ಬೆಂಗಳೂರು, ಏಪ್ರಿಲ್ 1: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಐತಿಹಾಸಿಕ ಕರಗ ಉತ್ಸವದ ಸಂಭ್ರಮ ರಂಗೇರಿದೆ. ವಿಶ್ವ ವಿಖ್ಯಾತ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ ಶುರುವಾಗಿದ್ದು, ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕರಗ ಉತ್ಸವದ ಹಿನ್ನೆಲೆಯಲ್ಲಿ ಧರ್ಮರಾಯ ದೇವಸ್ಥಾನದ ಸುತ್ತಮುತ್ತಲಿನ ಬೀದಿಗಳು ವಿಶೇಷ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.
ರಾತ್ರಿ 1 ಗಂಟೆಗೆ ಹೂವಿನ ಕರಗ
ಇಂದು ರಾತ್ರಿ 1 ಗಂಟೆ ಸುಮಾರಿಗೆ ಹೂವಿನ ಕರಗ ಹೊರ ಬರಲಿದೆ. ಬಳಿಕ ಸಂಪಂಗಿರಾಮ ನಗರ ಕೆರೆ ಸೇರಿದಂತೆ ಹಲವೆಡೆ ಪ್ರದಕ್ಷಿಣೆ ಹಾಕಲಿದೆ. ಅನಂತರ ಅಣ್ಣಮ್ಮದೇವಿ ಹಾಗೂ ತವಕ್ಕಲ್ ಮಸ್ತಾನ್ ದರ್ಗಾಗೆ ಭೇಟಿ ನೀಡಲಿದೆ. ಮುಂಜಾನೆ ವಾಪಸ್ ಧರ್ಮರಾಯಸ್ವಾಮಿ ಸನ್ನಿಧಿಗೆ ಆಗಮಿಸಲಿದೆ. ಪೂಜಾರಿ ಜ್ಞಾನೇಂದ್ರ ಅವರು ಈ ಬಾರಿ 16ನೇ ಬಾರಿಗೆ ಕರಗ ಹೊರಲಿದ್ದಾರೆ. ಇದು ಅವರ ಭಕ್ತಿ ಮತ್ತು ಶ್ರದ್ಧೆಗೆ ಸಾಕ್ಷಿಯಾಗಿದೆ.
ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ಸಾಧ್ಯತೆ
ಐತಿಹಾಸಿಕ ಕರಗ ಉತ್ಸವದ ಹಿನ್ನೆಲೆಯಲ್ಲಿ ಧರ್ಮರಾಯ ಸ್ವಾಮಿ ದೇಗುಲಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭೇಟಿ ನೀಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ದೇವಾಲಯದ ಆವರಣದೊಳಗೆ ಯಾರನ್ನೂ ಬಿಡದೆ ಗೇಟ್ ಕ್ಲೋಸ್ ಮಾಡಲಾಗಿದೆ. ಕೆಲವೇ ಕ್ಷಣಗಳಲ್ಲಿ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ ಶುರುವಾಗಿದ್ದು, ಧರ್ಮರಾಯ ದೇವಸ್ಥಾನದ ಸುತ್ತಮುತ್ತಲೂ ಜನಸಂದಣಿ ಹೆಚ್ಚಾಗುತ್ತಿದೆ.
ಮಲ್ಲಿಗೆ ಹೂವಿನಿಂದ ಅಲಂಕರಿಸಿದ ದ್ರೌಪದಮ್ಮನ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದಾರೆ. ಕಠಿಣ ವ್ರತವನ್ನು ಕೈಗೊಂಡು ಪೂಜಾರಿಗಳು ದ್ರೌಪದಿಯನ್ನು ಆದಿಶಕ್ತಿಯಾಗಿ ಆರಾಧಿಸುತ್ತಾರೆ. ಈ ಉತ್ಸವವು ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ಅಣ್ಣಮ್ಮದೇವಿ ಮತ್ತು ತವಕ್ಕಲ್ ಮಸ್ತಾನ್ ದರ್ಗಾಗೆ ಕರಗ ಭೇಟಿ ನೀಡುವುದು ವಿಶೇಷವಾಗಿದೆ.
ಬಿಗಿ ಪೊಲೀಸ್ ಬಂದೋಬಸ್ತ್
ಕರಗ ಮಹೋತ್ಸವದ ಹಿನ್ನೆಲೆ ಧರ್ಮರಾಯ ದೇವಸ್ಥಾನದ ಬಳಿ ಭಾರಿ ಜನಸಂದಣಿ ಸೇರಿದೆ. ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ, ಕೇಂದ್ರ ವಿಭಾಗ ಡಿಸಿಪಿ ಅಕ್ಷಯ್ ಕುಮಾರ್ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಾ ಅಂಡ್ ಆರ್ಡರ್ ಹಾಗೂ ಸಂಚಾರಿ ಪೊಲೀಸರು ಜಂಟಿಯಾಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದು, ರಸ್ತೆಯುದ್ದಕ್ಕೂ ಬ್ಯಾರಿಕೇಡ್ ಹಾಕಲಾಗಿದೆ. ಇಂದು ರಾತ್ರಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬರೋಬ್ಬರಿ 2 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.
ಸಂಚಾರ ಮಾರ್ಗ ಬದಲಾವಣೆ
ಕರಗ ಮೆರವಣಿಗೆ ಹಿನ್ನೆಲೆಯಲ್ಲಿ ಆಯಾ ಸಮಯಕ್ಕೆ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಅಕ್ಕಿಪೇಟೆ ಮತ್ತು ಓಟಿಸಿ ಮುಖ್ಯ ರಸ್ತೆಗಳು ಸಂಪೂರ್ಣ ಬಂದ್ ಆಗಿವೆ. ಕರಗ ಸಂಚಾರ ಮಾಡುವ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಪ್ರಯಾಣಿಕರು SPG ರಸ್ತೆ, ಟೌನ್ ಹಾಲ್, ಕೆಂಪೇಗೌಡ ರಸ್ತೆ ಮೂಲಕ ಪರ್ಯಾಯ ಮಾರ್ಗದಲ್ಲಿ ಸಂಚರಿಸಬಹುದು ಎಂದು ಪೊಲೀಸರು ಸೂಚನೆ ನೀಡಿದ್ದಾರೆ.
ಜಾತ್ರೆ ಮಾದರಿಯ ಅಂಗಡಿಗಳಿಗೆ ಕೊಕ್
ಕರಗ ಉತ್ಸವದ ಹಿನ್ನೆಲೆಯಲ್ಲಿ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಲಾಗಿದೆ. ಹೂವು, ಲೈಟಿಂಗ್‌ಗಳ ಮೂಲಕ ದೇವಸ್ಥಾನವನ್ನು ಅಲಂಕರಿಸಲಾಗಿದೆ. ಈ ಬಾರಿ ಜಾತ್ರೆ ಮಾದರಿಯ ಅಂಗಡಿಗಳಿಗೆ ಕೊಕ್ ನೀಡಲಾಗಿದೆ. ಈ ಹಿಂದೆ ರಸ್ತೆಯ ಎರಡೂ ಬದಿಯಲ್ಲಿ ಅಂಗಡಿಗಳಿಗೆ ಅವಕಾಶ ನೀಡಲಾಗುತ್ತಿತ್ತು. ಆದರೆ ಸುಗಮ ವ್ಯವಸ್ಥೆಗಾಗಿ ಈ ಬಾರಿ ಬೀದಿ ಅಂಗಡಿಗಳಿಗೆ ಅವಕಾಶ ಕಲ್ಪಿಸಲಾಗಿಲ್ಲ. ಈ ಬಾರಿ ಉತ್ಸವಕ್ಕೆ 15 ಲಕ್ಷಕ್ಕೂ ಅಧಿಕ ಭಕ್ತರು ಸೇರುವ ನಿರೀಕ್ಷೆಯಿದೆ.
