ಬಿಸಿಲಿನ ಬೇಗೆಯಿಂದ ಬೇಸತ್ತಿದ್ದ ಜನರಿಗೆ ಮಳೆರಾಯ ಮುಂಜಾನೆಯಿಂದಲೇ ತಂಪೆರೆದಿದ್ದಾನೆ. ಹೌದು ರಾಜ್ಯದ ಜನರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಾನಾ ರೀತಿಯ ತಂಪು ಪಾನೀಯಗಳನ್ನು ಸೇವಿಸುವ ಮೂಲಕ ಕೊಂಚ ಬಿಸಿಲಿನ ಶಾಖದಿಂದ ದೇಹವನ್ನು ತಂಪು ಮಾಡಿಕೊಳ್ಳುತ್ತಿದ್ದರು. ಇಂದು ಮುಂಜಾನೆಯಿಂದಲೇ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ದೂಳು ತುಂಬಿದ್ದ ವಾತಾವರಣ ತಿಳಿಯಾಗಿದ್ದು, ಹಲವರಿಗೆ ಖುಷಿಯಾದರೆ, ಮತ್ತೊಂದೆಡೆ ತಮ್ಮ ನಿತ್ಯದ ಕೆಲಸಗಳಿಗಾಗಿ ಮನೆಯಿಂದ ಹೊರ ಬಂದಿದ್ದ ವಾಹನ ಸವಾರರು ಈ ಮಳೆಯಿಂದಾಗಿ ಹೈರಾಣಾಗಿದ್ದಾರೆ. ಮುಂದಿನ ಒಂದು ವಾರಗಳ ಕಾಲ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಎಲ್ಲೆಲ್ಲಿ ಮಳೆ:
ಸಿಲಿಕಾನ್ ಸಿಟಿ ಬೆಂಗಳೂರಿನ ರಾಜಭವನ, ಜಾಲಹಳ್ಳಿ, ಡೈರಿ ಸರ್ಕಲ್, ಯಶವಂತಪುರ, ಕಬ್ಬನ್ ಪಾರ್ಕ್, ಎಮ್ ಎಸ್ ಪಾಳ್ಯ, ವಿದ್ಯಾರಣ್ಯಪುರ ಸೇರಿ ಹಲವೆಡೆ ಮಳೆಯಾಗಿದೆ. ಇನ್ನೂ ಬೆಳಿಗ್ಗೆ ಆರಂಭವಾದ ಮಳೆಯಿಂದಾಗಿ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಮತ್ತು ವಾಹನ ಸವಾರರಿಗೆ ಕಿರಿಕಿರಿ ಅನುಭವವಾಗಿದೆ. ಬಂಗಾಳಕೊಲ್ಲಿಯಲ್ಲಿ ಮಳೆ ಮಾರುತಗಳು ಚುರುಕುಗೊಂಡಿರುವ ಹಿನ್ನಲೆಯಲ್ಲಿ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಮತ್ತು ಕರಾವಳಿಯಲ್ಲಿ ಹೆಚ್ಚು ಮಳೆಯಾಗಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಗದಗ, ಧಾರವಾಡ, ಬೀದರ್, ಕಲಬುರಗಿ, ಚಾಮರಾಜನಗರ, ಗದಗ, ವಿಜಯಪುರ, ಚಿತ್ರದುರ್ಗ, ಕೊಡಗು, ದಾವಣಗೆರೆ, ಹಾಸನ, ಮೈಸೂರು, ತುಮಕೂರು, ಶಿವಮೊಗ್ಗ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ನೀಡಲಾಗಿದೆ. ಮುಂದಿನ ಒಂದು ವಾರ ಗಾಳಿ ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.