ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮದುವೆಯಾಗಿ ಕೇವಲ ನಾಲ್ಕು ತಿಂಗಳಷ್ಟೇ ಆಗಿದ್ದ ನವವಿವಾಹಿತೆಯೊಬ್ಬರು ಡೆತ್‌ನೋಟ್ ಬರೆದಿಟ್ಟು ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ಚಿಕ್ಕಮಗಳೂರು ಮೂಲದ ಶ್ವೇತಾ (25) ಎಂದು ಗುರುತಿಸಲಾಗಿದೆ. ಅವರು ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ನಾಲ್ಕು ತಿಂಗಳ ಹಿಂದೆ ತಾವು ಪ್ರೀತಿಸಿದ ಯುವಕನನ್ನು ವಿವಾಹವಾಗಿದ್ದು, ಹೊಸ ಜೀವನ ಆರಂಭಿಸಿದ್ದರು. ಆದರೆ ವೈವಾಹಿಕ ಜೀವನ ಆರಂಭವಾದ ಕೆಲವೇ ತಿಂಗಳಲ್ಲಿ ಈ ದುರ್ಘಟನೆ ಸಂಭವಿಸಿದೆ.
ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಶ್ವೇತಾ ಅವರು ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಆತ್ಮಹತ್ಯೆಗೂ ಮುನ್ನ ಶ್ವೇತಾ ಅವರು ಡೆತ್‌ನೋಟ್ ಬರೆದಿರುವುದು. ಆ ಡೆತ್‌ನೋಟ್‌ನಲ್ಲಿ ತಮ್ಮ ಸಾವಿಗೆ ಗಂಡ ಹಾಗೂ ಗಂಡನ ಅಕ್ಕ ಕಾರಣ ಎಂದು ಆರೋಪಿಸಿರುವುದಾಗಿ ತಿಳಿದುಬಂದಿದೆ. ಅಲ್ಲದೆ, ತಮಗೆ ನಿರಂತರ ಮಾನಸಿಕ ಹಿಂಸೆ ನೀಡಲಾಗುತ್ತಿತ್ತು ಎಂದು ಉಲ್ಲೇಖಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಡೆತ್‌ನೋಟ್‌ನಲ್ಲಿ “ನನ್ನನ್ನು ಬದುಕುವ ಆಸೆಯೇ ಇಲ್ಲದಂತೆ ಮಾಡಿದ್ದಾರೆ. ನಾನು ಸತ್ತರೆ ಅವರನ್ನು ಸುಮ್ಮನೆ ಬಿಡಬೇಡಿ ಅಮ್ಮ. ನನ್ನಿಂದ ತಪ್ಪಾಯಿತು, ನನ್ನನ್ನು ಕ್ಷಮಿಸು” ಎಂದು ಬರೆದಿದ್ದಾರೆ.
ಈ ಆರೋಪಗಳ ಹಿನ್ನೆಲೆ ಕಾಮಾಕ್ಷಿಪಾಳ್ಯ ಪೊಲೀಸರು ಮೃತೆಯ ಪತಿ ಹಾಗೂ ಅವರ ಅಕ್ಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಡೆತ್‌ನೋಟ್‌ನಲ್ಲಿರುವ ಆರೋಪಗಳ ಸತ್ಯಾಸತ್ಯತೆ, ದಂಪತಿಯ ನಡುವಿನ ವೈಯಕ್ತಿಕ ಭಿನ್ನಾಭಿಪ್ರಾಯಗಳು, ಕೌಟುಂಬಿಕ ಪರಿಸ್ಥಿತಿ ಹಾಗೂ ಇತರೆ ಸಾಕ್ಷ್ಯಾಧಾರಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಈ ಪ್ರಕರಣದಲ್ಲಿ ಡೆತ್‌ನೋಟ್ ಪ್ರಮುಖ ಸಾಕ್ಷಿಯಾಗಿರುವುದರಿಂದ ಅದರ ಹಸ್ತಾಕ್ಷರ, ವಿಷಯ ಹಾಗೂ ಇತರ ತಾಂತ್ರಿಕ ಅಂಶಗಳನ್ನೂ ತನಿಖಾಧಿಕಾರಿಗಳು ಪರಿಶೀಲಿಸಲಿದ್ದಾರೆ. ಮೊಬೈಲ್ ಕರೆ ವಿವರಗಳು, ಸಂದೇಶಗಳು ಹಾಗೂ ಕುಟುಂಬ ಸದಸ್ಯರ ಹೇಳಿಕೆಗಳನ್ನೂ ದಾಖಲಿಸಲಾಗುತ್ತಿದೆ.
