ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷ (2026) ಸ್ವಾಗತಿಸಲು ಜನತೆ ಸಜ್ಜಾಗುತ್ತಿದ್ದಂತೆ, ಪೊಲೀಸ್ ಇಲಾಖೆಯೂ ಹೈ ಅಲರ್ಟ್ ಆಗಿದೆ. ಅಹಿತಕರ ಘಟನೆಗಳನ್ನು ತಡೆಗಟ್ಟಲು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಇದರ ಭಾಗವಾಗಿ ನಗರದ ಪಾರ್ಕ್‌ಗಳು, ಉದ್ಯಾನವನಗಳು ಮತ್ತು ಕೆರೆಗಳಿಗೆ ಪ್ರವೇಶ ನಿಷೇಧಿಸಲಾಗಿದೆ.
ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಆದೇಶ ಹೊರಡಿಸಿದ್ದು, ಡಿಸೆಂಬರ್ 31 ರ ಸಂಜೆ 6 ಗಂಟೆಯಿಂದ ಜನವರಿ 1 ರ ಬೆಳಗ್ಗೆ 6 ಗಂಟೆಯವರೆಗೆ ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಎಲ್ಲಾ ಪಾರ್ಕ್‌ಗಳು, ಉದ್ಯಾನವನಗಳು ಮತ್ತು ಕೆರೆಗಳಿಗೆ ಸಾರ್ವಜನಿಕ ಪ್ರವೇಶ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿರ್ಬಂಧದ ಹಿಂದಿನ ಮುಖ್ಯ ಉದ್ದೇಶ ಯಾವುದೇ ಅಪಘಾತ, ಅಶಾಂತಿ ಅಥವಾ ಅಹಿತಕರ ಚಟುವಟಿಕೆಗಳನ್ನು ತಡೆಗಟ್ಟುವುದು. ಪೊಲೀಸರು ನಾಗರಿಕರಿಂದ ಸಹಕಾರ ಕೋರಿದ್ದಾರೆ ಮತ್ತು ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ, ಪಬ್‌ಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳ ಮೇಲೂ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ. ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚು ಗ್ರಾಹಕರನ್ನು ಅನುಮತಿಸುವಂತಿಲ್ಲ. ಸಮಯ ಮೀರಿ ಸೇವೆ ನೀಡಿದರೆ ತಕ್ಷಣ ಕ್ರಮ ಜರುಗಿಸಲಾಗುತ್ತದೆ. ಪ್ರತಿ ಪಬ್ ಮತ್ತು ಬಾರ್‌ನಲ್ಲಿ ಸಿಸಿಟಿವಿ ಕ್ಯಾಮರಾಗಳು ಕಡ್ಡಾಯವಾಗಿರಬೇಕು. ವಿಶೇಷವಾಗಿ ಮಹಿಳೆಯರು ಹೆಚ್ಚಾಗಿ ಸೇರುವ ಸ್ಥಳಗಳು, ಎಂಟ್ರಿ-ಎಕ್ಸಿಟ್ ಪಾಯಿಂಟ್‌ಗಳು, ಡ್ಯಾನ್ಸ್ ಫ್ಲೋರ್ ಮತ್ತು ಪಾರ್ಕಿಂಗ್ ಪ್ರದೇಶಗಳಲ್ಲಿ ಕ್ಯಾಮರಾ ನಿಗಾ ಅಗತ್ಯ. ಫೈರ್ ಸೇಫ್ಟಿ, ಎಮರ್ಜೆನ್ಸಿ ಎಕ್ಸಿಟ್‌ಗಳು ಮತ್ತು ಮಾದಕ ವಸ್ತುಗಳ ನಿಯಂತ್ರಣಕ್ಕೂ ಕಟ್ಟುನಿಟ್ಟಿನ ಪರಿಶೀಲನೆ ನಡೆಯುತ್ತಿದೆ.
ಎಲೆಕ್ಟ್ರಾನಿಕ್ ಸಿಟಿ ಮತ್ತು ಇತರ ಐಟಿ ಹಬ್‌ಗಳಲ್ಲಿ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ಡಿಸಿಪಿ ನಾರಾಯಣ್ ನೇತೃತ್ವದಲ್ಲಿ ಪ್ರಮುಖ ಪ್ರದೇಶಗಳಲ್ಲಿ ರೌಂಡ್ಸ್ ನಡೆಸಲಾಗುತ್ತಿದೆ. ನೀಲಾದ್ರಿ ನಗರ ಸೇರಿದಂತೆ ಜನದಟ್ಟಣೆ ಇರುವ ಸ್ಥಳಗಳಲ್ಲಿ ಬಂದೋಬಸ್ತ್ ಹೆಚ್ಚಿಸಲಾಗಿದೆ. ಪಿಜಿ ವಾಸಿಗಳು ಮತ್ತು ಮಹಿಳೆಯರ ಸುರಕ್ಷತೆಗಾಗಿ ರಾಣಿ ಚೆನ್ನಮ್ಮ ಪಡೆಯನ್ನು ನಿಯೋಜಿಸಲಾಗಿದೆ. ರೇವ್ ಪಾರ್ಟಿಗಳು, ಡ್ರಗ್ಸ್ ಸಂಬಂಧಿತ ಚಟುವಟಿಕೆಗಳು ಮತ್ತು ಡ್ರಂಕ್ ಅಂಡ್ ಡ್ರೈವ್‌ಗೆ ಸಂಪೂರ್ಣ ನಿಷೇಧವಿದೆ.
ಪೊಲೀಸ್ ಇಲಾಖೆಯು ‘ಸೆಲೆಬ್ರೇಷನ್ ವಿತ್ ರೆಸ್ಪಾನ್ಸಿಬಿಲಿಟಿ’ ಎಂಬ ಆನ್‌ಲೈನ್ ಅಭಿಯಾನ ಆರಂಭಿಸಿದೆ. ಇದರ ಮೂಲಕ QR ಕೋಡ್ ಸ್ಕ್ಯಾನ್ ಮಾಡಿ ತಕ್ಷಣ ದೂರು ದಾಖಲಿಸಬಹುದು ಮತ್ತು ಅಗತ್ಯ ಮಾಹಿತಿ ಪಡೆಯಬಹುದು. ಇದು ಸಾರ್ವಜನಿಕರಿಗೆ ತ್ವರಿತ ನೆರವು ಒದಗಿಸುವ ಉದ್ದೇಶವನ್ನು ಹೊಂದಿದೆ.
