ಬೆಂಗಳೂರಿನಲ್ಲಿ ಹಾಡಹಗಲೇ ಉದ್ಯಮಿ ಭೀಕರ ಹತ್ಯೆ: ಪತ್ನಿ ಎದುರೇ ಕೊಚ್ಚಿ ಕೊಂದ ದುಷ್ಕರ್ಮಿಗಳು

Untitled Design 2026 11 13T133610.389

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಪತ್ನಿಯ ಕಣ್ಣೆದುರೇ ದುಷ್ಕರ್ಮಿಗಳ ಗ್ಯಾಂಗ್ ಉದ್ಯಮಿಯ ಮೇಲೆ ದಾಳಿ ನಡೆಸಿ ಕೊಲೆ ಮಾಡಿ ಎಸ್ಕೇಪ್‌ ಆಗಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಪತಿಯನ್ನು ಉಳಿಸಿಕೊಳ್ಳಲು ಪತ್ನಿ ಸ್ಥಳದಲ್ಲಿದ್ದವರ ಬಳಿ ಆಸ್ಪತ್ರೆಗೆ ಕರೆದೊಯ್ಯುವಂತೆ ಅಂಗಲಾಚಿದರೂ ಪ್ರಯೋಜನವಾಗಿಲ್ಲ. ತೀವ್ರವಾಗಿ ಗಾಯಗೊಂಡಿದ್ದ ಉದ್ಯಮಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಮೃತರನ್ನು 39 ವರ್ಷದ ಚರಣ್ ಗೌಡ ಎಂದು ಗುರುತಿಸಲಾಗಿದೆ. ಇವರು ಧಣಿ ಪ್ರಾಪರ್ಟೀಸ್ ಸಂಸ್ಥೆಯ ಮಾಲೀಕರಾಗಿದ್ದು, ಕಳೆದ ಹತ್ತು ವರ್ಷಗಳಿಂದ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಕಾಲೇಜು ಸಮೀಪ, ಬ್ಯಾಂಕ್ ಮುಂಭಾಗದಲ್ಲಿ ಈ ಭೀಕರ ಹತ್ಯೆ ನಡೆದಿದೆ.

ಕಚೇರಿಗೆ ಬರುತ್ತಿದ್ದ ಉದ್ಯಮಿ ಮೇಲೆ ದಾಳಿ

ಚರಣ್ ಗೌಡ ಅವರು ಯಲಹಂಕ ನ್ಯೂ ಟೌನ್‌ನಲ್ಲಿರುವ ತಮ್ಮ ಕಚೇರಿಗೆ ಪತ್ನಿಯೊಂದಿಗೆ ಆಗಮಿಸುತ್ತಿದ್ದರು. ಕೋಗಿಲು ನಿವಾಸದಿಂದ ಕಚೇರಿಗೆ ಬರುತ್ತಿದ್ದ ವೇಳೆ ದುಷ್ಕರ್ಮಿಗಳ ತಂಡ ಹೊಂಚು ಹಾಕಿ ದಾಳಿ ನಡೆಸಿದ್ದಾರೆ. ಬ್ಯಾಂಕ್‌ನ ಮೇಲ್ಮಹಡಿಯಲ್ಲಿ ಚರಣ್ ಗೌಡ ಅವರ ಕಚೇರಿ ಇತ್ತು ಎನ್ನಲಾಗಿದ್ದು, ಕಚೇರಿಗೆ ತೆರಳುವ ಮಾರ್ಗದಲ್ಲೇ ಹಂತಕರು ದಾಳಿ ನಡೆಸಿದ್ದಾರೆ.

ಐದರಿಂದ ಆರು ಮಂದಿ ಯುವಕರಿದ್ದ ಗ್ಯಾಂಗ್ ಮಾರಕಾಸ್ತ್ರಗಳನ್ನು ಹಿಡಿದು ಏಕಾಏಕಿ ಚರಣ್ ಮೇಲೆ ಹಲ್ಲೆ ಮಾಡಿದ್ದಾರೆ. ಸುಮಾರು 22 ವರ್ಷದ ಯುವಕರ ತಂಡ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಕೆಲವೇ ಸೆಕೆಂಡ್‌ಗಳಲ್ಲಿ ಚರಣ್ ಅವರ ತಲೆಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ. ಕೃತ್ಯ ಎಸಗಿದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಪತ್ನಿಯ ಕಣ್ಣೆದುರೇ ಬರ್ಬರ ಹತ್ಯೆ

ಚರಣ್ ಗೌಡ ಅವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸುತ್ತಿದ್ದುದನ್ನು ಕಂಡ ಪತ್ನಿ ಆಘಾತಕ್ಕೊಳಗಾಗಿದ್ದಾರೆ. ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತಿಯನ್ನು ಕಂಡು ದಿಕ್ಕು ತೋಚದಂತಾಗಿದ್ದಾರೆ. ಪತಿಯನ್ನು  ಉಳಿಸಿಕೊಳ್ಳಲು ಸ್ಥಳದಲ್ಲಿದ್ದವರ ಬಳಿ, ದಯವಿಟ್ಟು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡಿ ಎಂದು ಅಂಗಲಾಚಿದ್ದಾರೆ ಎನ್ನಲಾಗಿದೆ.

ಆದರೆ, ತೀವ್ರ ರಕ್ತಸ್ರಾವದಿಂದಾಗಿ ಚರಣ್ ಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ.. ಬಳಿಕ ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಭೂ ವ್ಯವಹಾರದ ವಿಚಾರಕ್ಕೆ ಕೊಲೆಯ ಶಂಕೆ

ಚರಣ್ ಗೌಡ ಕಳೆದ ಹತ್ತು ವರ್ಷಗಳಿಂದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವರೊಂದಿಗೆ ವಿವಾದ ಉಂಟಾಗಿತ್ತು. ಇದೇ ಹಳೆಯ ದ್ವೇಷದ ಹಿನ್ನೆಲೆ ಹತ್ಯೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಭೂಮಿ ವಿಚಾರವಾಗಿ ಉಂಟಾದ ಕಿರಿಕ್‌ನಿಂದಾಗಿ ಸುಪಾರಿ ನೀಡಿ ಕೊಲೆ ಮಾಡಿಸಿರುವ ಸಾಧ್ಯತೆಯ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪತ್ನಿ ಕಚೇರಿಯ ಕಡೆಗೆ ತೆರಳುವುದನ್ನೇ ಆರೋಪಿಗಳು ಕಾಯುತ್ತಿದ್ದರು ಎಂಬ ಅನುಮಾನವೂ ವ್ಯಕ್ತವಾಗಿದೆ. ಅವರು ಕಚೇರಿಯತ್ತ ಸಾಗುತ್ತಿದ್ದಂತೆ ಚರಣ್ ಮೇಲೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಆದರೆ, ಹತ್ಯೆಯ ಹಿಂದಿನ ನಿಖರ ಕಾರಣ ಮತ್ತು ಆರೋಪಿಗಳ ಉದ್ದೇಶ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ.

ಆರೋಪಿಗಳ ಪತ್ತೆಗೆ ಎರಡು ವಿಶೇಷ ತಂಡಗಳ ರಚನೆ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಯಲಹಂಕ ನ್ಯೂ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಪತ್ನಿಯಿಂದ ಹಂತಕರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಹತ್ಯೆ ನಡೆದ ಸ್ಥಳದಲ್ಲಿರುವ ಬ್ಯಾಂಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಆರೋಪಿಗಳು ಯಾವ ದಿಕ್ಕಿನಲ್ಲಿ ಪರಾರಿಯಾಗಿದ್ದಾರೆ, ಕೃತ್ಯದಲ್ಲಿ ಭಾಗಿಯಾಗಿದ್ದವರ ಗುರುತು ಏನು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ಎರಡು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿದುಬಂದಿದೆ.

 

Exit mobile version