ಕಾರವಾರ: ಹಲವು ದಿನಗಳಿಂದ ಶಾಂತವಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಮತ್ತೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಭಟ್ಕಳದ ವೆಂಕಟಾಪುರದ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಬಳಿ ಪುನರ್ ನಿರ್ಮಾಣ ಮಾಡಲಾಗಿದ್ದ ಮುರಿನಕಟ್ಟೆ (ಚಾವಡಿ ಕಟ್ಟೆ) ಯನ್ನು ಭಾನುವಾರ ರಾತ್ರಿ ಅನ್ಯಕೋಮಿನ ಸಾವಿರಾರು ಯುವಕರು ಸೇರಿ ಧ್ವಂಸಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಶಾಸನವು ಭಟ್ಕಳ ಪಟ್ಟಣ ಹಾಗೂ ಜಾಲಿ ಪಂಚಾಯತ್ ವ್ಯಾಪ್ತಿಯಲ್ಲಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿದೆ.
ಘಟನೆಯ ಬಳಿಕ ಭಟ್ಕಳ ಪಟ್ಟಣ ಹಾಗೂ ಜಾಲಿ ಪಂಚಾಯತ್ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮೇ 25ರಿಂದ ಮೇ 27ರವರೆಗೆ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಭಾರೀ ಭದ್ರತೆ ಒದಗಿಸಿದ್ದು, ಪರಿಸ್ಥಿತಿಯನ್ನು ಕಟ್ಟುನಿಟ್ಟಾಗಿ ನಿಯಂತ್ರಣದಲ್ಲಿಡಲಾಗಿದೆ.
ಮುರಿನಕಟ್ಟೆ ವಿವಾದವು ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾಮಗಾರಿ ಆರಂಭವಾದಾಗಿನಿಂದಲೇ ಈ ಪ್ರದೇಶದಲ್ಲಿ ವಿವಾದ ಉಂಟಾಗಿತ್ತು. ಸ್ಥಳೀಯರ ಪ್ರಕಾರ, ಈ ಕಟ್ಟೆ ಹಲವು ವರ್ಷಗಳ ಇತಿಹಾಸ ಹಾಗೂ ಧಾರ್ಮಿಕ ನಂಬಿಕೆಗೆ ಸಂಬಂಧಪಟ್ಟಿತ್ತು. ರಸ್ತೆ ವಿಸ್ತರಣೆಯ ಹಿನ್ನೆಲೆ ಅದನ್ನು ತೆರವುಗೊಳಿಸಲಾಗಿತ್ತು. ಬಳಿಕ ಅದೇ ಸ್ಥಳದಲ್ಲಿ ಮರುನಿರ್ಮಾಣ ಮಾಡಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸುತ್ತಿದ್ದರೆ, ಸಾರ್ವಜನಿಕ ಜಾಗದಲ್ಲಿ ಯಾವುದೇ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಮತ್ತೊಂದು ಸಮುದಾಯದ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು.
ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಸಂಬಂಧಿಸಿದ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪದ ನಡುವೆ, ಭಾನುವಾರ ಬೆಳಗ್ಗೆ ಹಿಂದೂ ಸಂಘಟನೆಗಳ ನೂರಾರು ಕಾರ್ಯಕರ್ತರು ಸ್ಥಳದಲ್ಲಿ ಸೇರಿ ಮುರಿನಕಟ್ಟೆಯನ್ನು ಪುನರ್ ನಿರ್ಮಿಸಿದ್ದರು. ಇದರಿಂದಾಗಿ ಮತ್ತೆ ಉದ್ವಿಗ್ನತೆ ಹೆಚ್ಚಾಗಿತ್ತು.
ಸಾರ್ವಜನಿಕ ಜಾಗದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಹಾಗೂ ಮಜ್ಜಿಸೆ ಇಸ್ಲಾಹ್ ವ ತಂಝೀಮ್ ಸಂಘಟನೆಯ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪರಿಸ್ಥಿತಿ ಹದಗೆಡದಂತೆ ತಡೆಯಲು ಉಪವಿಭಾಗಾಧಿಕಾರಿ ಜೆ. ಮಹೇಶ್ ನೇತೃತ್ವದಲ್ಲಿ ಶಾಂತಿ ಸಭೆ ಕೂಡ ನಡೆಸಲಾಯಿತು. ಸಭೆಯಲ್ಲಿ ಅಧಿಕಾರಿಗಳು ಈ ಜಾಗ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ಅತಿಕ್ರಮಿತ ಪ್ರದೇಶ ಎಂದು ಸ್ಪಷ್ಟಪಡಿಸಿದ್ದರು ಎನ್ನಲಾಗಿದೆ.
ಆದರೆ, ರಾತ್ರಿ ವೇಳೆ ಸಾವಿರಾರು ಯುವಕರು ಸ್ಥಳದಲ್ಲಿ ಜಮಾಯಿಸಿ ಘೋಷಣೆಗಳನ್ನು ಕೂಗುತ್ತಾ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ಆರಂಭಿಸಿದರು. ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಹಾಗೂ ಡಿವೈಎಸ್‌ಪಿ ಗಿರೀಶ್ ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಈ ನಡುವೆ ಕೆಲವರು ಆಕ್ರೋಶದ ಭರದಲ್ಲಿ ಕಬ್ಬಿಣದ ಸಲಾಕೆಗಳನ್ನು ಬಳಸಿ ಮುರಿನಕಟ್ಟೆಯ ಭಾಗವನ್ನು ಧ್ವಂಸಗೊಳಿಸಿದರು. ಘಟನೆ ಬಳಿಕ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.
ಪ್ರಸ್ತುತ ಭಟ್ಕಳ ಪಟ್ಟಣ ಮತ್ತು ಜಾಲಿ ಪಂಚಾಯತ್ ವ್ಯಾಪ್ತಿಯಲ್ಲಿ ಐದು ಜನರಿಗಿಂತ ಹೆಚ್ಚು ಮಂದಿ ಗುಂಪುಗೂಡುವುದನ್ನು ನಿಷೇಧಿಸಲಾಗಿದೆ. ಯಾವುದೇ ರೀತಿಯ ಪ್ರಚೋದನಾತ್ಮಕ ಭಾಷಣ, ಮೆರವಣಿಗೆ ಅಥವಾ ಸಾರ್ವಜನಿಕ ಸಭೆಗಳಿಗೆ ಅವಕಾಶ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಡದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ. ಶಾಂತಿ ಮತ್ತು ಸೌಹಾರ್ದ ಕಾಪಾಡಲು ಎಲ್ಲಾ ಸಮುದಾಯದ ಮುಖಂಡರು ಸಹಕರಿಸಬೇಕು ಎಂದು ಜಿಲ್ಲಾಡಳಿತ ಕರೆ ನೀಡಿದೆ.
