ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ನಗರವನ್ನು ಬೆಚ್ಚಿ ಬೀಳಿಸುವಂತಹ ಘಟನೆ ಬೆಳಕಿಗೆ ಬಂದಿದೆ. ವೈದ್ಯನೊಬ್ಬ ತನ್ನ ಪತ್ನಿಯನ್ನೇ ವಿಷಕಾರಿ ಇಂಜೆಕ್ಷನ್ ನೀಡಿ ಹತ್ಯೆಗೈದಿರುವ ಘಟನೆ ಬೆಳಕಿಗೆ ಬಂದಿದೆ. ಮೃತ ದುರ್ದೈವಿ ಪತ್ನಿ ಡಾ. ಕೃತಿಕಾ ರೆಡ್ಡಿ. ಈ ಪ್ರಕರಣದಲ್ಲಿ ಆರೋಪಿಯಾಗಿರುವವರು ಡಾ. ಮಹೇಂದ್ರ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಕೊಲೆ ಆದ 6 ತಿಂಗಳ ಕಾಲ ರಹಸ್ಯವಾಗಿದ್ದು, ಅಂತಿಮವಾಗಿ ಪೊಲೀಸರು ಮತ್ತು ಫೋರೆನ್ಸಿಕ್ ವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ತನಿಖೆಯ ನಂತರ ಸತ್ಯ ಬೆಳಕಿಗೆ ಬಂದಿದೆ.
ಹಿನ್ನೆಲೆ
2024ರ ಮೇ 20ರಂದು ಡಾ. ಮಹೇಂದ್ರ ಮತ್ತು ಡಾ. ಕೃತಿಕಾ ರೆಡ್ಡಿಯವರ ಮದುವೆ ನಡೆದಿತ್ತು. ಮದುವೆಯಾದ ಬಳಿಕ ಸುಮಾರು 11 ತಿಂಗಳವರೆಗೆ ಇಬ್ಬರೂ ಬೆಂಗಳೂರಿನ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಕೃತಿಕಾ ಆರೋಗ್ಯದ ಕೆಲವು ಸಮಸ್ಯೆಗಳಿಂದ ಬಳಲುತ್ತಿದ್ದರು. ಅಜೀರ್ಣ, ಗ್ಯಾಸ್ಟ್ರಿಕ್ ಸೇರಿದಂತೆ ಕೆಲವು ಸಣ್ಣಸಣ್ಣ ತೊಂದರೆಗಳಿದ್ದವು. ಈ ವಿಷಯವನ್ನು ಪತಿ ಮಹೇಂದ್ರ ಬಳಸಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಒಂದು ದಿನ ಕೃತಿಕಾ ಅಸ್ವಸ್ಥರಾಗಿದ್ದ ವೇಳೆ, ಮಹೇಂದ್ರ ಅವರು ‘ಔಷಧಿ’ ಎಂಬ ನೆಪದಲ್ಲಿ ಇಂಜೆಕ್ಷನ್ ನೀಡಿದರೆಂದು ಹೇಳಲಾಗುತ್ತಿದೆ. ಇಂಜೆಕ್ಷನ್ ನೀಡಿದ ಕೆಲವೇ ಕ್ಷಣಗಳಲ್ಲಿ ಕೃತಿಕಾ ಉಸಿರಾಟ ನಿಲ್ಲಿಸಿ ಸಾವನ್ನಪ್ಪಿದ್ದರು. ತಕ್ಷಣ ಮಹೇಂದ್ರ ಅವರು “ಪತ್ನಿ ನೈಸರ್ಗಿಕವಾಗಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ” ಎಂದು ಕುಟುಂಬದವರಿಗೆ ಹಾಗೂ ಪೊಲೀಸರನ್ನು ನಂಬಿಸಿದರು.
ಎಫ್‌ಎಸ್‌ಎಲ್ ವರದಿಯಿಂದ ಸತ್ಯ ಬಯಲು
ಆದರೆ ಸಾವಿನ ನಂತರದ ಕೆಲ ದಿನಗಳಲ್ಲಿ ಕೃತಿಕಾ ಪೋಷಕರಿಗೆ ಅನುಮಾನ ಹುಟ್ಟಿತ್ತು. ಅವರ ದೇಹದಲ್ಲಿ ಕೆಲವು ಅಸಾಮಾನ್ಯ ಗುರುತುಗಳು ಕಂಡುಬಂದವು. ಹೀಗಾಗಿ ಆಕೆಯ ಕುಟುಂನದವರು ಅವರು ದೂರು ದಾಖಲಿಸಿದರು. ತನಿಖೆಯ ಭಾಗವಾಗಿ ಕೃತಿಕಾ ದೇಹದ ಮಾದರಿಗಳನ್ನು ಎಫ್‌ಎಸ್‌ಎಲ್ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು.
ಕೆಲ ತಿಂಗಳ ಬಳಿಕ ಬಂದ ವರದಿಯಲ್ಲಿ ಶಾಕ್ ನೀಡುವ ಮಾಹಿತಿ ಹೊರಬಿತ್ತು. ಕೃತಿಕಾ ದೇಹದಲ್ಲಿ ವಿಷಕಾರಿ ಔಷಧೀಯ ದ್ರವ್ಯ ಪತ್ತೆಯಾಗಿದೆ. ಅದನ್ನು ವೈದ್ಯಕೀಯವಾಗಿ ಮಾತ್ರ ಪರಿಪೂರ್ಣ ಅರಿವು ಹೊಂದಿರುವ ವ್ಯಕ್ತಿಯೊಬ್ಬನೇ ಬಳಸುವ ಸಾಧ್ಯತೆ ಇದೆ ಎಂದು ಎಫ್‌ಎಸ್‌ಎಲ್ ಅಧಿಕಾರಿಗಳು ಸ್ಪಷ್ಟಪಡಿಸಿದರು.
ಈ ವರದಿಯ ಆಧಾರದ ಮೇಲೆ ಪೊಲೀಸರು ಡಾ. ಮಹೇಂದ್ರ ರೆಡ್ಡಿಯನ್ನು ಬಂಧಿಸಿದ್ದಾರೆ. ವಿಚಾರಣೆಯಲ್ಲಿ ಅವರು ಮೊದಲಿಗೆ ಎಲ್ಲ ಆರೋಪಗಳನ್ನು ತಳ್ಳಿಹಾಕಿದರೂ, ನಂತರದ ತನಿಖೆಯಲ್ಲಿ ಸಾಕ್ಷ್ಯಾಧಾರಗಳ ಒತ್ತಡಕ್ಕೆ ಮಣಿದು ಕೊನೆಗೆ ಸತ್ಯ ಒಪ್ಪಿಕೊಂಡಿದ್ದಾನೆ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಕೃತಿಕಾ ಮತ್ತು ಮಹೇಂದ್ರ ನಡುವೆ ಕಳೆದ ಕೆಲವು ತಿಂಗಳಿನಿಂದ ವೈಯಕ್ತಿಕ ಕಲಹ ನಡೆಯುತ್ತಿತ್ತು. ಹಣಕಾಸು ವಿಷಯ, ಕುಟುಂಬದ ಒಳಜಗಳಗಳಿಂದಾಗಿ ಮನೆಯಲ್ಲಿ ನಿರಂತರವಾಗಿ ಜಗಳ ನಡೆಯುತ್ತಿತ್ತು. ಈ ಹಿನ್ನೆಲೆ ಪತ್ನಿಯ ಸಾವಿಗೆ ಪತಿ ಸ್ಕೆಚ್ ಹಾಕಿದ್ದಾನೆಂದು ಪೊಲೀಸರು ಶಂಕಿಸಿದ್ದಾರೆ. ಎಫ್‌ಎಸ್‌ಎಲ್ ವರದಿ ನಂತರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ, ಡಾ. ಮಹೇಂದ್ರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.