ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇದ್ದೇ ಇರುತ್ತಾರೆ. ಎಷ್ಟೇ ಜಾಣ್ಮೆ ವಹಿಸಿದರೂ ನಮಗೇ ತಿಳಿಯದೇ ಮೋಸದ ಜಾಲದಲ್ಲಿ ಸಿಲುಕುತ್ತೇವೆ. ಇಂತದ್ದೇ ಒಂದು ಮೋಸದ ಜಾಲವು ಈಗ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಜಾಲವು ವಿಶೇಷವಾಗಿ ಗಂಡಸರನ್ನೇ ಟಾರ್ಗೆಟ್ ಮಾಡಿ ಬಲೆ ಬೀಳಿಸಿಕೊಳ್ಳುತ್ತಾರೆ.
ಸುಂದರ ಕಾಲೇಜು ಹುಡುಗಿಯರನ್ನು ಬಳಸಿಕೊಂಡು ಕೆಲವು ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳು, ಪುರುಷರನ್ನು ಬಲೆಗೆ ಬೀಳಿಸಿ, ದೊಡ್ಡ ಮೊತ್ತದ ಬಿಲ್‌ಗಳನ್ನು ಮಾಡಿ ವಂಚಿಸುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.
ಈ ಮೋಸದ ಜಾಲದಲ್ಲಿ, ಯುವತಿಯರು ಡೇಟಿಂಗ್ ಆ್ಯಪ್‌ಗಳಲ್ಲಿ ಆಕರ್ಷಕ ಪ್ರೊಫೈಲ್‌ಗಳನ್ನು ರಚಿಸಿ, ಪುರುಷರನ್ನು ಸಂಪರ್ಕಿಸುತ್ತಾರೆ. ಈ ಹುಡುಗಿಯರು ಡೇಟಿಂಗ್‌ಗೆ ಆಮಿಷವೊಡ್ಡಿ, ನಂತರ ಆ ವ್ಯಕ್ತಿಯನ್ನು ತಾವೇ ಆಯ್ಕೆ ಮಾಡಿದ ರೆಸ್ಟೋರೆಂಟ್ ಅಥವಾ ಬಾರ್‌ಗೆ ಕರೆದೊಯ್ಯುತ್ತಾರೆ. ರೆಸ್ಟೋರೆಂಟ್‌ಗೆ ಬಂದರೆ, ಸಾಮಾನ್ಯವಾಗಿ ಯುವತಿಯರು ದುಬಾರಿ ಆರ್ಡರ್‌ಗಳನ್ನು ಮಾಡುತ್ತಾರೆ, ಇದರಿಂದ ಬಿಲ್‌ನ ಮೊತ್ತ ಕನಿಷ್ಠ 50,000 ರೂಪಾಯಿಗಳಿಗಿಂತ ಹೆಚ್ಚಿರುತ್ತದೆ.
ಈ ಯುವತಿಯರಿಗೆ ಬಿಲ್‌ನ ಶೇಕಡಾ 20ರಷ್ಟು ಕಮಿಷನ್ ರೂಪದಲ್ಲಿ ಪಾವತಿಯಾಗುತ್ತದೆ. ಉದಾಹರಣೆಗೆ, 50,000 ರೂಪಾಯಿ ಬಿಲ್ ಮಾಡಿದರೆ, ಯುವತಿಗೆ 20,000 ರೂಪಾಯಿ ಸಿಗುತ್ತದೆ. ಈ ರೀತಿಯ ಆಕರ್ಷಕ ಆದಾಯದ ಆಮಿಷಕ್ಕೆ ಒಳಗಾಗಿ, ಕೆಲವು ಕಾಲೇಜು ಯುವತಿಯರು ಈ ಕೆಲಸಕ್ಕೆ ಸೇರುತ್ತಿದ್ದಾರೆ. ಈ ವಂಚನೆಯಲ್ಲಿ ಬಲಿಯಾಗುವವರಲ್ಲಿ ವಿವಾಹಿತ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವಿವಾಹಿತ ಪುರುಷರು ಮೋಸ ಹೋದ ಬಳಿಕ ಮರ್ಯಾದೆ ಅಂಜಿ ದೂರು ದಾಖಲಿಸಲು ಹಿಂದೇಟು ಹಾಕುತ್ತಾರೆ.
ಈ ರೆಸ್ಟೋರೆಂಟ್‌ಗಳು ಯುವತಿಯರನ್ನು ಗುರಿಯಾಗಿಸಿಕೊಂಡು ದೊಡ್ಡ ಆದಾಯದ ಆಮಿಷವನ್ನು ಒಡ್ಡುತ್ತವೆ. ಯುವತಿಯರಿಗೆ ಯಾವುದೇ ದೊಡ್ಡ ಕೆಲಸ ಮಾಡುವ ಅಗತ್ಯವಿಲ್ಲ. ಕೇವಲ ಡೇಟಿಂಗ್ ಆ್ಯಪ್‌ಗಳ ಮೂಲಕ ಶ್ರೀಮಂತ ಹುಡುಗರನ್ನು ಆಯ್ಕೆ ಮಾಡಿ, ರೆಸ್ಟೋರೆಂಟ್‌ಗೆ ಕರೆತರುವುದು ಅವರ ಕೆಲಸ. ಈ ರೀತಿಯ ಮೋಸದಿಂದಾಗಿ, ಗ್ರಾಹಕರು ದೊಡ್ಡ ಮೊತ್ತದ ಬಿಲ್‌ಗಳನ್ನು ಭರಿಸಬೇಕಾಗುತ್ತದೆ. ಆದರೆ ಯಾವುದೇ ಕಾನೂನು ಕ್ರಮಕ್ಕೆ ಮುಂದಾಗದಿರುವುದು ಈ ಜಾಲಕ್ಕೆ ಇನ್ನಷ್ಟು ಬಲ ತಂದಿದೆ.