ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕುತ್ತಿಗೆ ಹಿಸುಕಿ ಕೊಲೆಗೈದ ಪಾಪಿ ಪತಿ

Your paragraph text (13)

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಯ ಕುತ್ತಿಗೆಯನ್ನು ಹಿಸುಕಿ, ಕಾಲಿನಿಂದ ತುಳಿದು ದಾರುಣವಾಗಿ ಕೊಲೆ ಮಾಡಿರುವ ಘಟನೆ ಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಪದ್ಮಜಾ (29) ಎಂದು ಗುರುತಿಸಲಾಗಿದ್ದು, ಆರೋಪಿ ಪತಿ ಹರೀಶ್ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮೂಲದ ಈ ದಂಪತಿಗಳು ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ವಾಸವಾಗಿದ್ದರು. ಇಬ್ಬರೂ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಕೆಲವು ತಿಂಗಳಿಂದ ಆರೋಪಿ ಹರೀಶ್ ಕೆಲಸವನ್ನು ಬಿಟ್ಟು ಮನೆಯಲ್ಲಿದ್ದ. ಇದೇ ವಿಷಯವು ದಂಪತಿಗಳ ನಡುವೆ ಆಗಾಗ್ಗೆ ಜಗಳಕ್ಕೆ ಕಾರಣವಾಗಿತ್ತು. ಆರ್ಥಿಕ ಸಂಕಷ್ಟ, ಕೆಲಸದ ಒತ್ತಡ ಮತ್ತು ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದಾಗಿ ಇವರ ಸಂಸಾರಿಕ ಜೀವನದಲ್ಲಿ ಬಿರುಕು ಮೂಡಿತ್ತು.

ಘಟನೆಯ ದಿನವಾದ ಮಂಗಳವಾರ ರಾತ್ರಿ, ಪದ್ಮಜಾ ಶಾಪಿಂಗ್‌ಗೆ ಹೋಗಿದ್ದ ಕಾರಣಕ್ಕೆ ಇಬ್ಬರ ನಡುವೆ ಮತ್ತೊಮ್ಮೆ ತೀವ್ರ ಜಗಳವಾಗಿದೆ. ಈ ಜಗಳದಿಂದ ಕೋಪಗೊಂಡು ಹರೀಶ್‌ ತನ್ನ ಪತ್ನಿ ಪದ್ಮಜಾಳನ್ನು ದೈಹಿಕವಾಗಿ ದಾಳಿ ಮಾಡಿದ್ದಾನೆ. ಮೊದಲಿಗೆ ಕೈಯಿಂದ ಕುತ್ತಿಗೆಯನ್ನು ಹಿಸುಕಿದ ಅವನು, ಬಳಿಕ ಪದ್ಮಜಾಳನ್ನು ನೆಲಕ್ಕೆ ತಳ್ಳಿ, ಕಾಲಿನಿಂದ ಕುತ್ತಿಗೆಯ ಮೇಲೆ ತುಳಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಘಟನೆಯ ಸ್ಥಳಕ್ಕೆ ಭೇಟಿ ನೀಡಿದ ಬೊಮ್ಮನಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿ ಹರೀಶ್ ಕುಮಾರ್‌ನನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು, ತನಿಖೆಯನ್ನು ಆರಂಭಿಸಿದ್ದಾರೆ.

 

 

Exit mobile version