ಬೆಂಗಳೂರು: ಬೆಂಗಳೂರು ನಗರ ಹಾಗೂ ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ಸರಗಳ್ಳತನ (Chain Snatching Crime) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೇ ಸಾಲಿನಲ್ಲಿ ಇದೀಗ ನೆಲಮಂಗಲ (Nelamangala) ಸಮೀಪದ ಹುಸ್ಕೂರು ಗ್ರಾಮದಲ್ಲಿ ನಡೆದ ಭೀಕರ ಘಟನೆಯೊಂದು ನಡೆದಿದೆ. ಸರಗಳ್ಳರು ಮಹಿಳೆಯ ಮುಖಕ್ಕೆ ಸ್ಪ್ರೇ ಸಿಂಪಡಿಸಿ, ಚಿನ್ನದ ಮಾಂಗಲ್ಯ ಸರವನ್ನು ಕಸಿದು ಪರಾರಿಯಾಗಿದ್ದು, ಇದರ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ..
ಮೃತ ಮಹಿಳೆಯನ್ನು ಜ್ಯೋತಿ (45) ಎಂದು ಗುರುತಿಸಲಾಗಿದ್ದು, ಅವರು ಹುಸ್ಕೂರು ಗ್ರಾಮದ ನಿವಾಸಿಯಾಗಿದ್ದಾರೆ. ಪ್ರತಿದಿನದಂತೆ ಜ್ಯೋತಿ ಬೆಳಿಗ್ಗೆ ಎದ್ದು ಮನೆಯ ಮುಂದೆ ಕಸ ಗುಡಿಸುವ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಆಕೆಯ ಬಳಿ ನುಗ್ಗಿದ್ದಾರೆ. ಯಾವುದೇ ಮುನ್ಸೂಚನೆ ನೀಡದೇ, ಆಕೆಯ ಮುಖಕ್ಕೆ ಸ್ಪ್ರೇ ಸಿಂಪಡಿಸಿ ಕಣ್ಣು, ಉಸಿರಾಟಕ್ಕೆ ತೊಂದರೆ ಉಂಟುಮಾಡಿದ್ದಾರೆ.
ಸ್ಪ್ರೇ ದಾಳಿಯಿಂದ ಏನು ನಡೆಯುತ್ತಿದೆ ಎಂಬುದನ್ನೇ ಅರಿಯದ ಸ್ಥಿತಿಯಲ್ಲಿ ಇದ್ದ ಜ್ಯೋತಿ, ಕುತ್ತಿಗೆಯಲ್ಲಿದ್ದ ಸುಮಾರು 70 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಸಿದುಕೊಳ್ಳಲು ಕಳ್ಳರು ಮುಂದಾಗಿದ್ದಾರೆ. ಕ್ಷಣಾರ್ಧದಲ್ಲೇ ಸರವನ್ನು ಕಿತ್ತುಕೊಂಡು, ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಸ್ಪ್ರೇ ಪರಿಣಾಮದಿಂದ ತೀವ್ರ ಅಸ್ವಸ್ಥಗೊಂಡ ಜ್ಯೋತಿ ಅಲ್ಲಿಯೇ ಕುಸಿದು ಬಿದ್ದಿದ್ದಾರೆ.
ಘಟನೆಯನ್ನು ಗಮನಿಸಿದ ಕುಟುಂಬಸ್ಥರು ಮತ್ತು ಸ್ಥಳೀಯರು ತಕ್ಷಣ ಜ್ಯೋತಿಯನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ, ಮಹಿಳೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಯೋತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಘಟನೆ: ತಾಯಿಯ ಖಾಸಗಿ ಫೋಟೋ ಪ್ರಿಯಕರನಿಗೆ ಕಳುಹಿಸಿದ ಮಗಳು
ಬೆಂಗಳೂರು: ಬೆಂಗಳೂರಿನಲ್ಲಿ ತಾಯಿಯ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಮಗಳು ತನ್ನ ಪ್ರಿಯಕರನಿಗೆ ಕಳುಹಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಘಟನೆಯ ವಿವರದಂತೆ, 23 ವರ್ಷದ ಯುವತಿ ವಿದ್ಯಾಭ್ಯಾಸದ ಉದ್ದೇಶಕ್ಕಾಗಿ ಪೋಷಕರಿಂದ ಮೊಬೈಲ್ ಫೋನ್ ಪಡೆದಿದ್ದಳು. ಕಳೆದ ಕೆಲವು ತಿಂಗಳುಗಳಿಂದ ಆಕೆ ಅಪರಿಚಿತ ಯುವಕನೊಂದಿಗೆ ನಿರಂತರವಾಗಿ ಮಾತನಾಡುತ್ತಿರುವುದನ್ನು ಕುಟುಂಬದವರು ಗಮನಿಸಿದ್ದಾರೆ. ಈ ಕುರಿತು ತಾಯಿ ಪ್ರಶ್ನಿಸಿದಾಗ, ಮಗಳು ಮೊಬೈಲ್ ಹಾಗೂ ಅದರ ಪಾಸ್‌ವರ್ಡ್ ನೀಡಲು ನಿರಾಕರಿಸಿದ್ದಾಳೆ. ಈ ವರ್ತನೆ ಕುಟುಂಬದವರಲ್ಲಿ ಅನುಮಾನ ಮೂಡಿಸಿತ್ತು.
ಈ ವಿಷಯವನ್ನು ತಾಯಿ ತನ್ನ ಪತಿಗೆ ತಿಳಿಸಿದ್ದು, ನಂತರ ಕುಟುಂಬದವರು ಮಗಳ ಮೇಲೆ ನಿಗಾ ಇಟ್ಟಿದ್ದರು. ಇತ್ತೀಚೆಗೆ ಮಗಳ ಮೊಬೈಲ್ ಪಾಸ್‌ವರ್ಡ್ ಪಡೆದ ತಾಯಿ, ಫೋನ್ ಪರಿಶೀಲಿಸಿದಾಗ ಅಚ್ಚರಿಗೊಳಿಸುವ ಸತ್ಯ ಹೊರಬಿದ್ದಿದೆ. ಮಗಳು ತನ್ನ ಪ್ರಿಯಕರನಿಗೆ ತಾಯಿಯ ಹಾಗೂ ತಾಯಿಯ ಸಹೋದರಿಯ ಕೆಲವು ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸಿದ್ದಾಳೆ ಎಂಬುದು ಪತ್ತೆಯಾಗಿದೆ.
ಮಗಳ ಈ ಕೃತ್ಯದಿಂದ ತಾಯಿ ಸಂಪೂರ್ಣವಾಗಿ ನೊಂದು ಹೋಗಿದ್ದು, ಕುಟುಂಬದ ಗೌರವ ಮತ್ತು ಗೌಪ್ಯತೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿದ್ದಾರೆ. ವಿಷಯವನ್ನು ಮನೆಯೊಳಗೆ ಬಗೆಹರಿಸಿಕೊಳ್ಳುವ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ, ತಾಯಿ ನೇರವಾಗಿ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ತೆರಳಿ ಮಗಳು ಹಾಗೂ ಆಕೆಯ ಪ್ರಿಯಕರನ ವಿರುದ್ಧ ದೂರು ದಾಖಲಿಸಿದ್ದಾರೆ.
ದೂರು ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಹಾಗೂ ಸಂಬಂಧಿತ ಕಾನೂನು ವಿಧಿಗಳ ಅಡಿಯಲ್ಲಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
