ಬೆಂಗಳೂರು, ಡಿಸೆಂಬರ್ 16: ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದ ಹಲವು ಭಾಗಗಳಲ್ಲಿ ಮೈಕೊರೆಯುವ ಚಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭಾರತೀಯ ಹವಾಮಾನ ಇಲಾಖೆ (IMD)ಯ ಮಾಹಿತಿ ಪ್ರಕಾರ, ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ 13 ರಿಂದ 15 ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಕೆಯಾಗಿದ್ದು, ಉತ್ತರ ಒಳನಾಡು ಜಿಲ್ಲೆಗಳಲ್ಲಿ ಇನ್ನಷ್ಟು ತೀವ್ರವಾಗಿದೆ. ಶೀತ ಗಾಳಿಯ ಪ್ರಭಾವದಿಂದ ಜನಜೀವನ ಸಾಮಾನ್ಯವಾಗಿ ಬದಲಾಗಿದ್ದು, ಬೆಳಗ್ಗೆ ಮಂಜು ಮುಸುಕಿದ ವಾತಾವರಣ ಹಾಗೂ ರಾತ್ರಿ ತೀಕ್ಷ್ಣ ಚಳಿ ಜನರನ್ನು ಕಾಡುತ್ತಿದೆ. ಮುಂದಿನ ಎರಡು ದಿನಗಳ ಕಾಲ ಇದೇ ರೀತಿಯ ವಾತಾವರಣ ಮುಂದುವರಿಯುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ಶೀತಗಾಳಿ ಎಚ್ಚರಿಕೆ ನೀಡಿದೆ.
ಬೆಂಗಳೂರಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಚಳಿಯ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಎಚ್‌ಎಎಲ್ ವಿಮಾನ ನಿಲ್ದಾಣ ಪ್ರದೇಶದಲ್ಲಿ ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದರೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 14 ಡಿಗ್ರಿ ದಾಖಲಾಗಿದೆ. ನಗರದ ಕೆಲವು ಭಾಗಗಳಲ್ಲಿ ಇದು 12 ಡಿಗ್ರಿಗೂ ಕಡಿಮೆಯಾಗುವ ನಿರೀಕ್ಷೆಯಿದೆ. ಇದರಿಂದ ಬೆಳಗ್ಗೆ ವಾಕಿಂಗ್‌ಗೆ ಹೋಗುವವರ ಸಂಖ್ಯೆ ಶೇ.50ಕ್ಕೂ ಹೆಚ್ಚು ಇಳಿಕೆಯಾಗಿದೆ. ಲಾಲ್‌ಬಾಗ್, ಕಬ್ಬನ್ ಪಾರ್ಕ್‌ನಂತಹ ಉದ್ಯಾನವನಗಳಲ್ಲಿ ವಾಕಿಂಗ್ ಮಾಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಮಕ್ಕಳು ಸ್ವೆಟರ್, ಜಾಕೆಟ್, ಕ್ಯಾಪ್ ಮತ್ತು ಮಫ್ಲರ್ ಧರಿಸಿ ಶಾಲೆಗಳಿಗೆ ತೆರಳುತ್ತಿದ್ದಾರೆ. ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರ ವಹಿಸುತ್ತಿದ್ದಾರೆ.
ಚಳಿಯ ಹಿನ್ನೆಲೆಯಲ್ಲಿ ವೈದ್ಯರು ಮತ್ತು ಹವಾಮಾನ ಇಲಾಖೆ ಸಾರ್ವಜನಿಕರಿಗೆ ವಿಶೇಷ ಸಲಹೆ ನೀಡಿದ್ದಾರೆ. ಮಕ್ಕಳು ಹಾಗೂ ವೃದ್ಧರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ಬೆಚ್ಚನೆಯ ಉಡುಪುಗಳನ್ನು ಧರಿಸಿ, ಬಿಸಿ ಆಹಾರ ಮತ್ತು ಪಾನೀಯಗಳನ್ನು ಸೇವಿಸಿ ಎಂದು ತಿಳಿಸಿದ್ದಾರೆ. ಬೆಳಗ್ಗೆಯ ವ್ಯಾಯಾಮ ಅಥವಾ ವಾಕಿಂಗ್ ಅನ್ನು ತಾತ್ಕಾಲಿಕವಾಗಿ ತಪ್ಪಿಸಿ, ಸಮತೋಲನ ಆಹಾರದೊಂದಿಗೆ ದೇಹವನ್ನು ಬೆಚ್ಚಗಿರಿಸಿಕೊಳ್ಳಿ ಎಂಬುದು ವೈದ್ಯಕೀಯ ತಜ್ಞರ ಸೂಚನೆ ಆಗಿದೆ. ಚಳಿಯಿಂದ ಉಂಟಾಗುವ ಕೆಮ್ಮು, ಉಸಿರಾಟದ ಸಮಸ್ಯೆಗಳು ಹೆಚ್ಚಾದಲ್ಲಿ ತಕ್ಷಣ ವೈದ್ಯಕೀಯ ಸಹಾಯ ಪಡೆಯಿರಿ ಎಂದು ಎಚ್ಚರಿಕೆ ನೀಡಲಾಗಿದೆ.
ಉತ್ತರ ಒಳನಾಡು ಕರ್ನಾಟಕದ ಜಿಲ್ಲೆಗಳಾದ ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಚಳಿಯ ತೀವ್ರತೆ ಇನ್ನಷ್ಟು ಹೆಚ್ಚಿದೆ. ಇಲ್ಲಿ ಕನಿಷ್ಠ ತಾಪಮಾನ 5 ರಿಂದ 10 ಡಿಗ್ರಿ ಸೆಲ್ಸಿಯಸ್‌ವರೆಗೆ ಇಳಿದಿದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಒಣ ಹವೆ ಮುಂದುವರಿದಿದ್ದು, ಚಳಿ ಸಾಮಾನ್ಯಕ್ಕಿಂತ ಹೆಚ್ಚು ಅನುಭವಕ್ಕೆ ಬರುತ್ತಿದೆ.
ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ಮಂಡ್ಯ, ರಾಮನಗರ, ಮೈಸೂರು, ಚಾಮರಾಜನಗರದಲ್ಲಿಯೂ ಒಣ ಹವೆಯೊಂದಿಗೆ ಚಳಿಯ ಪ್ರಮಾಣ ಹೆಚ್ಚಾಗಿದೆ.
ಹವಾಮಾನ ತಜ್ಞರು ತಿಳಿಸುವಂತೆ, ಉತ್ತರ ಭಾರತದಿಂದ ಬೀಸುತ್ತಿರುವ ಶೀತ ಗಾಳಿ ಪರಿಣಾಮದಿಂದ ಈ ಚಳಿ ಹೆಚ್ಚಾಗಿದೆ. ಡಿಸೆಂಬರ್ 17ರ ನಂತರ ಚಳಿಯ ಪ್ರಮಾಣ ಸ್ವಲ್ಪ ಕಡಿಮೆಯಾಗುವ ನಿರೀಕ್ಷೆಯಿದ್ದು, ಆದರೆ ಜನವರಿಯಲ್ಲಿ ಮತ್ತೆ ತೀವ್ರಗೊಳ್ಳುವ ಸಾಧ್ಯತೆಯಿದೆ.
