ಬೆಂಗಳೂರಿನಲ್ಲಿ ಮಳೆ ಬಂದ್ರೆ ಹುಷಾರ್ ಹುಷಾರ್..!

ನಗರದಲ್ಲಿ 49 ಅಪಾಯಕಾರಿ ಸ್ಪಾಟ್‌ಗಳು – ಗಾಳಿ ಆಂಜನೇಯ ದೇವಾಲಯ ಡೇಂಜರ್ ಲಿಸ್ಟ್‌ನಲ್ಲಿ

1235

ಬೆಂಗಳೂರು: ರಣ ಮಳೆ ಸುರಿದ ತಕ್ಷಣ ನಗರದ ಅನೇಕ ಪ್ರದೇಶಗಳು ನೀರಿನಲ್ಲಿ ಮುಳುಗುವುದು ಸಾಮಾನ್ಯವಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ ಬಿಬಿಎಂಪಿ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ನಗರದಲ್ಲಿ ಒಟ್ಟು 49 ಅಪಾಯಕಾರಿ ಸ್ಪಾಟ್‌ಗಳು ಗುರುತಿಸಲಾಗಿದೆ. ಇವುಗಳಲ್ಲಿ ಅತ್ಯಂತ ಸೂಕ್ಷ್ಮ ಸ್ಥಳ– ಗಾಳಿ ಆಂಜನೇಯ ದೇವಾಲಯ.

ಪ್ರತಿ ವರ್ಷ ಮಳೆ ಬಂದಾಗ ಗಾಳಿ ಆಂಜನೇಯ ದೇವಾಲಯದ ಸುತ್ತಮುತ್ತಲಿನ ಪ್ರದೇಶ ಹೆಚ್ಚಾಗಿ ನೀರಿನಲ್ಲಿ ಮುಳುಗಿ ಹೋಗುತ್ತದೆ. ರಾಜಕಾಲುವೆಯ ನೀರು ಹೊರಹರಿಯದೇ ದೇವಾಲಯದ ಗರ್ಭಗುಡಿಯೊಳಗೆಯೇ ನುಗ್ಗುವ ಸಮಸ್ಯೆ ಪದೇ ಪದೇ ಮರುಕಳಿಸುತ್ತಿದೆ. ಭಕ್ತರು ಮತ್ತು ಸ್ಥಳೀಯರು ಪ್ರತಿ ವರ್ಷವೂ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಗಾಳಿ ಆಂಜನೇಯ ದೇವಾಲಯದ ದುರವಸ್ಥೆ

ದೇವಾಲಯದ ಸುತ್ತ ರಸ್ತೆಯ ಮಟ್ಟಕ್ಕಿಂತ ಕೆಳಗಿರುವುದರಿಂದ ಮಳೆ ನೀರು ಸುಲಭವಾಗಿ ಒಳನುಗ್ಗುತ್ತದೆ. ಗರ್ಭಗುಡಿಯಲ್ಲಿ ನೀರು ನಿಂತು ದೇವರ ಮೂರ್ತಿಗೆಯೂ ಹಾನಿಯಾಗುವ ಸಾಧ್ಯತೆ ಇದೆ. ಇದರಿಂದ ಭಕ್ತಾಧಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿ ವರ್ಷ ಇದೇ ಸಮಸ್ಯೆ. ಮಳೆ ಬಂದರೆ ದೇವರ ಮುಂದೆಯೇ ನೀರು ನಿಲ್ಲುತ್ತದೆ. ಇದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಶಾಶ್ವತ ಪರಿಹಾರಕ್ಕಾಗಿ ಬಿಬಿಎಂಪಿ ಮತ್ತು ಸರ್ಕಾರದ ಮೇಲೆ ಭಕ್ತಾಧಿಗಳು ಒತ್ತಾಯ ಹೇರಿದ್ದಾರೆ.

ಬಿಬಿಎಂಪಿ ಅಧಿಕಾರಿಗಳ ಪ್ರಕಾರ, ಗಾಳಿ ಆಂಜನೇಯ ದೇವಾಲಯ ಸೇರಿದಂತೆ ಹಲವು ಡೇಂಜರ್ ಸ್ಪಾಟ್‌ಗಳಲ್ಲಿ ಸ್ಟಾರ್ಮ್ ವಾಟರ್ ಡ್ರೈನ್‌ಗಳನ್ನು ವಿಸ್ತರಿಸುವ ಮತ್ತು ಡ್ರೈನೇಜ್ ವ್ಯವಸ್ಥೆಯನ್ನು ಸುಧಾರಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಸ್ಥಳೀಯರು ಇದನ್ನು ಕೇವಲ ಮಾತುಗಳೆಂದು ಹೇಳುತ್ತಿದ್ದಾರೆ.

ಹಲವು ವರ್ಷಗಳಿಂದಲೂ ಇದೇ ಸಮಸ್ಯೆ ಇದೆ. ಪ್ರತಿ ಬಾರಿ ಮಳೆ ಬಂದಾಗ ಅಧಿಕಾರಿಗಳು ಭೇಟಿ ನೀಡಿ ಹೋಗುತ್ತಾರೆ. ಆದರೆ ಶಾಶ್ವತ ಪರಿಹಾರ ಸಿಗುತ್ತಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಕ್ತಾಧಿಗಳು ಮತ್ತು ಸ್ಥಳೀಯರು ದೇವಾಲಯದ ಸುತ್ತ ಡ್ರೈನೇಜ್ ವ್ಯವಸ್ಥೆಯನ್ನು ಪೂರ್ಣವಾಗಿ ನವೀಕರಿಸುವುದು, ರಸ್ತೆಯ ಮಟ್ಟವನ್ನು ಸರಿಪಡಿಸುವುದು ಮತ್ತು ಪಂಪಿಂಗ್ ವ್ಯವಸ್ಥೆ ಅಳವಡಿಸುವುದು ಸೇರಿದಂತೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸುತ್ತಿದ್ದಾರೆ.

ಮಳೆಗಾಲ ಪ್ರಾರಂಭವಾಗುತ್ತಿರುವುದರಿಂದ ನಗರದ 49 ಡೇಂಜರ್ ಸ್ಪಾಟ್‌ಗಳಲ್ಲಿ ವಾಹನ ಸವಾರರು ಮತ್ತು ನಿವಾಸಿಗಳು ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.

Exit mobile version