ನಮ್ಮ ಮೆಟ್ರೋದಲ್ಲಿ ಯುವತಿಯ ವಿಡಿಯೋ ರೆಕಾರ್ಡ್: ಪ್ರಶ್ನಿಸಿದ್ದಕ್ಕೆ ಮೊಬೈಲ್ ಕಿತ್ತುಕೊಂಡು ಆರೋಪಿ ಪರಾರಿ!

Untitled Design 2026 10 28T105008.578

ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ (Metro train) ಮಹಿಳೆಯರ ಸುರಕ್ಷತೆಯ ಕುರಿತು ಮತ್ತೊಮ್ಮೆ ಗಂಭೀರ ಪ್ರಶ್ನೆಗಳು ಎದ್ದಿವೆ. ಮೆಟ್ರೋ ರೈಲಿನಲ್ಲಿ (BMRCL) ಪ್ರಯಾಣಿಸುತ್ತಿದ್ದ ಯುವತಿಯೊಬ್ಬರ ವಿಡಿಯೋವನ್ನು (Video) ಅನಧಿಕೃತವಾಗಿ ಚಿತ್ರೀಕರಿಸಿದ್ದಲ್ಲದೆ, ಇದನ್ನು ಪ್ರಶ್ನಿಸಿದಾಗ ಆಕೆಯ ಬಳಿ ಮೊಬೈಲ್ ಫೋನ್ ಕಸಿದುಕೊಂಡು ಆರೋಪಿಯೊಬ್ಬ ಪರಾರಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ.

ಘಟನೆ ಹೇಗೆ ನಡೆಯಿತು?

ಸಂತ್ರಸ್ತ ಯುವತಿ ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಯುವತಿಯ ಗಮನಕ್ಕೆ ಬಾರದಂತೆ ಅಥವಾ ಆಕೆಯ ಒಪ್ಪಿಗೆಯಿಲ್ಲದೆ ಅಪರಿಚಿತ ವ್ಯಕ್ತಿಯೊಬ್ಬ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿಕೊಳ್ಳುತ್ತಿದ್ದನು. ಇದನ್ನು ಗಮನಿಸಿದ ಯುವತಿ ತಕ್ಷಣವೇ ಆತನನ್ನು ಪ್ರಶ್ನಿಸಿದ್ದಾರೆ.

“ನಾನೇನು ಮಾಡಿಲ್ಲ” ಎಂಬ ಸಮಜಾಯಿಷಿ

ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಳ್ಳುವ ಬದಲು, ಯುವತಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. “ನಾನೇನೂ ಮಾಡಿಲ್ಲ” ಎಂದು ಸಮಜಾಯಿಷಿ ನೀಡಲು ಪ್ರಯತ್ನಿಸಿದ್ದಾನೆ. ಅಷ್ಟೇ ಅಲ್ಲದೆ, ಯುವತಿ ಈ ವಿಷಯವನ್ನು ಪ್ರಶ್ನಿಸಿದಾಗ, ದಿಢೀರ್ ಎಂದು ಯುವತಿಯ ಕೈಯಲ್ಲಿದ್ದ ಮೊಬೈಲ್ ಫೋನ್ ಅನ್ನು ಬಲವಂತವಾಗಿ ಕಸಿದುಕೊಂಡಿದ್ದಾನೆ. ಬಳಿಕ ರೈಲು ನಿಲುಗಡೆಯಾದ ಸಂದರ್ಭದಲ್ಲಿ ಪರಾರಿಯಾಗಿದ್ದಾನೆ.

ಪಟ್ಟಂದೂರು ಅಗ್ರಹಾರ ನಿಲ್ದಾಣದಲ್ಲಿ ಘಟನೆ

ಈ ಘಟನೆ ಪಟ್ಟಂದೂರು ಅಗ್ರಹಾರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಯುವತಿ ರೆಡ್ಹ್ಯಾಂಡಾಗಿ ಆರೋಪಿಯನ್ನು ಹಿಡಿದರೂ, ಆತ ಮೊಬೈಲ್ ಕಿತ್ಕೊಂಡು ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಸಂತ್ರಸ್ತ ಯುವತಿ ಕಾಡುಗೋಡಿ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಪೊಲೀಸರು ಆರೋಪಿಯನ್ನು ಪತ್ತೆಹಚ್ಚಲು ಮೆಟ್ರೋ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಯುವತಿಯ ಮೊಬೈಲ್ ಅನ್ನು ವಶಪಡಿಸಿಕೊಂಡಿರುವ ಆರೋಪಿ ಶೀಘ್ರವೇ ಸಿಕ್ಕಿಬೀಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

Exit mobile version