ಕಲಬುರಗಿ: ನೀಟ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಭಾಗ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ಟ್ವಿಸ್ಟ್ ಒಂದು ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿ ಭಾಗ್ಯಶ್ರೀ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿಯೇ ಅನುತ್ತೀರ್ಣರಾಗಿದ್ದ ಸಂಗತಿ ತನಿಖೆಯ ವೇಳೆ ಗೊತ್ತಾಗಿದೆ.
ಭಾಗ್ಯಶ್ರೀ ಅವರು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಬಂದಾಗ, ತನಗೆ ಶೇಕಡ 92 ರಷ್ಟು ಅಂಕಗಳು ಬಂದಿವೆ ಎಂದು ಪೋಷಕರ ಬಳಿ ಸುಳ್ಳು ಹೇಳಿಕೊಂಡಿದ್ದರು. ಇದರೊಂದಿಗೆ ನೀಟ್ ಪರೀಕ್ಷೆಯನ್ನೂ ಬರೆದಿದ್ದರು. ಆದರೆ, ಅವರು ಗಣಿತ ಮತ್ತು ಭೌತಶಾಸ್ತ್ರ ವಿಷಯಗಳಲ್ಲಿ ಅನುತ್ತೀರ್ಣಳಾಗಿದ್ದರು.
ಮರುಪರೀಕ್ಷೆಯಲ್ಲಿ ಭೌತಶಾಸ್ತ್ರದಲ್ಲಿ 51 ಅಂಕ ಗಳಿಸಿ ತೇರ್ಗಡೆಯಾದರೂ, ಗಣಿತದಲ್ಲಿ ಕೇವಲ 24 ಅಂಕಗಳನ್ನು ಮಾತ್ರ ಪಡೆದಿದ್ದರಿಂದ ದ್ವಿತೀಯ ಪಿಯುಸಿಯಲ್ಲೇ ಅನುತ್ತೀರ್ಣಳಾಗಿದ್ದಳು. ಆದರೂ ತಾನು ನೀಟ್ ಪರೀಕ್ಷೆ ಬರೆಯಲು ಅರ್ಹಳು ಎಂದು ಭ್ರಮೆಯಲ್ಲಿದ್ದಳು.
ನಿನ್ನೆಯಷ್ಟೇ ಏಕಾಏಕಿ ಭಾಗ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದು, ಪೋಷಕರು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನಲ್ಲಿ ಅವರು, “ನಮ್ಮ ಪುತ್ರಿ ಯಾವುದೋ ವಿಷಯದಲ್ಲಿ ಜಿಗುಪ್ಸೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯಾರ ಮೇಲೆಯೂ ದೂರುವುದಿಲ್ಲ” ಎಂದು ಹೇಳಿದ್ದರು.
ಆದರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಾಗ ಹೊಸ ಅಂಶಗಳು ಹೊರಬಿದ್ದಿವೆ. ಅಂಕಪಟ್ಟಿ ಪರಿಶೀಲನೆಯಿಂದ ಭಾಗ್ಯಶ್ರೀ ದ್ವಿತೀಯ ಪಿಯುಸಿಯಲ್ಲಿ ಫೇಲ್ ಆಗಿದ್ದುದ್ದು ಸ್ಪಷ್ಟವಾಗಿದೆ. ಮನೆಯಲ್ಲಿ ಸುಳ್ಳು ಕಥೆ ಹೇಳಿದ್ದ ಭಾಗ್ಯಶ್ರೀ ಅವರು, ನಿಜವಾದ ಅಂಕಗಳು ಗೊತ್ತಾಗಬಹುದು ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಭಾಗ್ಯಶ್ರೀ ನೀಟ್ ಪರೀಕ್ಷೆ ಬರೆದಿದ್ದಳು ನಿಜ, ಆದರೆ ಅದರ ಫಲಿತಾಂಶ ಬರುವ ಮುನ್ನವೇ ಅವಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದು, ಸ್ನೇಹಿತರು, ಟೀಚರ್ಗಳು ಮತ್ತು ಕುಟುಂಬದವರ ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ.
