ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಸ್ತಿ ವಿಚಾರಕ್ಕೆ ಸ್ವಂತ ಅಣ್ಣನೇ ತಂಗಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಮನೆ ಖಾಲಿ ಮಾಡುವಂತೆ ಪದೇಪದೆ ಕಿರುಕುಳ ನೀಡುತ್ತಿದ್ದ ಅಣ್ಣ, ಗಲಾಟೆಯ ಬಳಿಕ ಕ್ರಿಕೆಟ್ ಬ್ಯಾಟ್‌ನಿಂದ ತಂಗಿಯ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ. ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಜುನ್ನಸಂದ್ರದಲ್ಲಿ ಈ ಘಟನೆ ನಡೆದಿದೆ.
ಹತ್ಯೆಯಾದ ಮಹಿಳೆಯನ್ನು 39 ವರ್ಷದ ಮೀನಾಕ್ಷಿ ಎಂದು ಗುರುತಿಸಲಾಗಿದೆ. ಕೊಲೆ ಆರೋಪಿಯನ್ನು ಜಯರಾಮ್ ಎಂದು ಗುರುತಿಸಲಾಗಿದ್ದು, ವೃತ್ತಿಯಲ್ಲಿ ವಕೀಲನಾಗಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆಸ್ತಿ ವಿಚಾರಕ್ಕೆ ಅಣ್ಣ-ತಂಗಿ ನಡುವೆ ವೈಷಮ್ಯ!
ಮೀನಾಕ್ಷಿ ಕೆಲವು ತಿಂಗಳಿನಿಂದ ಗಂಡನನ್ನು ಬಿಟ್ಟು ತನ್ನ ಇಬ್ಬರು ಮಕ್ಕಳೊಂದಿಗೆ ತವರು ಮನೆಯಲ್ಲೇ ವಾಸವಾಗಿದ್ದರು. ಅಣ್ಣ ಜಯರಾಮ್ ವಾಸವಿದ್ದ ಮನೆಯ ಎದುರಿನ ಶೀಟ್ ಮನೆಯಲ್ಲಿ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದರು. ಆದರೆ, ತಂಗಿ ಅಲ್ಲಿ ವಾಸವಿರುವುದಕ್ಕೆ ಜಯರಾಮ್ ವಿರೋಧ ವ್ಯಕ್ತಪಡಿಸುತ್ತಿದ್ದ ಎನ್ನಲಾಗಿದೆ.
ಶೀಟ್ ಮನೆಯನ್ನು ಖಾಲಿ ಮಾಡಿಕೊಂಡು ಬೇರೆಡೆಗೆ ಹೋಗುವಂತೆ ಜಯರಾಮ್ ಪದೇಪದೆ ಮೀನಾಕ್ಷಿಗೆ ಒತ್ತಡ ಹೇರುತ್ತಿದ್ದ ಎನ್ನುವ ಆರೋಪ ಕೇಳಿಬಂದಿದೆ. ಇದೇ ವಿಚಾರವಾಗಿ ಅಣ್ಣ-ತಂಗಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಸ್ವಂತ ತಂಗಿಯೇ ಆಗಿದ್ದರೂ ಮನೆ ಖಾಲಿ ಮಾಡುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಕಿಟಕಿಯಿಂದ ನೀರು ಎರಚಿದ್ದೇ ಗಲಾಟೆಗೆ ಕಾರಣ?
ಘಟನೆ ನಡೆದ ದಿನ ಬೆಳಗ್ಗೆ ಜಯರಾಮ್ ಪತ್ನಿ ಮನೆಯ ಕಿಟಕಿಯಿಂದ ನೀರು ಎರಚಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಜಯರಾಮ್ ಪತ್ನಿ ಮತ್ತು ಮೀನಾಕ್ಷಿ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಶೆಡ್ ಖಾಲಿ ಮಾಡಿಕೊಂಡು ಹೋಗುವಂತೆ ಜಯರಾಮ್ ಪತ್ನಿ ಮೀನಾಕ್ಷಿ ಜೊತೆ ಜಗಳವಾಡಿದ್ದಾರೆ ಎನ್ನಲಾಗಿದೆ.
ಬಳಿಕ ನಡೆದ ಗಲಾಟೆಯ ಬಗ್ಗೆ ಜಯರಾಮ್ ಪತ್ನಿ ತನ್ನ ಪತಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಕೋಪಗೊಂಡ ಜಯರಾಮ್ ಏಕಾಏಕಿ ತಂಗಿ ಮೀನಾಕ್ಷಿ ಇದ್ದ ಶೀಟ್ ಮನೆಗೆ ಬಂದಿದ್ದಾನೆ. ಮಾತುಕತೆ ನಡೆಸುವ ಬದಲು ಕೈಗೆ ಬ್ಯಾಟ್ ತೆಗೆದುಕೊಂಡು ಮೀನಾಕ್ಷಿಯ ಮೇಲೆ ಹಲ್ಲೆ ನಡೆಸಿದ್ದಾನೆ.
ಬ್ಯಾಟ್‌ನಿಂದ ತಲೆಗೆ ಹೊಡೆದು ಬರ್ಬರ ಹತ್ಯೆ!
ಬೆಳಗ್ಗೆ ಸುಮಾರು 11.30ರ ವೇಳೆಗೆ ನಡೆದ ಈ ಘಟನೆಯಲ್ಲಿ ಜಯರಾಮ್ ಕ್ರಿಕೆಟ್ ಬ್ಯಾಟ್‌ನಿಂದ ತಂಗಿ ಮೀನಾಕ್ಷಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ. ತೀವ್ರವಾಗಿ ಗಾಯಗೊಂಡ ಮೀನಾಕ್ಷಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಆರೋಪಿ ಜಯರಾಮ್ ಪೊಲೀಸ್ ವಶಕ್ಕೆ!
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಬೆಳ್ಳಂದೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೀನಾಕ್ಷಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೇಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಇತ್ತ ಕೊಲೆ ಆರೋಪಿಯಾಗಿರುವ ಜಯರಾಮ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
