ಬೆಂಗಳೂರಿನ 7 ಜನರ ಹ*ತ್ಯೆ ಕೇಸ್: 5 ಮೃತದೇಹ ಪತ್ತೆ, ಉಳಿದ 2 ಶವಗಳಿಗಾಗಿ ಮುಂದುವರೆದ ಶೋಧ

Untitled Design 2026 11 08T123842.552

ಬೆಂಗಳೂರು, ನವೆಂಬರ್ 8: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂದೇ ಕುಟುಂಬದ ಏಳು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ರಾಜಾಜಿನಗರ ಪೊಲೀಸರು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮತ್ತೆರಡು ಮೃತದೇಹಗಳನ್ನು ಪತ್ತೆಹಚ್ಚಿದ್ದಾರೆ.

ಈ ಮೂಲಕ ಏಳು ಜನರ ಹತ್ಯೆ ಪ್ರಕರಣದಲ್ಲಿ ಈವರೆಗೆ ಐವರ ಮೃತದೇಹಗಳು ಪತ್ತೆಯಾದಂತಾಗಿದೆ. ಇನ್ನುಳಿದ ಇಬ್ಬರ ಮೃತದೇಹಗಳಿಗಾಗಿ ಪೊಲೀಸರು ಶಿರಾಡಿ ಘಾಟ್ ಪ್ರದೇಶದಲ್ಲಿ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಆರೋಪಿ ಇಂದುಶೇಖರ್ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಮೈಸೂರಿಗೆ ತೆರಳಿ ಶವಗಳನ್ನು ಪತ್ತೆಹಚ್ಚಿದ್ದಾರೆ. ಪತ್ತೆಯಾಗಿರುವ ಮೃತದೇಹಗಳು ಶಿವಕುಮಾರ್ ಮತ್ತು ದಿವ್ಯಾ ದಂಪತಿಯದ್ದು ಎನ್ನಲಾಗಿದೆ. ಆರೋಪಿಯನ್ನು ಸ್ಥಳಕ್ಕೆ ಕರೆದೊಯ್ದು ಪರಿಶೀಲನೆ ನಡೆಸಿದ ಪೊಲೀಸರು, ಕುಟುಂಬಸ್ಥರ ಸಮ್ಮುಖದಲ್ಲಿ ಮೃತದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಅಗತ್ಯ ವೈದ್ಯಕೀಯ ಮತ್ತು ಕಾನೂನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲು ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.

ಒಂದೊಂದಾಗಿ ಪತ್ತೆಯಾಗುತ್ತಿರುವ ಮೃತದೇಹಗಳು

ಏಳು ಜನರ ಹತ್ಯೆ ಪ್ರಕರಣದಲ್ಲಿ ಈಗಾಗಲೇ ವಿವಿಧ ಸ್ಥಳಗಳಲ್ಲಿ ಮೃತದೇಹಗಳು ಪತ್ತೆಯಾಗಿವೆ. ಈ ಹಿಂದೆ ಏಳು ವರ್ಷದ ಬಾಲಕ ಪುನೀತ್‌ನ ಮೃತದೇಹ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿತ್ತು. ಬಳಿಕ ಮೃತದೇಹವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ನಂತರ ಕುಟುಂಬಸ್ಥರು ಅಂತ್ಯಸಂಸ್ಕಾರ ನೆರವೇರಿಸಿದ್ದರು.

ಇದಾದ ಬಳಿಕ ತಮಿಳುನಾಡಿನ ಸೇಲಂನಲ್ಲಿ ಸುನೀತಾ ಮತ್ತು ರೂಪವತಿ ಅವರ ಮೃತದೇಹಗಳು ಪತ್ತೆಯಾಗಿದ್ದವು. ಇದೀಗ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಶಿವಕುಮಾರ್ ಮತ್ತು ದಿವ್ಯಾ ದಂಪತಿಯ ಮೃತದೇಹಗಳು ಪತ್ತೆಯಾಗಿವೆ. ಹೀಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಒಟ್ಟು ಐವರ ಮೃತದೇಹಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

ಆರೋಪಿಯ ವಿಚಾರಣೆಯ ವೇಳೆ ಲಭ್ಯವಾಗುತ್ತಿರುವ ಮಾಹಿತಿಗಳನ್ನು ಆಧರಿಸಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಒಂದೇ ಕಡೆ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರ ಸಿದ್ಧತೆ

ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಸ್ಥರು ಈಗಾಗಲೇ ಅಂತ್ಯಸಂಸ್ಕಾರದ ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ವಿವಿಧ ಸ್ಥಳಗಳಲ್ಲಿ ಪತ್ತೆಯಾಗಿರುವ ಮೃತದೇಹಗಳನ್ನು ಒಂದೇ ಕಡೆ ಅಂತ್ಯಕ್ರಿಯೆ ನಡೆಸುವ ಕುರಿತು ಕುಟುಂಬಸ್ಥರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಸದ್ಯ ಸೇಲಂನಲ್ಲಿ ಪತ್ತೆಯಾಗಿರುವ ಸುನೀತಾ ಮತ್ತು ರೂಪವತಿ ಅವರ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಮತ್ತೊಂದೆಡೆ ಮೈಸೂರಿನಲ್ಲಿ ಪತ್ತೆಯಾಗಿರುವ ಶಿವಕುಮಾರ್ ಮತ್ತು ದಿವ್ಯಾ ದಂಪತಿಯ ಮೃತದೇಹಗಳಿಗೂ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ವೈದ್ಯಕೀಯ ಪರೀಕ್ಷೆ ಮತ್ತು ಅಗತ್ಯ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ.

 

ಉಳಿದ ಇಬ್ಬರ ಶವಗಳಿಗಾಗಿ ಶಿರಾಡಿ ಘಾಟ್‌ನಲ್ಲಿ ಶೋಧ

ಇನ್ನು ಈ ಪ್ರಕರಣದಲ್ಲಿ ಹತ್ಯೆಯಾಗಿರುವ ಏಳು ಜನರ ಪೈಕಿ ಶಂಕರ್ ಮತ್ತು ನಳಿನಿ ಅವರ ಮೃತದೇಹಗಳು ಇನ್ನೂ ಪತ್ತೆಯಾಗಿಲ್ಲ. ಆರೋಪಿ ಇಂದುಶೇಖರ್ ನೀಡಿರುವ ಮಾಹಿತಿ ಪ್ರಕಾರ, ಈ ಇಬ್ಬರ ಮೃತದೇಹಗಳನ್ನು ಶಿರಾಡಿ ಘಾಟ್ ಪ್ರದೇಶದಲ್ಲಿ ಎಸೆಯಲಾಗಿದೆ ಎನ್ನಲಾಗಿದೆ.

ಹೀಗಾಗಿ ಪೊಲೀಸರು ಆರೋಪಿಯನ್ನು ನೀಡಿದ ಸುಳಿವಿನ ಆಧಾರದಲ್ಲಿ ಶಿರಾಡಿ ಘಾಟ್‌ನ ವಿವಿಧ ಪ್ರದೇಶಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಕಾಡು ಪ್ರದೇಶ, ಕಣಿವೆ ಹಾಗೂ ನಿರ್ಜನ ಸ್ಥಳಗಳಲ್ಲಿ ಪರಿಶೀಲನೆ ಮುಂದುವರಿದಿದೆ. ಅಗತ್ಯವಿರುವ ಕಡೆ ಸ್ಥಳೀಯ ಪೊಲೀಸರ ನೆರವನ್ನೂ ಪಡೆಯಲಾಗುತ್ತಿದೆ. ಮತ್ತೊಂದೆಡೆ ಪ್ರಕರಣದ ಪ್ರಮುಖ ಆರೋಪಿ ಇಂದುಶೇಖರ್‌ನ ವಿಚಾರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.

Exit mobile version