ಇಂದಿನಿಂದ ರಾಜ್ಯಾದ್ಯಂತ ಬೈಕ್ ಟ್ಯಾಕ್ಸಿ ಸೇವೆ ಪುನಾರಂಭ!

1 (4)

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಬೈಕ್ ಟ್ಯಾಕ್ಸಿ ಸೇವೆಗಳು ರದ್ದಾಗಿದ್ದ ನಿಷೇಧವನ್ನ ತೆರವುಗೊಳಿಸಿ, ಇಂದಿನಿಂದ ಸೇವೆಗಳು ಪುನರಾರಂಭಗೊಂಡಿವೆ. ಓಲಾ ಹೊರತುಪಡಿಸಿ, ಉಬರ್ ಮತ್ತು ರ‍್ಯಾಪಿಡೋ ಆ್ಯಪ್‌ಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆ ಲಭ್ಯವಾಗಿದ್ದು, ಆಟೋ ಮತ್ತು ಕ್ಯಾಬ್‌ಗಳಿಗೆ ದುಬಾರಿ ಶುಲ್ಕ ಪಾವತಿಸುವ ಜನರಿಗೆ ಸ್ವಲ್ಪ ರಿಲೀಫ್ ಸಿಗಲಿದೆ.

ಸುರಕ್ಷತಾ ಕಾರಣಗಳಿಂದ 2025ರ ಜೂನ್ 16 ರಿಂದ ಬೈಕ್ ಟ್ಯಾಕ್ಸಿ ಸೇವೆಯನ್ನು ರಾಜ್ಯ ಸರ್ಕಾರವು ನಿಷೇಧಿಸಿತ್ತು. ಈ ಸಂದರ್ಭದಲ್ಲಿ, ಅನಧಿಕೃತವಾಗಿ ಸಂಚರಿಸಿದ ಬೈಕ್ ಟ್ಯಾಕ್ಸಿಗಳ ಮೇಲೆ ಆರ್‌ಟಿಓ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದರು. ಈ ನಿಷೇಧವನ್ನು ಪ್ರಶ್ನಿಸಿ, ರ‍್ಯಾಪಿಡೋ, ಉಬರ್ ಮತ್ತು ಇತರ ಆ್ಯಪ್ ಆಧಾರಿತ ಕಂಪನಿಗಳು ಕರ್ನಾಟಕ ಹೈಕೋರ್ಟ್‌ಗೆ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದವು.

ಕರ್ನಾಟಕ ಹೈಕೋರ್ಟ್‌ನ ದ್ವಿಸದಸ್ಯ ಪೀಠವು ರಾಜ್ಯ ಸರ್ಕಾರಕ್ಕೆ ಬೈಕ್ ಟ್ಯಾಕ್ಸಿಗಳಿಗೆ ನೀತಿ ಚೌಕಟ್ಟು ರೂಪಿಸುವಂತೆ ಸೂಚಿಸಿತು. ಸೆಪ್ಟೆಂಬರ್ 22, 2025ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದ್ದು, ಆದರೆ ಸರ್ಕಾರದ ತಡೆಗೆ ತಡೆಯೊಡ್ಡದಂತೆ ನ್ಯಾಯಾಲಯವು ತಾತ್ಕಾಲಿಕವಾಗಿ ಆದೇಶಿಸಿದೆ. ಇದರಿಂದ ಇಂದಿನಿಂದ ರಾಜ್ಯದಾದ್ಯಂತ ಬೈಕ್ ಟ್ಯಾಕ್ಸಿ ಸೇವೆಗಳು ಪುನರಾರಂಭಗೊಂಡಿವೆ.

ಬೆಂಗಳೂರಿನಲ್ಲಿ ಸುಮಾರು 1.20 ಲಕ್ಷ ಬೈಕ್‌ಗಳು ಟ್ಯಾಕ್ಸಿ ಸೇವೆಗೆ ನೋಂದಾಯಿಸಿಕೊಂಡಿವೆ, ಮತ್ತು ರಾಜ್ಯಾದ್ಯಂತ 6 ಲಕ್ಷಕ್ಕೂ ಹೆಚ್ಚು ಸವಾರರು ಈ ಸೇವೆಯ ಮೂಲಕ ಜೀವನೋಪಾಯವನ್ನು ಅವಲಂಬಿಸಿದ್ದಾರೆ. ನಿಷೇಧದ ಸಮಯದಲ್ಲಿ ಸವಾರರಿಗೆ ಗಣನೀಯ ಸಮಸ್ಯೆಗಳು ಎದುರಾಗಿದ್ದವು. ಈಗ ಪುನರಾರಂಭದಿಂದ ಸವಾರರಿಗೆ ಉದ್ಯೋಗದ ಅವಕಾಶಗಳು ಮತ್ತು ಜನರಿಗೆ ಕೈಗೆಟುಕುವ ಸಾರಿಗೆ ಸೇವೆ ಲಭ್ಯವಾಗಲಿದೆ.

ಹೈಕೋರ್ಟ್‌ನ ನಿರ್ದೇಶನದಂತೆ, ರಾಜ್ಯ ಸರ್ಕಾರವು ಬೈಕ್ ಟ್ಯಾಕ್ಸಿಗಳಿಗೆ ಸುರಕ್ಷಿತ ನೀತಿ ಚೌಕಟ್ಟನ್ನು ರೂಪಿಸುವ ಕಾರ್ಯದಲ್ಲಿದೆ. ಇದರಿಂದ ಗ್ರಾಹಕರಿಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಸೇವೆ ಒದಗಿಸುವ ಗುರಿಯಿದೆ. ಸದ್ಯಕ್ಕೆ, ಓಲಾ ಬೈಕ್ ಟ್ಯಾಕ್ಸಿ ಸೇವೆಯನ್ನು ಪುನರಾರಂಭಿಸದಿದ್ದರೂ, ಉಬರ್ ಮತ್ತು ರ‍್ಯಾಪಿಡೋ ಸೇವೆಗಳು ಲಭ್ಯವಿವೆ.

Exit mobile version