ಬೆಂಗಳೂರು: ದುಷ್ಟಶಕ್ತಿ ನಿವಾರಣೆ, ಹೋಮ-ಹವನ ಹಾಗೂ ವಿಶೇಷ ಪೂಜೆಗಳ ಹೆಸರಿನಲ್ಲಿ ಜನರನ್ನು ನಂಬಿಸಿ ಹಣ ದೋಚುವ ಘಟನೆಗಳು ಆಗಾಗ ಬೆಳಕಿಗೆ ಬರುತ್ತಿವೆ. ಇದೀಗ ಬೆಂಗಳೂರಿನಲ್ಲಿ ಮನೆಯಲ್ಲಿರುವ ದುಷ್ಟಶಕ್ತಿ ನಿವಾರಣೆಯ ನೆಪದಲ್ಲಿ ಹೋಮ-ಹವನ ನಡೆಸಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ನೂರಾರು ಕೋಟಿ ಹಣ ಬರುವುದಾಗಿ ನಂಬಿಸಿ ಆಂಧ್ರಪ್ರದೇಶ ಮೂಲದ ಮಹಿಳೆಯೊಬ್ಬರಿಗೆ ಸುಮಾರು ₹2.5 ಕೋಟಿ ರೂಪಾಯಿ ವಂಚಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ನಿವಾಸಿ ಎಂ. ಕುಮುದಾ (40) ಅವರು ನೀಡಿದ ದೂರಿನ ಆಧಾರದ ಮೇಲೆ ಸ್ವಯಂಘೋಷಿತ ದೇವಮಾನವ ಅಪ್ಪರ್ ಪಾಷಾ ಅಲಿಯಾಸ್ ‘ಪಾಷಾ ಗುರೂಜಿ’, ಆತನ ಸಹಚರರಾದ ಭರತ್ ಹಾಗೂ ಶಂಕರ್ ವಿರುದ್ಧ ಬೆಂಗಳೂರು ಸಿಸಿಬಿ ಪೊಲೀಸರು ಬಿಎನ್‌ಎಸ್ (ಭಾರತೀಯ ನ್ಯಾಯ ಸಂಹಿತೆ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರಿನ ಪ್ರಕಾರ, 2023ರಲ್ಲಿ ಕುಮುದಾ ಅವರ ಪುತ್ರ ರಸ್ತೆ ಅಪಘಾತಕ್ಕೀಡಾದ ಬಳಿಕ ಕುಟುಂಬ ತೀವ್ರ ಆತಂಕದಲ್ಲಿತ್ತು. ಇದೇ ಸಂದರ್ಭದಲ್ಲಿ ಆರೋಪಿಗಳು ಕುಟುಂಬವನ್ನು ಸಂಪರ್ಕಿಸಿ, “ನಿಮ್ಮ ಮನೆಯಲ್ಲಿ ದುಷ್ಟಶಕ್ತಿ ಹಾಗೂ ನೆಗೆಟಿವ್ ಎನರ್ಜಿ ಇದೆ. ಅದನ್ನು ನಿವಾರಣೆ ಮಾಡದಿದ್ದರೆ ಮತ್ತಷ್ಟು ಅನಾಹುತಗಳು ಸಂಭವಿಸುತ್ತವೆ” ಎಂದು ನಂಬಿಸಿದ್ದರು.
ಈ ಮಾತುಗಳನ್ನು ನಂಬಿದ ಕುಮುದಾ, ಆರಂಭದಲ್ಲಿ ವಿಶೇಷ ಹೋಮ, ಹವನ ಹಾಗೂ ಪೂಜೆಗಳಿಗಾಗಿ ಸುಮಾರು ₹8 ಲಕ್ಷ ನಗದು ಹಣವನ್ನು ಆರೋಪಿಗಳಿಗೆ ನೀಡಿದ್ದರು. ಬಳಿಕ ಆರೋಪಿಗಳು ಇನ್ನಷ್ಟು ನಂಬಿಕೆ ಹುಟ್ಟಿಸಲು ವಿವಿಧ ರೀತಿಯ ನಕಲಿ ದಾಖಲೆಗಳನ್ನು ತೋರಿಸಿ, ದೊಡ್ಡ ಮಟ್ಟದ ಆರ್ಥಿಕ ಲಾಭದ ಆಮಿಷವನ್ನೂ ಒಡ್ಡಿದ್ದರು.
ಪಾಷಾ ಗುರೂಜಿ, ಭಾರತೀಯ ರಿಸರ್ವ್ ಬ್ಯಾಂಕ್ (RBI) ವತಿಯಿಂದ ತನಗೆ ₹505 ಕೋಟಿ ಹಣ ಬರಬೇಕಿದೆ ಎಂದು ಹೇಳಿ, ಅದರ ಸಂಬಂಧದ ನಕಲಿ ದಾಖಲೆಗಳನ್ನು ತೋರಿಸಿದ್ದಾನೆ ಎನ್ನಲಾಗಿದೆ. “ನೀವು ನಿಮ್ಮ ಆಸ್ತಿಯನ್ನು ಮಾರಾಟ ಮಾಡಿ ಸುಮಾರು ₹2.5 ಕೋಟಿ ಹೂಡಿಕೆ ಮಾಡಿದರೆ, ಅದಕ್ಕೆ ಪ್ರತಿಯಾಗಿ ₹10 ಕೋಟಿ ಹಣವನ್ನು ಹಿಂದಿರುಗಿಸುತ್ತೇನೆ” ಎಂದು ಭರವಸೆ ನೀಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಭರವಸೆಯನ್ನು ನಂಬಿದ ಕುಮುದಾ, ಬೆಂಗಳೂರಿನ ಚಾಮರಾಜಪೇಟೆಯಲ್ಲಿದ್ದ ತಮ್ಮ ಅಮೂಲ್ಯ ಆಸ್ತಿಯನ್ನು ಸುಮಾರು ₹8.5 ಕೋಟಿಗೆ ಮಾರಾಟ ಮಾಡಿದ್ದಾರೆ. ಆ ಬಳಿಕ ಕಂತು-ಕಂತುಗಳಲ್ಲಿ ಸುಮಾರು ₹2 ಕೋಟಿ ನಗದು ಹಾಗೂ ₹50 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಆರೋಪಿಗಳಿಗೆ ಹಸ್ತಾಂತರಿಸಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಹಣ ಹಾಗೂ ಚಿನ್ನ ಪಡೆದ ಬಳಿಕ ಆರೋಪಿಗಳ ವರ್ತನೆ ಸಂಪೂರ್ಣ ಬದಲಾಗಿದ್ದು, ಸಂತ್ರಸ್ತೆಗೆ ಹಣ ಹಿಂದಿರುಗಿಸುವ ಬದಲು ವಿವಿಧ ರೀತಿಯ ಬೆದರಿಕೆ ಹಾಕಲು ಆರಂಭಿಸಿದ್ದಾರೆ ಎನ್ನಲಾಗಿದೆ. ಹಲವು ಬಾರಿ ಹಣ ವಾಪಸ್ ಕೇಳಿದರೂ ಆರೋಪಿಗಳು ತಪ್ಪಿಸಿಕೊಳ್ಳುತ್ತಿದ್ದು, ಸಂಪರ್ಕಕ್ಕೆ ಸಿಗದ ಹಿನ್ನೆಲೆ ಕುಮುದಾ ಅವರು ಕೊನೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ದೂರು ನೀಡಿದ್ದಾರೆ.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಲು ವಿಶೇಷ ತಂಡಗಳು ಶೋಧ ಕಾರ್ಯ ನಡೆಸುತ್ತಿವೆ.
