ಗ್ಯಾಸ್‌ ಸಿಲಿಂಡರ್‌ ಕೊರತೆ: ನಾಳೆಯಿಂದ ಹೋಟೆಲ್ಸ್‌ ತೆಗೆಯೋದು ಡೌಟ್‌..!!

Untitled design 2026 03 09T221532.240

ಬೆಂಗಳೂರು: ಪಶ್ಚಿಮ ಏಷ್ಯಾದ ಯುದ್ಧದ ಕಿಚ್ಚು ಈಗ ಸಿಲಿಕಾನ್ ಸಿಟಿಯ ಹೋಟೆಲ್‌ಗಳ ಅಡುಗೆ ಮನೆಗೆ ತಟ್ಟಿದೆ. ಇಸ್ರೇಲ್ ಮತ್ತು ಇರಾನ್ ಸಂಘರ್ಷದಿಂದಾಗಿ ಪೆಟ್ರೋಲ್, ಡೀಸೆಲ್ ಕೊರತೆಯ ಆತಂಕದ ಬೆನ್ನಲ್ಲೇ, ಈಗ ವಾಣಿಜ್ಯ ಬಳಕೆಯ ಎಲ್‌ಪಿಜಿ (Commercial LPG) ಸಿಲಿಂಡರ್ ಸರಬರಾಜಿನಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಈ ದಿಢೀರ್ ಬೆಳವಣಿಗೆಯಿಂದಾಗಿ ನಾಳೆಯಿಂದ ಬೆಂಗಳೂರಿನ ಹೋಟೆಲ್‌ಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ವಾಣಿಜ್ಯ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಇಂದು ತುರ್ತು ಸುದ್ದಿಗೋಷ್ಠಿ ನಡೆಸಿತು. ಸರ್ಕಾರವು ಮೊದಲು 60 ರಿಂದ 70 ದಿನಗಳ ಕಾಲ ಅಗತ್ಯವಿರುವಷ್ಟು ಅನಿಲ ದಾಸ್ತಾನು ಇದೆ ಎಂದು ಹೇಳಿತ್ತು. ಆದರೆ ಈಗ ಏಕಾಏಕಿ ಸರಬರಾಜು ಸ್ಥಗಿತಗೊಳಿಸಿರುವುದು ನಮಗೆ ಬರಸಿಡಿಲು ಬಡಿದಂತಾಗಿದೆ ಎಂದು ಸಂಘದ ಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದರು. ಹೋಟೆಲ್ ಉದ್ಯಮ ನಂಬಿಕೊಂಡಿರುವ ಲಕ್ಷಾಂತರ ಕಾರ್ಮಿಕರು ಮತ್ತು ಪ್ರತಿದಿನ ಹೋಟೆಲ್ ಆಹಾರವನ್ನೇ ಅವಲಂಬಿಸಿರುವ ಸಾರ್ವಜನಿಕರು ಇದರಿಂದ ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ ಮಾತನಾಡಿ, ನಾವು ಹೋಟೆಲ್ ಬಂದ್ ಮಾಡಲು ಸಿದ್ಧರಿಲ್ಲ. ಆದರೆ ಗ್ಯಾಸ್ ಇಲ್ಲದೆ ಅಡುಗೆ ಮಾಡುವುದು ಹೇಗೆ ? ಬಹುತೇಕ ಹೋಟೆಲ್‌ಗಳಲ್ಲಿ ನಾಳೆ ಮಧ್ಯಾಹ್ನದವರೆಗೆ ಮಾತ್ರ ಆಗುವಷ್ಟು ಸಿಲಿಂಡರ್ ಸ್ಟಾಕ್ ಇದೆ. ಸಂಪೂರ್ಣವಾಗಿ ವಾಣಿಜ್ಯ ಅನಿಲ ಪೂರೈಕೆ ನಿಲ್ಲಿಸುವುದು ತಪ್ಪು. ಸರ್ಕಾರವು ರೇಷನಿಂಗ್ ಮೂಲಕವಾದರೂ ಅನಿಲ ನೀಡಬೇಕು. ಅಂದರೆ 10 ಸಿಲಿಂಡರ್ ಬಳಸುವವರಿಗೆ ಕನಿಷ್ಠ 8 ನೀಡುವ ವ್ಯವಸ್ಥೆಯನ್ನಾದರೂ ಮಾಡಬೇಕು ಎಂದು ಆಗ್ರಹಿಸಿದರು.

ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲ

ಈ ಇಡೀ ಬೆಳವಣಿಗೆಗೆ ಕೇಂದ್ರ ಸರ್ಕಾರದ ನೀತಿಯೇ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ಕೇಂದ್ರ ಸರ್ಕಾರವು ವಾಣಿಜ್ಯ ಎಲ್‌ಪಿಜಿ ದರವನ್ನು 115 ರೂಪಾಯಿ ಮತ್ತು ಗೃಹಬಳಕೆ ಅನಿಲ ದರವನ್ನು 63 ರೂಪಾಯಿ ಹೆಚ್ಚಿಸಿದೆ. ಬೆಲೆ ಏರಿಕೆ ಮಾತ್ರವಲ್ಲದೆ ಪೂರೈಕೆಯಲ್ಲೂ ವಿಫಲವಾಗಿದೆ. ಹೋಟೆಲ್ ಸಂಘಟನೆಯ ಪ್ರತಿಭಟನೆ ಮತ್ತು ಆತಂಕ ನ್ಯಾಯಯುತವಾಗಿದೆ ಎಂದು ಸಿಎಂ ಬೆಂಬಲ ಸೂಚಿಸಿದ್ದಾರೆ.

ಕೋವಿಡ್ ಸಂಕಷ್ಟದ ನಂತರ ಇದೀಗ ಚೇತರಿಸಿಕೊಳ್ಳುತ್ತಿದ್ದ ಹೋಟೆಲ್ ಉದ್ಯಮಕ್ಕೆ ಈ ಇಂಧನ ಬಿಕ್ಕಟ್ಟು ಮರಣಶಾಸನವಾಗುವ ಭೀತಿ ಎದುರಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣವೇ ಮಧ್ಯಪ್ರವೇಶಿಸಿ ಅನಿಲ ಪೂರೈಕೆಯನ್ನು ಸುಗಮಗೊಳಿಸದಿದ್ದರೆ, ನಾಳೆಯಿಂದ ಬೆಂಗಳೂರಿನ ಹೆಸರಾಂತ ಹೋಟೆಲ್‌ಗಳ ಬಾಗಿಲು ಮುಚ್ಚುವುದು ಅನಿವಾರ್ಯವಾಗಲಿದೆ.

Exit mobile version