ಬೆಂಗಳೂರಿನಲ್ಲಿ ಪುಡಿರೌಡಿಗಳ ಅಟ್ಟಹಾಸ: ರಸ್ತೆಬದಿ ನಿಂತಿದ್ದ ಕಾರುಗಳ ಮೇಲೆ ದಾಳಿ

Untitled design 2025 09 26t121407.781

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರೌಡಿಗಳ ಗ್ಯಾಂಗ್‌ವೊಂದು ಮತ್ತೆ ಭಯದ ವಾತಾವರಣ ಸೃಷ್ಟಿಸಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ದಾಳಿ ನಡೆಸಿ, ಕಾರು ಮತ್ತು ಲಾರಿಗಳ ಗಾಜುಗಳನ್ನು ಪುಡಿಪುಡಿಯಾಗಿಸಿದ್ದಾರೆ.

ಬೆಂಗಳೂರಿನ ಬ್ಯಾಡರಹಳ್ಳಿಯ ವಾಲ್ಮೀಕಿ ನಗರ, ಎಪಿನಗರದ ಮುದ್ದಯ್ಯನಪಾಳ್ಯ ಹಾಗೂ ದೊಡ್ಡಬಳ್ಳಾಪುರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಘಟನೆಗಳು ನಡೆದಿವೆ. ಲಾಂಗ್‌ಗಳನ್ನು ಹಿಡಿದು ದಾಳಿ ನಡೆಸಿರುವ ಈ ಗ್ಯಾಂಗ್, ಸುಮಾರು 20ಕ್ಕೂ ಹೆಚ್ಚು ವಾಹನಗಳನ್ನು ಜಖಂಗೊಳಿಸಿದೆ, ಜೊತೆಗೆ ಚಾಲಕರ ಮೇಲೂ ಹಲ್ಲೆ ನಡೆಸಿದೆ.

ಬ್ಯಾಡರಹಳ್ಳಿಯ ವಾಲ್ಮೀಕಿ ನಗರದಲ್ಲಿ ರಾತ್ರಿಯ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರುಗಳ ಮೇಲೆ ಈ ಗ್ಯಾಂಗ್ ದಾಳಿ ನಡೆಸಿದೆ. ಕಾರುಗಳ ಗಾಜುಗಳನ್ನು ಒಡೆದು, ವಾಹನಗಳ ಒಳಗಿನ ವಸ್ತುಗಳನ್ನು ದೋಚಿಕೊಂಡಿದ್ದಾರೆ. ಕೆಲವು ಕಾರುಗಳ ಟಯರ್‌ಗಳನ್ನು ಸಹ ಚುಚ್ಚಿ ಹಾನಿಗೊಳಿಸಿದ್ದಾರೆ. ಇದೇ ರೀತಿ, ಎಪಿನಗರದ ಮುದ್ದಯ್ಯನಪಾಳ್ಯದಲ್ಲಿ ಲಾರಿಯೊಂದರ ಗಾಜುಗಳನ್ನು ಧ್ವಂಸಗೊಳಿಸಿ, ಚಾಲಕನಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡಲು ನಿರಾಕರಿಸಿದಾಗ, ಚಾಲಕನ ಮೇಲೆ ಲಾಂಗ್‌ನಿಂದ ಹಲ್ಲೆ ನಡೆಸಿ, ಅವನ ಪರ್ಸ್ ಮತ್ತು ಮೊಬೈಲ್ ಕಿತ್ತುಕೊಂಡು ಗ್ಯಾಂಗ್ ಪರಾರಿಯಾಗಿದೆ.

ಮಾದನಾಯಕನಹಳ್ಳಿಯಲ್ಲಿ ಇದೇ ಗ್ಯಾಂಗ್ ಇನ್ನೊಂದು ಘಟನೆಯಲ್ಲಿ ಚಾಲಕನೊಬ್ಬನ ಮೇಲೆ ದಾಳಿ ನಡೆಸಿದೆ. ಲಾಂಗ್‌ನಿಂದ ಗಾಯಗೊಳಿಸಿ, ಆತನಿಂದ ಹಣ ಮತ್ತು ಒಡವೆಗಳನ್ನು ಕಸಿದುಕೊಂಡಿದ್ದಾರೆ. ದೊಡ್ಡಬಳ್ಳಾಪುರದ ಬಳಿಯೂ ಈ ಗ್ಯಾಂಗ್ ತನ್ನ ದಾಂದಲೆಯನ್ನು ಮುಂದುವರೆಸಿದೆ. ರಸ್ತೆ ಬದಿಯ ವಾಹನಗಳ ಮೇಲೆ ಲಾಂಗ್‌ನಿಂದ ದಾಳಿ ನಡೆಸಿ, ಗಾಜುಗಳನ್ನು ಒಡೆದು, ಸ್ಥಳೀಯರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ. ಈ ಘಟನೆಗಳಿಂದ ಸ್ಥಳೀಯ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ.

ಈ ಘಟನೆಗಳಿಗೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಮತ್ತು ದೊಡ್ಡಬಳ್ಳಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಲು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ.

Exit mobile version