ಬೆಂಗಳೂರು ಮುಂದಿನ 9 ವರ್ಷಗಳಲ್ಲಿ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ನಗರ.!

Untitled design 2026 05 05T204528.797

ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತೊಂದು ಜಾಗತಿಕ ಸಾಧನೆ ಮಾಡಿದೆ. ಪ್ರತಿಷ್ಠಿತ ಜಾಗತಿಕ ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆಯಾದ ಸಾವಿಲ್ಸ್ (Savills) ಇತ್ತೀಚೆಗೆ ಪ್ರಕಟಿಸಿರುವ ಸಂಶೋಧನಾ ವರದಿಯ ಪ್ರಕಾರ, 2035ರ ವೇಳೆಗೆ ಬೆಂಗಳೂರು ಇಡೀ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ಮಹಾನಗರವಾಗಿ ಹೊರಹೊಮ್ಮಲಿದೆ. ಜಾಗತಿಕ ಮಟ್ಟದಲ್ಲಿ ಒಟ್ಟು 245 ನಗರಗಳನ್ನು ಪರಿಗಣಿಸಲಾಗಿದ್ದು, ಆರ್ಥಿಕ ಮತ್ತು ಸಾಮಾಜಿಕ ಮಾನದಂಡಗಳಲ್ಲಿ ಬೆಂಗಳೂರು ಅಗ್ರಸ್ಥಾನ ಪಡೆದುಕೊಂಡಿದೆ.

ಬೆಂಗಳೂರಿಗೆ ಮೊದಲ ಸ್ಥಾನ ಏಕೆ ಸಿಕ್ಕಿತು?

ಬೆಂಗಳೂರಿನ ಈ ಐತಿಹಾಸಿಕ ಬೆಳವಣಿಗೆಗೆ ಇಲ್ಲಿನ ಅಪಾರ ಸಂಖ್ಯೆಯ ತಾಂತ್ರಿಕ ನೈಪುಣ್ಯತೆ ಹೊಂದಿರುವ ಯುವ ಪ್ರತಿಭೆಗಳು ಮತ್ತು ವಿಶ್ವ ದರ್ಜೆಯ ಶಿಕ್ಷಣ ಸಂಸ್ಥೆಗಳು ಮೂಲ ಕಾರಣ. ವಿಶ್ವದ ಅನೇಕ ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ತಂತ್ರಜ್ಞಾನ ಮತ್ತು ಕಾರ್ಯಾಚರಣಾ ಕೇಂದ್ರಗಳಿಗೆ (GCC) ಬೆಂಗಳೂರನ್ನು ಆಯ್ಕೆಮಾಡಿಕೊಳ್ಳುತ್ತಿವೆ. ಇದರಿಂದಾಗಿ ನಗರಕ್ಕೆ ಉದ್ಯೋಗಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬರುತ್ತಿದ್ದಾರೆ.

ಜೊತೆಗೆ, ವಾರ್ಷಿಕ 70,000 ಡಾಲರ್‌ಗೂ (ಸುಮಾರು 58 ಲಕ್ಷ ರೂಪಾಯಿ) ಹೆಚ್ಚು ಆದಾಯ ಹೊಂದಿರುವ ಶ್ರೀಮಂತ ಕುಟುಂಬಗಳ ಸಂಖ್ಯೆಯಲ್ಲೂ ಭಾರಿ ವೃದ್ಧಿಯಾಗಿದೆ. ಇದು ನಗರದ ಆರ್ಥಿಕತೆಗೆ ದೊಡ್ಡ ಪ್ರಮಾಣದ ಬಲವನ್ನು ಒದಗಿಸುತ್ತಿದೆ. ಈ ಎಲ್ಲಾ ಅಂಶಗಳು ಬೆಂಗಳೂರನ್ನು ಜಾಗತಿಕ ಆರ್ಥಿಕ ಕೇಂದ್ರವಾಗಿ ಅಭಿವೃದ್ಧಿಪಡಿಸಿದೆ.

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಭಾರಿ ಬದಲಾವಣೆ

ಬೆಂಗಳೂರಿನ ತ್ವರಿತ ಬೆಳವಣಿಗೆಯಿಂದಾಗಿ ಮುಂದಿನ ಒಂದು ದಶಕದಲ್ಲಿ ರಿಯಲ್ ಎಸ್ಟೇಟ್ ಉದ್ಯಮವು ಅಭೂತಪೂರ್ವ ಬದಲಾವಣೆಗಳನ್ನು ಕಾಣಲಿದೆ. ಜಾಗತಿಕ ಸಂಸ್ಥೆಗಳ ವಿಸ್ತರಣೆಯಿಂದಾಗಿ ಅತ್ಯಾಧುನಿಕ, ಪರಿಸರ ಸ್ನೇಹಿ ಮತ್ತು ಸ್ಮಾರ್ಟ್ ಆಫೀಸ್ ಸ್ಪೇಸ್ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದರಿಂದಾಗಿ ವಾಣಿಜ್ಯ ಮತ್ತು ವಸತಿ ಅಚಲಾಸ್ತಿಯ ಮೌಲ್ಯಗಳು ಗಗನಕ್ಕೇರುತ್ತಿವೆ.

ಭಾರತದ ರಿಯಲ್ ಎಸ್ಟೇಟ್ ವಲಯಕ್ಕೆ ಖಾಸಗಿ ಈಕ್ವಿಟಿ (PE) ಹೂಡಿಕೆಯು ಶೇ. 66 ರಷ್ಟು ಹೆಚ್ಚಾಗಿದೆ. ಹೆಚ್ಚಿನ ಪ್ರಮಾಣದ ವಿದೇಶಿ ಹಣ ನೇರವಾಗಿ ಬೆಂಗಳೂರಿಗೆ ಹರಿದು ಬರುತ್ತಿದೆ. ಮುಂಬರುವ ವರ್ಷಗಳಲ್ಲಿ ಬೆಂಗಳೂರು ಏಷ್ಯಾದ ಪ್ರಮುಖ ಹೂಡಿಕಾ ಕೇಂದ್ರಗಳಲ್ಲಿ ಒಂದಾಗಲಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಸಾವಿಲ್ಸ್ ವರದಿಯ ಪ್ರಕಾರ, ವಿಶ್ವದ ವೇಗವಾಗಿ ಬೆಳೆಯುತ್ತಿರುವ ಮೊದಲ 20 ನಗರಗಳ ಪೈಕಿ ಶೇಕಡಾ 85 ರಷ್ಟು ನಗರಗಳು ಏಷ್ಯಾ ಪೆಸಿಫಿಕ್ ವಲಯಕ್ಕೆ ಸೇರಿವೆ. ಭಾರತದ ಪರಿಸ್ಥಿತಿ ಇನ್ನಷ್ಟು ಉತ್ತಮವಾಗಿದೆ. ಬೆಂಗಳೂರು ಮಾತ್ರವಲ್ಲದೆ, ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಕೋಲ್ಕತ್ತಾ ನಗರಗಳು ಕೂಡ ಅಗ್ರ ಸ್ಥಾನಗಳಲ್ಲಿ ಸ್ಥಾನ ಪಡೆದಿವೆ.

Exit mobile version