ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನವೆಂಬರ್ ತಿಂಗಳಲ್ಲಿ ನಡೆದಿದ್ದ ದಿಟ್ಟ ಹಗಲು ದರೋಡೆ ಪ್ರಕರಣ ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳಿಸಿತ್ತು. ಕೇವಲ ಕೆಲವೇ ನಿಮಿಷಗಳಲ್ಲಿ ₹7.11 ಕೋಟಿ ನಗದನ್ನು ಲೂಟಿ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಆದರೆ ಬೆಂಗಳೂರು ಪೊಲೀಸರ ಕಾರ್ಯಾಚರಣೆಯಿಂದ ಈ ಕೇಸ್ ಈಗ ಬಹುತೇಕ ಮುಕ್ತಾಯದ ಹಾದಿಯಲ್ಲಿದೆ. ಇದುವರೆಗೆ ಒಟ್ಟು 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ₹7.01 ಕೋಟಿ ನಗದನ್ನು ಪೊಲೀಸರು ಯಶಸ್ವಿಯಾಗಿ ರಿಕವರಿ ಮಾಡಿದ್ದಾರೆ. ಕೇವಲ ₹10 ಲಕ್ಷ ಮಾತ್ರ ಇನ್ನೂ ಪತ್ತೆಯಾಗದೆ ಉಳಿದಿದೆ.
ಈ ಪ್ರಕರಣದಲ್ಲಿ ನವೀನ್ ಎಂಬಾತ ಮುಖ್ಯ ಆರೋಪಿಗಳಲ್ಲಿ ಒಬ್ಬನಾಗಿ ಗುರುತಿಸಲಾಗಿದ್ದು, ಪೊಲೀಸರ ಬಲೆಗೆ ಮೊದಲು ಆತನೇ ಸಿಕ್ಕಿಬಿದ್ದಿದ್ದನು. ಹೈದರಾಬಾದ್‌ನ ಒಂದು ಲಾಡ್ಜ್‌ನಲ್ಲಿ 53 ಲಕ್ಷ ರೂ. ನಗದು ಜೊತೆ ಅಡಗಿಕೊಂಡಿದ್ದ ನವೀನ್, ಸ್ಥಳೀಯ ಪೊಲೀಸ್ ತಂಡದ ಸಹಕಾರದಿಂದ ಬಂಧಿಸಲಾಯಿತು.
ಬಂಧನದ ನಂತರ ನಡೆದ ವಿಚಾರಣೆ ವೇಳೆ, ದರೋಡೆಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿಗಳನ್ನು ಪೂರೈಸಿದ ನವೀನ್, ಉಳಿದ ಹಣ ಎಲ್ಲಿ ಅಡಗಿಸಲಾಗಿದೆ ಎಂಬ ಸುಳಿವು ನೀಡಿದ್ದಾನೆ. ಅವನು ನೀಡಿದ ಮಾಹಿತಿ ಆಧಾರದ ಮೇಲೆ ವಿಶೇಷ ತಂಡಗಳು ಆಂಧ್ರಪ್ರದೇಶದ ಕುಪ್ಪಂ ಭಾಗದಲ್ಲಿ ಶೋಧ ನಡೆಸಿ, ಮನೆವೊಂದರಲ್ಲಿ ಇರಿಸಲಾಗಿದ್ದ 47 ಲಕ್ಷ ರೂ. ನಗದು ಅನ್ನು ವಶಪಡಿಸಿಕೊಂಡಿವೆ.
ಬೆಂಗಳೂರಿನಲ್ಲಿ ದರೋಡೆ ಮಾಡಿದ್ದ ಮೊತ್ತ 7.11 ಕೋಟಿ. ಇದರಲ್ಲಿ ಈಗಾಗಲೇ 7.01 ಕೋಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಉಳಿದ 10 ಲಕ್ಷ ರೂ. ಗಳ ಪತ್ತೆಗೆ ಶೋಧ ಮುಂದುವರಿದಿದೆ.
ಘಟನೆ ನಡೆದ ದಿನ, ದುಷ್ಕರ್ಮಿಗಳ ತಂಡವೊಂದು ನಗದು ಸಾಗಾಟಕ್ಕೆ ಬಳಸುತ್ತಿದ್ದ ವಾಹನವನ್ನು ಟಾರ್ಗೆಟ್ ಮಾಡಿ, ಇದರಲ್ಲಿ ಲಕ್ಷಾಂತರ ಹಣವನ್ನು ಬಲವಂತವಾಗಿ ದೋಚಿಕೊಂಡು ಪರಾರಿಯಾಗಿತ್ತು. ತನಿಖಾಧಿಕಾರಿಗಳು ಆರೋಪಿಗಳ ಫೋನ್ ಲೊಕೇಶನ್, ಸಿಸಿಟಿವಿ ದೃಶ್ಯಗಳು ಹಾಗೂ ಬ್ಯಾಂಕ್ ವ್ಯವಹಾರಗಳ ಹಾದಿ ಗಮನಿಸಿ ಶೋಧ ನಡೆಸಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣದಲ್ಲಿ ಈಗಾಗಲೇ 9 ಜನರನ್ನು ಬಂಧಿಸಲಾಗಿದೆ. ಇವರಲ್ಲಿ ನವೀನ್ ಸೇರಿದಂತೆ ಮುಖ್ಯ ಸಂಚುಕೋರರು, ಮಾಹಿತಿ ನೀಡಿದವರೂ ಹಾಗೂ ಹಣವನ್ನು ಅಡಗಿಸಲು ಸಹಾಯ ಮಾಡಿದವರೂ ಸೇರಿದ್ದಾರೆ. ದರೋಡೆ ಯೋಜನೆಯನ್ನು ರೂಪಿಸುವುದರಿಂದ ಹಿಡಿದು, ನಗದು ಸಾಗಾಟದ ಮಾಹಿತಿ ಸಂಗ್ರಹಿಸುವುದು, ತಪ್ಪಿಸಿಕೊಳ್ಳಲು ಬೇರೆಯೂರಿನಲ್ಲಿ ಅಡಗಿಕೊಳ್ಳುವುದು ಸೇರಿದಂತೆ ಎಲ್ಲ ಹಂತಗಳಲ್ಲಿಯೂ ಹಲವು ಮಂದಿ ಕೈಜೋಡಿಸಿದ್ದರೆಂದು ಪೊಲೀಸ್ ತನಿಖೆ ಬಹಿರಂಗಪಡಿಸಿದೆ.
