ಕಾಲೇಜು ವಿದ್ಯಾರ್ಥಿನಿಯನ್ನು ಹೊತ್ತೊಯ್ದು ಅತ್ಯಾಚಾ*ರ

ಬೆಂಗಳೂರು: ಬೆಂಗಳೂರಿನ ವೈಟ್ಫೀಲ್ಡ್ ಪ್ರದೇಶದಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಹೊತ್ತೊಯ್ದು ಅತ್ಯಾಚಾರ ಮಾಡಿದ ಘಟನೆ ನಡೆದು ಜನರಲ್ಲಿ ಆತಂಕವನ್ನು ಉಂಟುಮಾಡಿದೆ. ಓದುತ್ತಿದ್ದಾಗ ನಿದ್ದೆ ಬರುತ್ತಿದೆ ಎಂದು ಟೀ ಕುಡಿಯಲು ಹೋಗಿದ್ದ ವಿದ್ಯಾರ್ಥಿನಿಯನ್ನು ಅಪರಿಚಿತ ವ್ಯಕ್ತಿ ಹಿಂಬಾಲಿಸಿ, ಪಿಜಿ ಗೇಟ್ ಬಳಿಯಲ್ಲೇ ಕತ್ತು ಹಿಸುಕಿ ಪ್ರಜ್ಞೆ ತಪ್ಪಿಸಿ, ಸಮೀಪದ ಶೆಡ್ಗೆ ಹೊತ್ತೊಯ್ದು ಪೈಶಾಚಿಕ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಪ್ರಕರಣದ ವಿವರಗಳ ಪ್ರಕಾರ, ವಿದ್ಯಾರ್ಥಿನಿ ತನ್ನ ಪಿಜಿ ನಿವಾಸದಿಂದ ಟೀ ಕುಡಿಯಲು ಹೊರಟಿದ್ದಳು. ಟೀ ಕುಡಿದು ವಾಪಸ್ಸು ಬರುತ್ತಿದ್ದಾಗ ಅಪರಿಚಿತ ವ್ಯಕ್ತಿ ಅವಳನ್ನು ಹಿಂಬಾಲಿಸಿದನು. ಭಯದಿಂದ ಪಿಜಿ ಗೇಟ್ ಒಳಗೆ ಓಡಿ ಬಂದಿದ್ದ ವಿದ್ಯಾರ್ಥಿನಿಯನ್ನು ಆತ ಬಿಡದೆ ಹಿಂಬಾಲಿಸಿ, ಗೇಟ್ ಬಳಿಯಲ್ಲೇ ಕತ್ತು ಹಿಸುಕಿ ಅವಳನ್ನು ಪ್ರಜ್ಞೆ ತಪ್ಪಿಸಿದ್ದಾನೆ. ಬಳಿಕ ಸಮೀಪದ ಶೆಡ್ಗೆ ಹೊತ್ತೊಯ್ದು ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಯುವತಿ ಎಚ್ಚರಗೊಂಡಾಗ ತಾನು ಶೆಡ್ ಒಳಗೆ ನಗ್ನವಾಗಿ ಇದ್ದುದನ್ನು ಕಂಡು ಆಘಾತಕ್ಕೊಳಗಾಗಿದ್ದಾಳೆ ಎಂದು ತಿಳಿದುಬಂದಿದೆ. ಸದ್ಯ ಆಕೆಯ ಸ್ನೇಹಿತರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪಿಜಿ ಸೆಕ್ಯುರಿಟಿ ಗಾರ್ಡ್ ಘಟನೆ ಗಮನಿಸಿ ತಕ್ಷಣ ಪೊಲೀಸರಿಗೆ ಮತ್ತು ಪಿಜಿ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಗುರುತಿಸಲು ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಆರೋಪಿ ಬಗ್ಗೆ ಮಾಹಿತಿ ನೀಡುವವರಿಗೆ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ.

ಘಟನೆಯ ವಿಷಯ ತಿಳಿದು ವಿದ್ಯಾರ್ಥಿನಿ ವಾಸಿಸುವ ಪಿಜಿ ಸುತ್ತಮುತ್ತಲಿನ ವಿದ್ಯಾರ್ಥಿಗಳು ಮತ್ತು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಪಿಜಿ ಹತ್ತಿರವೇ ಇಂತಹ ಘಟನೆ ನಡೆಯುತ್ತಿರುವುದು ಭಯಾನಕ. ವಿದ್ಯಾರ್ಥಿನಿಯರ ಸುರಕ್ಷತೆಗೆ ಸರ್ಕಾರ ಮತ್ತು ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕುಎಂದು ಅವರು ಆಗ್ರಹಿಸಿದ್ದಾರೆ.

ಪೊಲೀಸ್ ಆಯುಕ್ತರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಸೂಚಿಸಿದ್ದಾರೆ. ಆರೋಪಿಯನ್ನು ಬೇಗ ಬಂಧಿಸುವುದಾಗಿ ಭರವಸೆ ನೀಡಿದ್ದಾರೆ. ಘಟನೆಯು ಬೆಂಗಳೂರಿನಲ್ಲಿ ವಿದ್ಯಾರ್ಥಿನಿಯರ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಎತ್ತಿದೆ.

Exit mobile version