ನಮ್ಮ ಮೆಟ್ರೋ ಪಿಂಕ್ ಲೈನ್‌‌ನಲ್ಲಿ ಚಾಲಕರಹಿತ ರೈಲು ಅನಾವರಣ: ಸಂಚಾರ ಆರಂಭ ಯಾವಾಗ?

Untitled design 2025 12 11T210625.804

ಬೆಂಗಳೂರು: ನಮ್ಮ ಮೆಟ್ರೋದ ಬಹು ನಿರೀಕ್ಷಿತ ಗುಲಾಬಿ ಮಾರ್ಗಕ್ಕೆ ಮಹತ್ವದ ಮೈಲಿಗಲ್ಲು ಸೃಷ್ಟಿಯಾಗಿದೆ. ಡಿಸೆಂಬರ್ 11ರಂದು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಮತ್ತು ಬಿಇಎಂಎಲ್ (BEML) ಸಂಯುಕ್ತವಾಗಿ ಗುಲಾಬಿ ಮಾರ್ಗದ ಮೊದಲ ಪ್ರೋಟೋಟೈಪ್ ಚಾಲಕರಹಿತ ಮೆಟ್ರೋ ರೈಲನ್ನು ಅನಾವರಣಗೊಳಿಸಿದೆ. ಈ ಆಧುನಿಕ ಆರು ಬೋಗಿ ರೈಲು ಇದಾಗಿದೆ.

BEMLನ ಬೆಂಗಳೂರು ರೈಲು ಸಂಕೀರ್ಣದಲ್ಲಿ ನಡೆದ ಕಾರ್ಯಕ್ರಮದಲ್ಲಿ BMRCL ವ್ಯವಸ್ಥಾಪಕ ನಿರ್ದೇಶಕ ಜೆ ರವಿಶಂಕರ್ ಅವರು ರೈಲನ್ನು ಔಪಚಾರಿಕವಾಗಿ ಬಿಡುಗಡೆಗೊಳಿಸಿದರು. BEML ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಾಂತನು ರಾಯ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಅನಾವರಣದ ನಂತರ ರೈಲಿನ ಯಶಸ್ವಿ ಪರೀಕ್ಷಾ ಸಂಚಾರವನ್ನೂ ನಡೆಸಲಾಯಿತು. ಈ ರೈಲು ಡಿಸೆಂಬರ್ 15ರ ನಂತರ ಕೊತ್ತನೂರು ಡಿಪೋಗೆ ಸ್ಥಳಾಂತರಗೊಂಡು ವ್ಯಾಪಕ ಪರೀಕ್ಷೆಗಳಿಗೆ ಒಳಗಾಗಲಿದೆ.

ಗುಲಾಬಿ ಮಾರ್ಗವು ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಸುಮಾರು 21.25 ಕಿಲೋಮೀಟರ್ ಉದ್ದವಿದೆ. ಈ ಮಾರ್ಗವು ದಕ್ಷಿಣ ಬೆಂಗಳೂರಿನ ಬ್ಯಾನರ್‌ಘಟ್ಟ ರಸ್ತೆಯಿಂದ ಉತ್ತರದ ನಾಗವಾರದವರೆಗೆ ಸಂಪರ್ಕ ಕಲ್ಪಿಸಲಿದೆ. ಮಾರ್ಗದಲ್ಲಿ ಒಟ್ಟು 18 ನಿಲ್ದಾಣಗಳಿರಲಿವೆ. ಎತ್ತರಿಸಿದ ಭಾಗದಲ್ಲಿ 6 ಮತ್ತು ಭೂಗತದಲ್ಲಿ 12. ಈ ಮಾರ್ಗವು ಎಂಜಿ ರೋಡ್, ಶಿವಾಜಿನಗರ, ಕ್ಯಾಂಟನ್‌ಮೆಂಟ್ ನಂತಹ ಪ್ರಮುಖ ಸ್ಥಳಗಳನ್ನು ಸಂಪರ್ಕಿಸಲಿದೆ.

ಸಂಚಾರ ಆರಂಭದ ಸಮಯ

ಗುಲಾಬಿ ಮಾರ್ಗವು ಹಂತ ಹಂತವಾಗಿ ತೆರೆಯಲಿದೆ. ಮೊದಲ ಹಂತದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿಲೋಮೀಟರ್ ಎತ್ತರಿಸಿದ ಭಾಗವು 2026ರ ಮೇ ಅಥವಾ ಜೂನ್‌ನಲ್ಲಿ ಪ್ರಯಾಣಿಕರು ಸಂಚರಿಸುವ ನಿರೀಕ್ಷೆ ಇದೆ. ಈ ಭಾಗದಲ್ಲಿ ಐದು ಚಾಲಕರಹಿತ ರೈಲುಗಳು ಸೇವೆ ನೀಡಲಿವೆ. ಪೂರ್ಣ ಮಾರ್ಗವು 2026ರ ಅಂತ್ಯಕ್ಕೆ (ಡಿಸೆಂಬರ್) ಕಾರ್ಯಾರಂಭ ಮಾಡಲಿದೆ. ಆರಂಭದಲ್ಲಿ ಸೆಮಿ-ಆಟೋಮ್ಯಾಟಿಕ್ ಮೋಡ್‌ನಲ್ಲಿ (ಚಾಲಕರ ಸಹಾಯದೊಂದಿಗೆ) ಓಡಲಿದ್ದು, ಸಂಪೂರ್ಣ ಚಾಲಕರಹಿತ ಕಾರ್ಯಾಚರಣೆ ನಂತರ ಜಾರಿಗೆ ಬರಲಿದೆ.

ಈ ಪ್ರೋಟೋಟೈಪ್ ರೈಲು ಮೂಲತಃ 2025ರ ಜೂನ್‌ನಲ್ಲಿ ತಲುಪಬೇಕಿತ್ತು. ಆದರೆ ಉಪಕರಣಗಳ ಕೊರತೆ ಮತ್ತು ಟೈಪ್ ಟೆಸ್ಟ್‌ಗಳ ವಿಳಂಬದಿಂದಾಗಿ ತಡವಾಯಿತು. ಇದೀಗ ರೈಲು ಸಿದ್ಧವಾಗಿರುವುದರಿಂದ ಪರೀಕ್ಷೆಗಳು ಮತ್ತು ಅನುಮತಿಗಳು ವೇಗಗೊಳ್ಳಲಿವೆ.

ಚಾಲಕರಹಿತ ರೈಲಿನ ವಿಶೇಷತೆಗಳು ಏನು?

ಈ ಹೊಸ ತಲೆಮಾರಿನ ರೈಲುಗಳು (5RS-DM ಮಾದರಿ) ಪ್ರಯಾಣಿಕರ ಸೌಕರ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟು ವಿನ್ಯಾಸಗೊಳಿಸಲಾಗಿದೆ.

BEML ಸುಮಾರು 3,177 ಕೋಟಿ ರೂ. ಒಪ್ಪಂದದಡಿ 318 ಸ್ಟ್ಯಾಂಡರ್ಡ್ ಗೇಜ್ ಮೆಟ್ರೋ ಬೋಗಿಗಳನ್ನು ಪೂರೈಸಲಿದ್ದು, ಇದು ಗುಲಾಬಿ ಮಾರ್ಗ ಮತ್ತು ನೀಲಿ ಮಾರ್ಗ (ವಿಮಾನ ನಿಲ್ದಾಣ ಮಾರ್ಗ) ಎರಡಕ್ಕೂ ಅನ್ವಯವಾಗಲಿದೆ. ಕಾರ್ಯಾರಂಭದ ನಂತರ 15 ವರ್ಷಗಳವರೆಗೆ BEMLಯೇ ರೈಲುಗಳ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದೆ.

Exit mobile version