ಪಹಲ್ಗಾಮ್ ನರಮೇಧ: ಸಚಿವ ಈಶ್ವರ ಖಂಡ್ರೆ ಖಂಡನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಆಗ್ರಹ

Untitled design 2025 04 23t153947.016

ಬೆಂಗಳೂರು, ಏ.23: ಜಮ್ಮು-ಕಾಶ್ಮೀರದ ಪೆಹಲ್ಮಾನ್ ನಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ದಾಳಿ ಅತ್ಯಂತ ಹೇಯ ಮತ್ತು ಬರ್ಬರವಾದದ್ದು, ಈ ಹೇಡಿ ಕೃತ್ಯವನ್ನು ಉಗ್ರವಾಗಿ ಖಂಡಿಸುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡಿಗರ ಮೃತದೇಹವನ್ನು ತರಲು ಮತ್ತು ಕಾಶ್ಮೀರ ಪ್ರವಾಸಕ್ಕೆ ತೆರಳಿ ಸಂಕಷ್ಟಕ್ಕೆ ಸಿಲುಕಿರುವ 40ಕ್ಕೂ ಅಧಿಕ ರಾಜ್ಯದ ಪ್ರವಾಸಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ವಿಶೇಷ ವಿಮಾನದ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿಯವರು ಈಗಾಗಲೇ ಸೂಚನೆ ನೀಡಿದ್ದಾರೆ ಎಂದರು.
ಸಚಿವ ಸಂತೋಷ್ ಲಾಡ್ ಅವರು ಘಟನಾ ಸ್ಥಳಕ್ಕೆ ಹೋಗಿದ್ದು, ನೊಂದವರಿಗೆ ಸಾಂತ್ವನ ಹೇಳಿದ್ದಾರೆ. ನೊಂದವರ ನೆರವಿಗೆ ನಿಂತಿದ್ದಾರೆ. ರಾಜ್ಯ ಸರ್ಕಾರ ಈ ನೋವಿನ ಸಂದರ್ಭದಲ್ಲಿ ನೊಂದವರ ಜೊತೆ ನಿಲ್ಲುತ್ತದೆ ಎಂದೂ ಹೇಳಿದರು.

ಅಮಿತ್ ಶಾ ರಾಜೀನಾಮೆಗೆ ಆಗ್ರಹ

ಕೇಂದ್ರ ಸರ್ಕಾರ 370 ವಿಧಿ ರದ್ದತಿ ಮತ್ತು ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯ ಬಳಿಕ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರ ಸದ್ದಡಗಿಸಿದ್ದು, ಪ್ರವಾಸಕ್ಕೆ ಮುಕ್ತವಾಗಿದೆ, ಜನರು ನಿರ್ಭೀತಿಯಿಂದ ಕಾಶ್ಮೀರಕ್ಕೆ ಬನ್ನಿ ಎಂದು ಪದೇ ಪದೇ ಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ರಾಜ್ಯದ ಪ್ರವಾಸಿಗರೂ ಸೇರಿದಂತೆ ದೇಶ-ವಿದೇಶದ ಪ್ರವಾಸಿಗರು ಕೇಂದ್ರ ಸರ್ಕಾರದ ಹೇಳಿಕೆ ನಂಬಿ ಕಾಶ್ಮೀರಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಇವರಿಗೆ ಸೂಕ್ತ ಭದ್ರತೆ ನೀಡಬೇಕಾದ್ದು, ಕೇಂದ್ರ ಹಾಗೂ ಕಾಶ್ಮೀರ ರಾಜ್ಯ ಸರ್ಕಾರದ ಜವಾಬ್ದಾರಿಯಾಗಿತ್ತು. ಆದರೆ ಕೇಂದ್ರ ಗೃಹ ಸಚಿವಾಲಯ ಈ ಜವಾಬ್ದಾರಿ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ನೈತಿಕ ಹೊಣೆ ಹೊತ್ತು ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ನೂರಾರು ಜನ ಪ್ರವಾಸಿಗರು ಇದ್ದ ಜಾಗದಲ್ಲಿ ಭದ್ರತಾ ಸಿಬ್ಬಂದಿ ಇರಲಿಲ್ಲ, ಸುರಕ್ಷತೆ ಇರಲಿಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತಿದೆ. ಇದು ಕೇಂದ್ರ ಸರ್ಕಾರ ಮತ್ತು ಜಮ್ಮು ಕಾಶ್ಮೀರ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಮತ್ತು ಬೇಹುಗಾರಿಕೆ ವೈಫಲ್ಯವೇ ಆಗಿದೆ ಎಂದು ಈಶ್ವರ ಖಂಡ್ರೆ ಹೇಳಿದರು.

Exit mobile version