ಒಂಟಿಯಾಗಿ ಓಡಾಡೋ ಮಹಿಳೆಯರೇ ಈತನ ಟಾರ್ಗೆಟ್: ಸೈಕೋ ಕಾಮುಕ ಅರೆಸ್ಟ್

Untitled design 2025 12 15T105141.636

ಬೆಂಗಳೂರು, ಡಿಸೆಂಬರ್ 15: ರಾಜ್ಯ ರಾಜಧಾನಿ ಬೆಂಗಳೂರು, ಸಿಲಿಕಾನ್ ಸಿಟಿ ಎಂದು ಕರೆಯುವ ನಗರದಲ್ಲಿ ಮಹಿಳೆಯರ ಸುರಕ್ಷತೆ ಇಂದಿಗೂ ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಇತ್ತಿಚೇಗೆ ನಗರದಲ್ಲಿ ಮಹಿಳೆಯರು ಒಬ್ಬಂಟಿಯಾಗಿ ರಸ್ತೆಯಲ್ಲಿ ಓಡಾಡುವುದು ಕಷ್ಟಕರವಾಗಿದೆ. ಇದರಂತೆ ಬೆಂಗಳೂರಿನಲ್ಲಿ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಮುಕ ವಿನೋದ್ ಎಂಬ ವ್ಯಕ್ತಿಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ವಿನೋದ್, ಕಳೆದ ಒಂದು ತಿಂಗಳಿಂದ ರಸ್ತೆಗಳಲ್ಲಿ ಹಠಾತ್ ಪ್ರತ್ಯಕ್ಷನಾಗಿ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ. ಸಂಜೆ ಸಮಯದಲ್ಲಿ ನಡೆದುಕೊಂಡು ಹೋಗುವ ಮಹಿಳೆಯರು, ಬೈಕ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರನ್ನು ಅಡ್ಡಗಟ್ಟಿ ತಬ್ಬಿಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದ. ಮಹಿಳೆಯರ ಖಾಸಗಿ ಅಂಗಗಳನ್ನು ಮುಟ್ಟಿ ಹಿಂಸಿಸುತ್ತಿದ್ದ. ಡಿಸೆಂಬರ್ 2 ರಂದು ಸುಂಕದಕಟ್ಟೆ ಬಳಿಯ ಶ್ರೀನಿವಾಸ ಸರ್ಕಲ್‌ನಲ್ಲಿ ನಡೆದ ಘಟನೆಯು ಈತನ ಬಂಧನಕ್ಕೆ ಕಾರಣವಾಯಿತು.

ಒಬ್ಬ ಮಹಿಳೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ರಸ್ತೆಯಲ್ಲಿ ಗುಂಡಿ ಇದ್ದ ಕಾರಣ ನಿಧಾನಗತಿಯಲ್ಲಿ ಚಲಿಸುತ್ತಿದ್ದರು. ತಕ್ಷಣ ಓಡಿಬಂದ ವಿನೋದ್ ಬೈಕ್ ಅಡ್ಡಗಟ್ಟಿ ನಿಲ್ಲಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಹಿಂದಿನಿಂದ ಕಾರಿನಲ್ಲಿ ಬರುತ್ತಿದ್ದ ಮಹಿಳೆಯ ಪತಿ ಆರೋಪಿಯನ್ನು ಹಿಡಿಯಲು ಯತ್ನಿಸಿದರೂ, ಆತ ತಪ್ಪಿಸಿಕೊಂಡು ಪರಾರಿಯಾಗಿದ್ದನು. ಆದರೆ ಮಹಿಳೆ ತಕ್ಷಣ 112 ಗೆ ಕರೆ ಮಾಡಿ ದೂರು ನೀಡಿದರು. ಹೊಯ್ಸಳ ಪೊಲೀಸರ ಸಹಾಯದಿಂದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದರು.

ವಿಚಾರಣೆಯ ಸಮಯದಲ್ಲಿ ವಿನೋದ್ ತನ್ನ ಕೃತ್ಯಗಳ ಬಗ್ಗೆ ಹೇಳಿಕೆ ನೀಡಿದ್ದಾನೆ. “ಯಾರೂ ದೂರು ನೀಡಲ್ಲ, ಸಿಕ್ಕಿಬೀಳಲ್ಲ” ಎಂಬ ಧೈರ್ಯದಿಂದ ಈ ರೀತಿ ವರ್ತಿಸುತ್ತಿದ್ದೆ ಎಂದು ಆತ ಹೇಳಿದ್ದಾನೆ.

Exit mobile version