ಇಂದಿನಿಂದ ಬೆಂಗಳೂರು ಸೇರಿ ರಾಜ್ಯಾಂದ್ಯಂತ 5ದಿನಗಳ ಕಾಲ ಗುಡುಗು ಸಹಿತ ಮಳೆ

Befunky collage 2025 05 24t104653.344

ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಬಿಸಿಲಿನ ಝಳ ಕಡಿಮೆಯಾಗಿ, ಮಬ್ಬು ವಾತಾವರಣ ಮತ್ತು ತಂಪು ಚಳಿಯ ಅನುಭವ ಕಾಣುತ್ತಿದೆ. ಶನಿವಾರದಿಂದ ಆಗಾಗ ಸುರಿಯುತ್ತಿರುವ ಮಳೆಯಿಂದ ಜನರು ಆಶ್ಚರ್ಯಗೊಂಡಿದ್ದಾರೆ. ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆಯ ಪ್ರಕಾರ, ಮೇ ಇಂದಿನಿಂದ ಮುಂದಿನ ಐದು ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ರಾಜ್ಯದ ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿಯೂ ಜೋರು ಮಳೆಯ ಮುನ್ಸೂಚನೆ ಇದೆ.

ನಿನ್ನೆ ಸಂಜೆಯಿಂದ ಬೆಂಗಳೂರಿನ ಕೆಲವು ಭಾಗಗಳಲ್ಲಿ ಲಘು ಮಳೆ ದಾಖಲಾಗಿದೆ. ಬೆಂಗಳೂರು ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್, ಎಚ್‌ಎಎಲ್ ವಿಮಾನ ನಿಲ್ದಾಣ, ಯಲಹಂಕ, ಚೌಡೇಶ್ವರಿ, ಎಲೆಕ್ಟ್ರಾನಿಕ್ ಸಿಟಿ, ಮತ್ತು ಬೆಳ್ಳಂದೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಸೋನೆ ಮಳೆಯಾಗಿದೆ. ಕೆಲವೆಡೆ ಕೇವಲ 1 ಮಿಲಿಮೀಟರ್ ಮಳೆ ದಾಖಲಾಗಿದ್ದು, ಒಟ್ಟಾರೆ ನಗರದಲ್ಲಿ ಮೋಡ ಕವಿದ ತಂಪಾದ ವಾತಾವರಣವೇ ಕಂಡುಬಂದಿದೆ. ಈ ಪೂರ್ವ ಮುಂಗಾರು ಮಳೆಯು ಶೀಘ್ರವೇ ತೀವ್ರಗೊಳ್ಳುವ ಸಾಧ್ಯತೆ ಇದ್ದು, ಮೇ ತಿಂಗಳ ಅಂತ್ಯದ ವೇಳೆಗೆ ರಾಜ್ಯಾದ್ಯಂತ ಜೋರು ಮಳೆಯಾಗುವ ನಿರೀಕ್ಷೆ ಇದೆ.

ಹವಾಮಾನ ಇಲಾಖೆಯ ಪ್ರಕಾರ, ಪ್ರತಿ ಗಂಟೆಗೆ ಗಾಳಿಯ ವೇಗ 30-40 ಕಿಲೋಮೀಟರ್‌ನಷ್ಟಿರಲಿದ್ದು, ಕೆಲವೊಮ್ಮೆ ಇದು ಹೆಚ್ಚಾಗಬಹುದು. ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್‌ನಷ್ಟಿರಲಿದೆ. ಈ ಜಿಟಿಜಿಟಿ ಮಳೆಯಿಂದ ನೆಗಡಿ, ಶೀತ, ಜ್ವರದಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೆ, ಕೂಡಲೇ ಸ್ಥಳೀಯ ಆಸ್ಪತ್ರೆಯನ್ನು ಸಂಪರ್ಕಿಸುವಂತೆ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

ಮಳೆಯಿಂದಾಗಿ ಕೆಲವು ಕಡಿಮೆ ಎತ್ತರದ ಪ್ರದೇಶಗಳಲ್ಲಿ ನೀರು ತುಂಬುವ ಸಾಧ್ಯತೆ ಇದ್ದು, ಜನರು ಎಚ್ಚರಿಕೆಯಿಂದ ಇರಬೇಕೆಂದು ಜಿಲ್ಲಾಡಳಿತ ಸೂಚಿಸಿದೆ.

ರಾಜ್ಯದ ಇತರ ಜಿಲ್ಲೆಗಳಲ್ಲಿ ಕೂಡ ಭಾರೀ ಮಳೆ ದಾಖಲಾಗಿದೆ. ಶನಿವಾರ ಬೆಳಗ್ಗೆ 3 ಗಂಟೆಯವರೆಗೆ ದಕ್ಷಿಣ ಕನ್ನಡದಲ್ಲಿ 167 ಮಿಲಿಮೀಟರ್, ಬೆಳಗಾವಿಯಲ್ಲಿ 146 ಮಿಲಿಮೀಟರ್, ಉಡುಪಿಯಲ್ಲಿ 144 ಮಿಲಿಮೀಟರ್, ಚಿಕ್ಕಮಗಳೂರಿನಲ್ಲಿ 138 ಮಿಲಿಮೀಟರ್, ಉತ್ತರ ಕನ್ನಡದಲ್ಲಿ 100 ಮಿಲಿಮೀಟರ್, ಕೊಡಗಿನಲ್ಲಿ 74 ಮಿಲಿಮೀಟರ್, ಮತ್ತು ಶಿವಮೊಗ್ಗದಲ್ಲಿ 71 ಮಿಲಿಮೀಟರ್ ಮಳೆ ದಾಖಲಾಗಿದೆ. ಇವುಗಳ ಜೊತೆಗೆ, ಹಾವೇರಿ, ತುಮಕೂರು, ಹಾಸನ, ಮತ್ತು ಗದಗ ಜಿಲ್ಲೆಗಳಲ್ಲಿ ತುಂತುರು ಮಳೆಯಾಗಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಮಬ್ಬು ವಾತಾವರಣ ಕಂಡುಬಂದಿದ್ದು, ಬಿಸಿಲಿನ ಝಳ ಕಡಿಮೆಯಾಗಿದೆ.

Exit mobile version