ಬೆಂಗಳೂರು, ಆ. 15: 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಮಾಣೆಕ್ ಶಾ ಮೈದಾನದಲ್ಲಿ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಧ್ವಜಾರೋಹಣ ನೆರವೇರಿಸಿದ ಡಿ.ಕೆ. ಶಿವಕುಮಾರ್ (DK Shivakumar) ಅವರು, ಬೆಂಗಳೂರು ನಗರದ ಭವಿಷ್ಯವನ್ನು ಬದಲಾಯಿಸುವಂಥ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಬೆಂಗಳೂರಿಗೆ 5 ಪ್ರತ್ಯೇಕ ಪೊಲೀಸ್ ಕಮಿಷನರೇಟ್ಗಳನ್ನು ಸ್ಥಾಪಿಸುವುದು ಅವರ ಪ್ರಮುಖ ಘೋಷಣೆಯಾಗಿದೆ.
ಬೆಂಗಳೂರಿನ ವರ್ಧಿಸುತ್ತಿರುವ ಜನಸಂಖ್ಯೆ ಮತ್ತು ಅಪರಾಧ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಹಳೆಯ 10 ಲಕ್ಷ ಜನಸಂಖ್ಯೆಗೆ ಒಂದು ಕಮಿಷನರೇಟ್ ಎಂಬ ವ್ಯವಸ್ಥೆಯನ್ನು ವಿಂಗಡಿಸಿ, 5 ಪ್ರತ್ಯೇಕ ಕಮಿಷನರೇಟ್ಗಳನ್ನು ರಚಿಸಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದರು. “ಅಗತ್ಯವಿರುವ ಕಡೆ ಹೊಸ ಪೊಲೀಸ್ ಠಾಣೆಗಳನ್ನು ಸ್ಥಾಪಿಸಿ, ಕಾನೂನು ಸುವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಅವರು ವಿವರಿಸಿದರು.
ಬೆಂಗಳೂರಿನ ತಲೆನೋವಾಗಿರುವ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ, ಜಿಬಿಎ (GBB) ಮತ್ತು ಟ್ರಾಫಿಕ್ ಪೊಲೀಸ್ ಠಾಣೆಗಳ ವತಿಯಿಂದ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು. ಅಲ್ಲದೆ, ನಗರದ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿ, ಬೆಂಗಳೂರಿಗೆ ಪ್ರತ್ಯೇಕ ‘ರೌದಿ ನಿಗ್ರಹ ದಳ’ (Anti-Rowdy Squad) ವನ್ನು ರಚಿಸುವುದಾಗಿ ಘೋಷಿಸಿದರು. “ಯಾವುದೇ ಹೆಣ್ಣು ಮಗು ಭಯಮುಕ್ತವಾಗಿ ಸಂಚರಿಸುವಂತಹ ವಾತಾವರಣವನ್ನು ನಿರ್ಮಿಸುವುದು ನಮ್ಮ ಗುರಿ” ಎಂದು ಅವರು ಹೇಳಿದರು.
ನಗರದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮಹತ್ವದ ಹೆಜ್ಜೆಯಾಗಿ, 1.50 ಲಕ್ಷ ಕೋಟಿ ರೂ. ವೆಚ್ಚದ ಮೂಲಸೌಕರ್ಯ ಯೋಜನೆ, 26,000 ಕೋಟಿ ರೂ. ವೆಚ್ಚದ 117 ಕಿ.ಮೀ ‘ಬೆಂಗಳೂರು ಬ್ಯುಸಿನೆಸ್ ಕಾರಿಡಾರ್’ ನ್ನು ನಿರ್ಮಿಸಲಾಗುವುದು. ಪರಿಸರ ಸ್ನೇಹಿ ಬೆಂಗಳೂರಿಗೆ ಲಾಲ್ಬಾಗ್ ಮಾದರಿಯ 5 ಬೃಹತ್ ಟ್ರೀ ಪಾರ್ಕ್ಗಳು ಮತ್ತು 7 ಕೆರೆಗಳ ಪುನಶ್ಚೇತನ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ದೊಡ್ಡಬಳ್ಳಾಪುರದಲ್ಲಿ 20,000 ಕೋಟಿ ರೂ. ವೆಚ್ಚದ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್, ‘ಬಿಯಾಂಡ್ ಬೆಂಗಳೂರು’ ಅಡಿ 5 ಜಿಲ್ಲೆಗಳಲ್ಲಿ ಗ್ಲೋಬಲ್ ಟೆಕ್ ಸೆಂಟರ್ಗಳು ಮತ್ತು ‘ಕರ್ನಾಟಕ ರಾಜ್ಯ ಮೋಟಾರು ವಾಹನ ವಿಮಾ ಸಂಸ್ಥೆ’ ಸ್ಥಾಪಿಸಲಾಗುವುದು ಎಂದರು.
ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿಯೆಂದರೆ, ಮುಂದಿನ 6 ತಿಂಗಳಲ್ಲಿ 72,000 ಸರ್ಕಾರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗುವುದು. ಖಾಸಗಿ ಉದ್ಯೋಗಕ್ಕಾಗಿ ‘ಯುವ ಉದ್ಯೋಗ ಸೇತು’ ಮತ್ತು ಹಿಂದುಳಿದ 10 ಜಿಲ್ಲೆಗಳಲ್ಲಿ ಹೊಸ ಉದ್ಯೋಗಗಳಿಗೆ ಮಾಸಿಕ 2,500 ರೂ. ಪ್ರೋತ್ಸಾಹಧನ ನೀಡುವ ‘ಉದ್ಯೋಗ ನಿಧಿ’ ಯೋಜನೆಯನ್ನು ಘೋಷಿಸಲಾಯಿತು.
ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿ, 6ನೇ ತರಗತಿಯಿಂದಲೇ AI ಶಿಕ್ಷಣವನ್ನು ಪಠ್ಯಕ್ರಮದಲ್ಲಿ ಅಳವಡಿಸಲಾಗುವುದು. ಬೆಂಗಳೂರಿನಲ್ಲಿ ದೇಶದ ಮೊದಲ ಸರ್ಕಾರಿ AI ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುತ್ತಿದೆ. ಗ್ರಾಮೀಣ ಸರ್ಕಾರಿ ಶಾಲಾ ಮಕ್ಕಳಿಗೆ ವೃತ್ತಿಪರ ಕೋರ್ಸ್ಗಳಲ್ಲಿ ಶೇ.7.5 ವಿಶೇಷ ಮೀಸಲಾತಿ ಮತ್ತು 10,000 ‘ಭಾರತ್ ಜೋಡೋ ಯುವ ಸಂಘ’ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಸಿಎಂ ವಿವರಿಸಿದರು.
ರೈತರ ಕಲ್ಯಾಣಕ್ಕಾಗಿ ಡ್ರೋನ್ ಆಧಾರಿತ ಬೆಳೆ ಸಮೀಕ್ಷೆಯ ‘ಮುಖ್ಯಮಂತ್ರಿ ರೈತ ಚೈತನ್ಯ’ ಮತ್ತು ಸಣ್ಣ ರೈತರಿಗೆ ಯಂತ್ರೋಪಕರಣಗಳ ಬಾಡಿಗೆ ಮೇಲೆ 50% ಸಬ್ಸಿಡಿ ನೀಡುವ ‘ರೈತ ಮಿತ್ರ’ ಯೋಜನೆಯನ್ನು ಜಾರಿಗೊಳಿಸುವುದಾಗಿ ತಿಳಿಸಿದರು. ಎತ್ತಿನಹೊಳೆ ಯೋಜನೆಯ ಮೊದಲ ಹಂತ ಮತ್ತು 16,000 ಕೋಟಿ ರೂ. ಮೊತ್ತದ ಜಲಸಂಪನ್ಮೂಲ ಯೋಜನೆಗಳು ಚಾಲನೆಯಲ್ಲಿವೆ. ಎಸ್.ಸಿ/ಎಸ್.ಟಿ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಕಲ್ಯಾಣಕ್ಕೆ ಬೃಹತ್ ಅನುದಾನವನ್ನು ಮೀಸಲಿಡಲಾಗಿದೆ ಎಂದು ಡಿಕೆ ಶಿವಕುಮಾರ್ ಅವರು ತಮ್ಮ ಭಾಷಣದಲ್ಲಿ ತಿಳಿಸಿದರು.
