ಬೆಂಗಳೂರು; (ಸೆ.24, 2025) ದೇವಾಲಯದಲ್ಲಿ ಬೆಳಗ್ಗೆ ಭಕ್ತಿಯಿಂದ ಪೂಜೆ ಸಲ್ಲಿಸುವ ಅರ್ಚಕರಾದರೆ, ರಾತ್ರಿಯಾದರೆ ಅದೇ ದೇವಾಲಯದ ವಸ್ತುಗಳನ್ನ ಕಳ್ಳತನಕ್ಕೆ ಮಾಡುವ ಘಟನೆಯಲ್ಲಿ ಬೆಂಗಳುರಿನಲ್ಲಿ ನಡೆದಿದೆ. ದೇವಾಲಯಗಳಿಂದ ಚಿನ್ನಾಭರಣ ಮತ್ತು ಬೆಲೆಬಾಳುವ ವಸ್ತುಗಳನ್ನು ಕದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಪ್ರವೀಣ್ ಭಟ್ ಮತ್ತು ಸಂತೋಷ್ ಜೈಲಿನಲ್ಲಿ ಆರಂಭವಾದ ತಮ್ಮ ‘ಪಾಲುದಾರಿಕೆ’ಯಿಂದ ಈ ಕೃತ್ಯವನ್ನು ಯೋಜನಾಬದ್ಧವಾಗಿ ನಡೆಸಿದ್ದಾರೆ.
ದೇವಾಲಯದ ಅರ್ಚಕನಿಂದ ಕಳ್ಳತನ
ಪ್ರವೀಣ್ ಭಟ್, ಉಡುಪಿ ಮತ್ತು ಶಿವಮೊಗ್ಗದ ಪ್ರತಿಷ್ಠಿತ ದೇವಾಲಯಗಳಲ್ಲಿ ಅರ್ಚಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಬೆಳಗ್ಗೆ ದೇವರಿಗೆ ಪೂಜೆ, ಹೋಮ, ಹವನ ಮಾಡುವ ಈತ, ರಾತ್ರಿಯಾದರೆ ಸಾಕು, ಅದೇ ದೇವಾಲಯದ ಬೆಲೆಬಾಳುವ ಬೆಳ್ಳಿ ಸಾಮಗ್ರಿಗಳು, ಹಿತ್ತಾಳೆ ವಸ್ತುಗಳು ಮತ್ತು ಚಿನ್ನಾಭರಣಗಳನ್ನು ಕದ್ದು ಮಾರಾಟ ಮಾಡುತ್ತಿದ್ದ. ಅರ್ಚಕನ ಗೌರವಾನ್ವಿತ ಸ್ಥಾನದಿಂದಾಗಿ ಈ ವಸ್ತುಗಳನ್ನು ಖರೀದಿಸುವವರು ಯಾವುದೇ ಅನುಮಾನ ಪಡದೆ ಒಪ್ಪಿಕೊಳ್ಳುತ್ತಿದ್ದರು. ಮನೆಯಲ್ಲಿ ಕಷ್ಟವಿದೆ, ಇಂತಹ ವಸ್ತುಗಳು ಮನೆಯಲ್ಲಿ ತುಂಬಿವೆ ಎಂದು ಪ್ರವೀಣ್ ತನ್ನ ಕೃತ್ಯಕ್ಕೆ ಸಮರ್ಥನೆ ನೀಡುತ್ತಿದ್ದ.
ಆದರೆ, ಒಂದು ದಿನ ಕಳ್ಳತನದ ಪ್ರಕರಣದಲ್ಲಿ ಸಿಕ್ಕಿಬಿದ್ದ ಈತ ಜೈಲಿಗೆ ಸೇರಿದ. ಜೈಲಿನಲ್ಲಿ ಈತನಿಗೆ ಸಂತೋಷ್ ಎಂಬಾತನ ಪರಿಚಯವಾಯಿತು. ಇಬ್ಬರೂ ಜೈಲಿನಿಂದ ಬಿಡುಗಡೆಯಾದ ನಂತರ ಕಳ್ಳತನದ ‘ಪಾಲುದಾರಿಕೆ’ ಆರಂಭಿಸಿದರು. ಬೆಂಗಳೂರಿನ ಪ್ರಸಿದ್ಧ ದೇವಾಲಯಗಳಾದ ಬನಶಂಕರಿ ದೇವಾಲಯ ಮತ್ತು ಇತರ ಕಡೆಗಳಿಗೆ ಕನ್ನ ಹಾಕಿದರು.
ಯೋಜನಾಬದ್ಧ ಕಳ್ಳತನ
ಪ್ರವೀಣ್ ಭಟ್ ಮತ್ತು ಸಂತೋಷ್ ತಮ್ಮ ಕೃತ್ಯಕ್ಕೆ ಸೂಕ್ಷ್ಮ ಯೋಜನೆ ರೂಪಿಸಿದ್ದರು. ಕದ್ದ ವಸ್ತುಗಳನ್ನು ಒಂದು ಅಂಗಡಿಯಲ್ಲಿ ಮಾರಾಟ ಮಾಡಿದರೆ ಮತ್ತೆ ಆ ಅಂಗಡಿಗೆ ಹೋಗದೆ ಬೇರೆಡೆಗೆ ತೆರಳುತ್ತಿದ್ದರು. ಇದರಿಂದ ಯಾರಿಗೂ ಅನುಮಾನ ಬಾರದಂತೆ ಎಚ್ಚರಿಕೆ ವಹಿಸಿದ್ದರು. ಆದರೆ ಬನಶಂಕರಿ ದೇವಾಲಯದ ಆಡಳಿತ ಮಂಡಳಿಯು ನಡೆಸಿದ ತಪಾಸಣೆಯಲ್ಲಿ ಕಳ್ಳತನ ಬಯಲಾಯಿತು. ದೇವಾಲಯದಿಂದ ಕದ್ದ ಸಾಮಗ್ರಿಗಳ ಬಗ್ಗೆ ದೂರು ದಾಖಲಾದಾಗ ಪೊಲೀಸರು ತನಿಖೆ ಆರಂಭಿಸಿದರು.
ಗೊಟ್ಟಿಗೇರೆ ಬಳಿಯ ಬನ್ನೇರುಘಟ್ಟ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ಇಬ್ಬರೂ ಪೊಲೀಸರ ಕೈಗೆ ಸಿಕ್ಕಿಬಿದ್ದರು. ತನಿಖೆಯಲ್ಲಿ ಇವರು ಬೆಂಗಳೂರಿನ ಬನಶಂಕರಿ, ಜಯನಗರ, ಕುಮಾರಸ್ವಾಮಿ, ಜೆಪಿ ನಗರ ಸೇರಿದಂತೆ ಹಲವು ದೇವಾಲಯಗಳಲ್ಲಿ ಕಳ್ಳತನ ಮಾಡಿದ್ದು ದೃಢಪಟ್ಟಿತು. ಒಟ್ಟು 14 ಲಕ್ಷ ರೂಪಾಯಿ ಮೌಲ್ಯದ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ಕಾರ್ಯಾಚರಣೆ
ಬೆಂಗಳೂರಿನ 11 ಪೊಲೀಸ್ ಠಾಣೆಗಳಲ್ಲಿ ಈ ಇಬ್ಬರ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ದೇವಾಲಯದ ಆಡಳಿತ ಮಂಡಳಿಗಳು ಮತ್ತು ಸ್ಥಳೀಯರ ಸಹಕಾರದಿಂದ ಈ ಕೃತ್ಯ ಬಯಲಿಗೆ ಬಂದಿದೆ. ಆರೋಪಿಗಳು ಪ್ರತಿ ಕಳ್ಳತನದ ನಂತರ ದೇವರ ಮುಂದೆ ಕ್ಷಮೆಯಾಚಿಸುತ್ತಿದ್ದರೂ ಕಾನೂನಿನ ಕೈಗೆ ತಪ್ಪಿಸಿಕೊಳ್ಳಲಿಲ್ಲ.