ಬೆಂಗಳೂರು, ಅಕ್ಟೋಬರ್ 29, 2025: ವೈಫೈ ನೆಟ್‌ವರ್ಕ್‌ನ ಯೂಸರ್ ನೇಮ್‌ನಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಬಳಕೆ ಮಾಡಿರುವ ಘಟನೆ ಬೆಂಗಳೂರಿನ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲುಬಾಳು ಗ್ರಾಮದಲ್ಲಿ ನಡೆದಿದೆ. ಈ ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದ್ದು, ದೇಶವಿರೋಧಿ ಶಕ್ತಿಗಳ ಚಟುವಟಿಕೆಯ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಕಲ್ಲುಬಾಳು ಗ್ರಾಮದಲ್ಲಿ ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ವೈಫೈ ಆನ್ ಮಾಡಿದಾಗ, ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಯೂಸರ್‌ನೇಮ್ ಕಾಣಿಸಿಕೊಂಡಿದೆ. ಈ ಬಗ್ಗೆ ಸ್ಥಳೀಯ ಭಜರಂಗದಳ ಕಾರ್ಯಕರ್ತರು ಜಿಗಣಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.
ಗ್ರಾಮಸ್ಥರ ಪ್ರಕಾರ, ಈ ರೀತಿಯ ಯೂಸರ್‌ನೇಮ್ ಬಳಕೆಯು ಗ್ರಾಮದ ಶಾಂತಿಯನ್ನು ಕದಡುವ ಜೊತೆಗೆ ಜನರಲ್ಲಿ ಭಯದ ವಾತಾವರಣ ಸೃಷ್ಟಿಸುವ ಗುರಿಯನ್ನು ಹೊಂದಿರಬಹುದು. “ನಾವು ಇಂತಹ ಕೃತ್ಯವನ್ನು ಎಂದಿಗೂ ಸಹಿಸುವುದಿಲ್ಲ. ಇದರ ಹಿಂದಿರುವವರನ್ನು ಶೀಘ್ರವಾಗಿ ಪತ್ತೆಹಚ್ಚಿ ಕಠಿಣ ಕ್ರಮಕೈಗೊಳ್ಳಬೇಕು,” ಎಂದು ಭಜರಂಗದಳದ ಕಾರ್ಯಕರ್ತರೊಬ್ಬರು ಆಗ್ರಹಿಸಿದ್ದಾರೆ.
ಜಿಗಣಿ ಪೊಲೀಸರು ಈಗಾಗಲೇ ತನಿಖೆಯನ್ನು ಆರಂಭಿಸಿದ್ದು, ವೈಫೈ ರೂಟರ್‌ನ ಮಾಲೀಕರನ್ನು ಗುರುತಿಸುವ ಕೆಲಸದಲ್ಲಿ ತೊಡಗಿದ್ದಾರೆ. ಈ ಯೂಸರ್‌ನೇಮ್ ಬಳಸಿರುವ ವ್ಯಕ್ತಿಯು ಗ್ರಾಮದ ನಿವಾಸಿಯೇ ಅಥವಾ ಬೇರೆಡೆಯಿಂದ ಬಂದವರೋ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತಾಂತ್ರಿಕ ಸಹಾಯ ಪಡೆಯುತ್ತಿದ್ದಾರೆ.
ಟಿಪ್ಪು ಅರಮನೆ ಮೇಲೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರು: ಸುಮೋಟೋ ಕೇಸ್ ದಾಖಲು
ಚಿಕ್ಕಬಳ್ಳಾಪುರ, ಅಕ್ಟೋಬರ್ 28: ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿ ಧಾಮದಲ್ಲಿರುವ ಐತಿಹಾಸಿಕ ಟಿಪ್ಪು ಸುಲ್ತಾನ್ ಸಮ್ಮರ್ ಪ್ಯಾಲೆಸ್ (ಬೇಸಿಗೆ ಅರಮನೆ) ಮೇಲೆ ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರು ಬರೆಯುವ ಘಟನೆ ನಡೆದಿದ್ದು, ಈ ವಿಕೃತಿ ಪ್ರಕರಣದಲ್ಲಿ ಪೊಲೀಸರು ಸುಮೋಟೋ ಕೇಸ್ ದಾಖಲಿಸಿದ್ದಾರೆ.
ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ (ASI) ಅಧೀನದಲ್ಲಿರುವ ಈ ಐತಿಹಾಸಿಕ ಸ್ಥಳದ ಗೋಡೆಯ ಮೇಲೆ ಬಿಷ್ಣೋಯ್ ಹೆಸರನ್ನು ಬರೆದಿರುವುದು ಟಿಪ್ಪು ಸುಲ್ತಾನ್ ಅಭಿಮಾನಿಗಳು ಮತ್ತು ಪ್ರವಾಸಿಗರಲ್ಲಿ ತೀವ್ರ ಅಸಮಾಧಾನವನ್ನು ಉಂಟುಮಾಡಿದೆ.
ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಒಬ್ಬ ಅಂತಾರಾಷ್ಟ್ರೀಯ ಗ್ಯಾಂಗ್‌ಸ್ಟರ್ ಆಗಿದ್ದು, ಆತನ ಹೆಸರನ್ನು ಈ ರೀತಿಯಲ್ಲಿ ದುರ್ಬಳಕೆ ಮಾಡಿರುವುದು ಗಂಭೀರ ಕಳವಳಕ್ಕೆ ಕಾರಣವಾಗಿದೆ. ಈ ಘಟನೆಯು ಬೆಳಕಿಗೆ ಬಂದ ನಂತರ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಅವರ ಸೂಚನೆಯಂತೆ ಸುಮೋಟೋ ಕೇಸ್ ದಾಖಲಿಸಲಾಗಿದೆ. ಈ ಘಟನೆಯು ಸುಮಾರು ಒಂದು ತಿಂಗಳ ಹಿಂದೆ ನಡೆದಿರುವ ಸಾಧ್ಯತೆ ಇದ್ದು, ದುಷ್ಕರ್ಮಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (BNSS) ಕಲಂ 324(2) ಮತ್ತು 329(3)ರಡಿ ಪ್ರಕರಣ ದಾಖಲಾಗಿದೆ.
ಈ ಘಟನೆಯ ಬಗ್ಗೆ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ ಮಾತನಾಡಿದ್ದು, ದುಷ್ಕರ್ಮಿಗಳನ್ನು ಶೀಘ್ರವಾಗಿ ಪತ್ತೆಹಚ್ಚಲು ತನಿಖೆ ತೀವ್ರಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಸ್ಥಳದಲ್ಲಿ ಇರುವ ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಗಳನ್ನು ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ. ಇದೇ ವೇಳೆ, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸಿಬ್ಬಂದಿಯು ಗೋಡೆಯ ಮೇಲೆ ಬರೆದಿದ್ದ ಲಾರೆನ್ಸ್ ಬಿಷ್ಣೋಯ್ ಹೆಸರನ್ನು ತಕ್ಷಣವೇ ಅಳಿಸಿದ್ದಾರೆ. ಬಿಷ್ಣೋಯ್ ಹೆಸರಿನ ಮೇಲೆ ಬಣ್ಣವನ್ನು ಬಳಿದು ಗೋಡೆಯನ್ನು ಸ್ವಚ್ಛಗೊಳಿಸಲಾಗಿದೆ.
