ಡ್ರಗ್ಸ್ ದಂಧೆಕೋರರ ಜೊತೆ ಶಾಮೀಲಾದ್ರೆ ಹುಷಾರ್ ! ಬೆಂಗಳೂರಿನ 26 ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ

Untitled design 2026 03 22T110902.099

ಬೆಂಗಳೂರು: ಸಿಲಿಕಾನ್ ಸಿಟಿಯನ್ನು ಮಾದಕ ವಸ್ತು ಮುಕ್ತವನ್ನಾಗಿಸಲು ಪಣ ತೊಟ್ಟಿರುವ ಬೆಂಗಳೂರು ಪೊಲೀಸರು, ಡ್ರಗ್ಸ್ ಜಾಲದ ವಿರುದ್ಧ ಐತಿಹಾಸಿಕ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ 104 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ನಾಶಪಡಿಸುವ ಮೂಲಕ ಡ್ರಗ್ಸ್‌ ಮಾಫಿಯಾಕ್ಕೆ ಭಾರಿ ಪೆಟ್ಟು ನೀಡಿದ್ದಾರೆ. ಈ ಕಾರ್ಯಾಚರಣೆಯು ಕೇವಲ ಪೆಡ್ಲರ್‌ಗಳಿಗೆ ಸೀಮಿತವಾಗದೆ, ದಂಧೆಗೆ ಸಹಕರಿಸಿದ ಇಲಾಖೆಯೊಳಗಿನ ಪೊಲೀಸರಿಗೂ ಬಿಸಿ ಮುಟ್ಟಿಸಿದ್ದಾರೆ.

ಡ್ರಗ್ಸ್ ದಂಧೆಕೋರರ ಜೊತೆ ಕೈಜೋಡಿಸಿದ ಆರೋಪದ ಮೇಲೆ ಹಾಗೂ ತಮ್ಮ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟ ತಡೆಯಲು ವಿಫಲರಾದ 26 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಕರ್ತವ್ಯ ಲೋಪ ಎಸಗುವವರ ವಿರುದ್ಧ ಇಲಾಖೆ ಕಠಿಣ ಸಂದೇಶ ರವಾನಿಸಿದೆ. ಮಾದಕ ವಸ್ತು ಮುಕ್ತ ಕರ್ನಾಟಕ ಗುರಿ ತಲುಪಲು ಎನ್‌ಸಿಬಿ ಮಾದರಿಯಲ್ಲೇ ರಾಜ್ಯದಲ್ಲಿ ‘ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ’ (ANTF) ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.

2025ರ ಕಾರ್ಯಾಚರಣೆಯ ಅಂಕಿಅಂಶಗಳು

ಕಳೆದ ವರ್ಷ ಪೊಲೀಸರು ನಡೆಸಿದ ಕಾರ್ಯಾಚರಣೆ ಬೆಚ್ಚಿಬೀಳಿಸುವಂತಿದೆ. ನಿಖರ ಮಾಹಿತಿ ಪ್ರಕಾರ ದಾಖಲಾದ ಪ್ರಕರಣಗಳು 6,824, ವಶಪಡಿಸಿಕೊಂಡ ಮಾದಕ ವಸ್ತುಗಳು 10,084 ಕೆ.ಜಿ, ಜಪ್ತಿಯಾದ ಮೌಲ್ಯ ₹104 ಕೋಟಿ, ಕಳೆದ ನಾಲ್ಕು ವರ್ಷಗಳಲ್ಲಿ  315 ಮಂದಿ ವಿದೇಶಿ ಪೆಡ್ಲರ್‌ಗಳು ಅರೆಸ್ಟ್‌ ಆಗಿದ್ದಾರೆ. ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದಲ್ಲಿ 200 ವಿದೇಶಿ ಪ್ರಜೆಗಳನ್ನು ಅವರ ದೇಶಕ್ಕೆ ಗಡಿಪಾರಿ ಮಾಡಲಾಗಿದೆ.

ಬಂಧಿತರಲ್ಲಿ ಬಹುತೇಕರು ನೈಜೀರಿಯಾ ಮತ್ತು ಆಫ್ರಿಕಾ ಮೂಲದವರಾಗಿದ್ದು, ವಿದ್ಯಾರ್ಥಿ ಅಥವಾ ಪ್ರವಾಸಿ ವೀಸಾದಡಿ ಬಂದು ಗಡುವು ಮುಗಿದರೂ ಇಲ್ಲೇ ನೆಲೆಯೂರಿ ದಂಧೆ ನಡೆಸುತ್ತಿದ್ದಾರೆ. ಹಾಸ್ಟೆಲ್, ಪಿಜಿ ಮತ್ತು ಐಟಿ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಇವರು ಡಾರ್ಕ್ ನೆಟ್, ಅಂಚೆ ಪಾರ್ಸೆಲ್ ಹಾಗೂ ಸೋಪು-ಚಾಕೊಲೇಟ್ ಡಬ್ಬಗಳ ಮೂಲಕ ಡ್ರಗ್ಸ್ ಪೂರೈಕೆ ಮಾಡುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಯುವಜನತೆಯನ್ನು ಮಾದಕ ವ್ಯಸನದಿಂದ ಮುಕ್ತಗೊಳಿಸಲು ಪೊಲೀಸರು 2025ರಲ್ಲಿ ಬರೋಬ್ಬರಿ 23,092 ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಶಾಲಾ-ಕಾಲೇಜು ಆವರಣದಲ್ಲಿ ಗಾಂಜಾ, ಕೊಕೇನ್ ಮಾರಾಟ ಮಾಡುವವರ ವಿರುದ್ಧ ಸತತ ದಾಳಿಗಳನ್ನು ನಡೆಸಲಾಗುತ್ತಿದೆ. ಸಾರ್ವಜನಿಕರು ಮಾದಕ ವಸ್ತು ಮಾರಾಟದ ಬಗ್ಗೆ ಮಾಹಿತಿ ನೀಡಲು ಸಹಾಯವಾಣಿ ಸಂಖ್ಯೆ 1903 ಅನ್ನು ಬಳಸಬಹುದಾಗಿದ್ದು, ಮಾಹಿತಿ ನೀಡಿದವರ ಹೆಸರನ್ನು ಅತ್ಯಂತ ಗೋಪ್ಯವಾಗಿಡಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.

ಪ್ರಸ್ತುತ ನಗರದ ಹೊರವಲಯದ ಫ್ಯಾಕ್ಟರಿಗಳು, ಗೋದಾಮುಗಳು ಮತ್ತು ತೋಟದ ಮನೆಗಳಲ್ಲಿ ಡ್ರಗ್ಸ್ ತಯಾರಿಕಾ ಘಟಕಗಳ ಪತ್ತೆಗಾಗಿ ಪೊಲೀಸರು ವಿಶೇಷ ‘ಕೂಂಬಿಂಗ್’ ಕಾರ್ಯಾಚರಣೆ ಮುಂದುವರಿಸಿದ್ದಾರೆ.

Exit mobile version