ ಉಂಟಾದರೆ ಪೂರೈಕೆಯಲ್ಲಿ ತೀವ್ರ ಸಮಸ್ಯೆ ಎದುರಾಗುವುದು ಅನಿವಾರ್ಯ ಎಂಬ ಭಾವನೆ ವ್ಯಾಪಿಸಿದೆ. ಇದೇ ಕಾರಣದಿಂದ ಸ್ಥಳೀಯ ಮಟ್ಟದಲ್ಲೂ ಆತಂಕ ಹೆಚ್ಚಾಗಿದೆ.

ಮಧ್ಯರಾತ್ರಿಯಿಂದಲೇ ಬಂಕ್‌ಗಳಲ್ಲಿ ರಶ್

ಭಟ್ಕಳ ಪಟ್ಟಣದ ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿ ನಿನ್ನೆ ತಡರಾತ್ರಿಯಿಂದಲೇ ವಾಹನಗಳ ಸಾಲು ಕಾಣಿಸಿತು. ಬೈಕ್‌, ಕಾರುಗಳಷ್ಟೇ ಅಲ್ಲದೆ, ಕೆಲವರು ಆಟೋ ಹಾಗೂ ಸರಕು ವಾಹನಗಳಲ್ಲಿಯೂ ಆಗಮಿಸಿ ಇಂಧನ ತುಂಬಿಸಿಕೊಂಡಿದ್ದಾರೆ. ಜನರು ಪ್ಲಾಸ್ಟಿಕ್ ಬಾಟಲಿ, ದೊಡ್ಡ ಕ್ಯಾನ್‌ಗಳಲ್ಲಿ ಪೆಟ್ರೋಲ್ ಸಂಗ್ರಹಿಸುತ್ತಿದ್ದಾರೆ..

ಕೆಲವು ಅಂಗಡಿ ಮಾಲೀಕರು ಹಾಗೂ ಸಗಟು ವ್ಯಾಪಾರಿಗಳು ಮುಂದಿನ ದಿನಗಳಲ್ಲಿ ವ್ಯಾಪಾರ ವ್ಯತ್ಯಯವಾಗಬಹುದೆಂಬ ಆತಂಕದಿಂದ ಡೀಸೆಲ್‌ನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸುತ್ತಿದ್ದಾರೆ. ಈ ಬೆಳವಣಿಗೆ ಜಿಲ್ಲೆಯ ಇತರ ತಾಲೂಕುಗಳಿಗೂ ಹಬ್ಬುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಬ್ರೆಂಟ್ ಕಚ್ಚಾ ತೈಲ ದರ ಏರಿಕೆ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ Brent Crude ದರವು ಸತತ ಏರಿಕೆಯಾಗುತ್ತಿದ್ದು, ಪ್ರತಿ ಬ್ಯಾರೆಲ್‌ಗೆ 85 ಡಾಲರ್ ದಾಟಿದೆ ಎಂಬ ಮಾಹಿತಿ ಲಭ್ಯವಾಗಿದೆ. ಭಾರತ ತನ್ನ ಇಂಧನ ಅವಶ್ಯಕತೆಗೆ ಹೆಚ್ಚಿನ ಪ್ರಮಾಣದಲ್ಲಿ ಗಲ್ಫ್ ರಾಷ್ಟ್ರಗಳನ್ನು ಅವಲಂಬಿಸಿರುವುದರಿಂದ, ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುವ ಸಾಧ್ಯತೆ ತಳ್ಳಿ ಹಾಕಲಾಗದು.

ತಜ್ಞರ ಎಚ್ಚರಿಕೆ: ಗಾಬರಿಯಿಂದ ಬೇಡ

ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಆರ್ಥಿಕ ತಜ್ಞರು ಮತ್ತು ಅಧಿಕಾರಿಗಳು, ಸಾರ್ವಜನಿಕರು ಗಾಬರಿಗೊಳ್ಳಬಾರದು ಎಂದು ಮನವಿ ಮಾಡಿದ್ದಾರೆ. “ಜನರು ಅಗತ್ಯಕ್ಕಿಂತ ಹೆಚ್ಚು ಇಂಧನ ಖರೀದಿಸಿ ಸಂಗ್ರಹಿಸಿದರೆ ಮಾರುಕಟ್ಟೆಯಲ್ಲಿ ಕೃತಕ ಕೊರತೆ ಉಂಟಾಗುತ್ತದೆ. ಇದರಿಂದ ನಿಜವಾದ ಅವಶ್ಯಕತೆ ಇರುವವರಿಗೆ ಪೆಟ್ರೋಲ್ ಸಿಗದ ಪರಿಸ್ಥಿತಿ ಎದುರಾಗಬಹುದು,” ಎಂದು ಎಚ್ಚರಿಸಿದ್ದಾರೆ.

Exit mobile version