GBA ಅಧಿಕಾರಿಗಳ ಮೇಲೆ ಹಲ್ಲೆ ಕೇಸ್‌: 7 ಆರೋಪಿಗಳ ಬಂಧನ

Untitled design 2026 07 21T163957.025

ಬೆಂಗಳೂರು: ಬೆಂಗಳೂರಿನ ಶಿವಾಜಿನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಪೊಲೀಸರು 7 ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ರೂವಾರಿ ಎಂದು ಹೇಳಲಾಗುತ್ತಿರುವ ಬಸವರಾಜ್ ಪಡುಕೋಟೆ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ಮುಂದುವರಿದಿದೆ. 

ಮಂಗಳವಾರ ಶಿವಾಜಿನಗರ ಬಸ್ ನಿಲ್ದಾಣದ ಸುತ್ತಮುತ್ತ ರಸ್ತೆಬದಿಯ ಅಕ್ರಮ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು GBA ಅಧಿಕಾರಿಗಳು ಕೈಗೊಂಡಿದ್ದರು. ಈ ವೇಳೆ ಕೆಲವರು ಕಾರ್ಯಾಚರಣೆಗೆ ಅಡ್ಡಿಪಡಿಸಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಮಾತಿನ ಚಕಮಕಿ ಕ್ಷಣಾರ್ಧದಲ್ಲೇ ವಿಕೋಪಕ್ಕೆ ತಿರುಗಿ, ಗುಂಪೊಂದು ಅಧಿಕಾರಿಗಳ ಮೇಲೆ ಹಲ್ಲೆ ಮಾಡಲಾಗಿದೆ.

ಹಲ್ಲೆ ವೇಳೆ ಅಧಿಕಾರಿಗಳನ್ನು ರಸ್ತೆಯಲ್ಲೇ ಬೆನ್ನಟ್ಟಿ ದೌರ್ಜನ್ಯ ಎಸಗಿರುವ ದೃಶ್ಯಗಳು ಸ್ಥಳೀಯರ ಮೊಬೈಲ್ ಹಾಗೂ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಘಟನೆಯಿಂದ ಕೆಲಕಾಲ ಶಿವಾಜಿನಗರ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರು ಆತಂಕಕ್ಕೊಳಗಾದರು.

ಅಧಿಕಾರಿಗಳ ಮೇಲೆ ಹಲ್ಲೆ, ಪೆಪ್ಪರ್ ಸ್ಪ್ರೇ ಆರೋಪ

ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ GBA ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ಮಾಧವ್ ರಾವ್, ಸಹಾಯಕ ಎಂಜಿನಿಯರ್ ಗೌತಮ್ ಹಾಗೂ ಎಂಜಿನಿಯರ್ ರುಚಿತಾ ಅವರ ಮೇಲೆ ಹಲ್ಲೆ ನಡೆದಿರುವುದು ತಿಳಿದುಬಂದಿದೆ. ಮಹಿಳಾ ಎಂಜಿನಿಯರ್ ರುಚಿತಾ ಅವರ ಮೇಲೆ ಪೆಪ್ಪರ್ ಸ್ಪ್ರೇ ಸಿಂಪಡಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದ್ದು, ಈ ಕುರಿತು ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರ ತ್ವರಿತ ಕಾರ್ಯಾಚರಣೆ

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಮರ್ಷಿಯಲ್ ಸ್ಟ್ರೀಟ್ ವಿಭಾಗದ ಪೊಲೀಸರು ಸಿಸಿಟಿವಿ ದೃಶ್ಯಗಳು, ವಿಡಿಯೊ ಸಾಕ್ಷ್ಯಗಳು ಹಾಗೂ ಸ್ಥಳೀಯರ ಮಾಹಿತಿಯ ಆಧಾರದ ಮೇಲೆ ತನಿಖೆ ನಡೆಸಿದರು. ತನಿಖೆಯ ಫಲವಾಗಿ 7 ಆರೋಪಿಗಳನ್ನು ಬಂಧಿಸಲಾಗಿದೆ.

ಮುಖ್ಯ ಆರೋಪಿ ಬಸವರಾಜ್ ಪಡುಕೋಟೆ ಘಟನೆ ಬಳಿಕ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಸರ್ಕಾರಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳ ಮೇಲೆ ಹಲ್ಲೆ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವುದು ಹಾಗೂ ಕೊಲೆ ಯತ್ನ ಸೇರಿದಂತೆ ವಿವಿಧ ಗಂಭೀರ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ.

ಪೊಲೀಸ್ ಆಯುಕ್ತರ ಹೇಳಿಕೆ

ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾತನಾಡಿ, “ಸರ್ಕಾರಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವುದು ಗಂಭೀರ ಅಪರಾಧ. ಘಟನೆಗೆ ಸಂಬಂಧಿಸಿದ ವಿಡಿಯೊಗಳು ಹಾಗೂ ಸಾಕ್ಷ್ಯಗಳು ನಮ್ಮ ಬಳಿ ಲಭ್ಯವಿದ್ದು, ಎಲ್ಲ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಕರಣದ ಸಂಪೂರ್ಣ ಹಿನ್ನೆಲೆಯನ್ನು ತನಿಖೆ ಮೂಲಕ ಬಹಿರಂಗಪಡಿಸಲಾಗುವುದು” ಎಂದು ತಿಳಿಸಿದ್ದಾರೆ.

ಡಿಸಿಪಿ ವಿಕ್ರಮ್ ಆಮ್ಟೆ ಪ್ರತಿಕ್ರಿಯೆ

ಡಿಸಿಪಿ ವಿಕ್ರಮ್ ಆಮ್ಟೆ ಮಾತನಾಡಿ, “ಹಲ್ಲೆ ಪ್ರಕರಣದಲ್ಲಿ ಈಗಾಗಲೇ 7 ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಬಸವರಾಜ್ ಪಡುಕೋಟೆ ತಲೆಮರೆಸಿಕೊಂಡಿದ್ದು, ಶೀಘ್ರದಲ್ಲೇ ಆತನನ್ನೂ ಬಂಧಿಸಲಾಗುವುದು. ಅಧಿಕಾರಿಗಳ ಮೇಲೆ ಪೆಪ್ಪರ್ ಸ್ಪ್ರೇ ಬಳಕೆಯಾಗಿದೆ ಎಂಬ ಆರೋಪ ಸೇರಿದಂತೆ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ” ಎಂದು ಹೇಳಿದರು.

ಸಚಿವ ಕೃಷ್ಣಭೈರೇಗೌಡ ಖಡಕ್ ಸಂದೇಶ

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ಸುರಕ್ಷಿತ ಪಾದಚಾರಿ ಮಾರ್ಗ ನಿರ್ಮಾಣ ಅಭಿಯಾನದ ವೇಳೆ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರತಿಯೊಬ್ಬರನ್ನೂ ಬಂಧಿಸಲಾಗುತ್ತದೆ. ಕಾನೂನು ಜಾರಿಗೊಳಿಸುತ್ತಿದ್ದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವುದು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳಿಗೂ ವಿರುದ್ಧವಾಗಿದೆ. ಇಂತಹ ಸಮಾಜಘಾತುಕ ಶಕ್ತಿಗಳಿಗೆ ಯಾವುದೇ ರೀತಿಯ ರಿಯಾಯಿತಿ ನೀಡುವುದಿಲ್ಲ” ಎಂದು ಅವರು ಹೇಳಿದ್ದಾರೆ.

ಅಲ್ಲದೆ, ಪೊಲೀಸ್ ಆಯುಕ್ತರು ಹಾಗೂ GBA ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ತಪ್ಪಿತಸ್ಥರ ವಿರುದ್ಧ ಮಾದರಿಯಾಗುವಂತಹ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.

Exit mobile version