ಬೇಲೂರು, ಸೆಪ್ಟೆಂಬರ್ 22: ಹಾಸನ ಜಿಲ್ಲೆಯ ಬೇಲೂರಿನಲ್ಲಿ ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡಿದ್ದ ಅದೇ ಮಹಿಳೆಯಿಂದ ಈ ಕೃತ್ಯ ನಡೆದಿರುವುದಾಗಿ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಮುಖ ಮುಚ್ಚಿಕೊಂಡು ದೇವಸ್ಥಾನಕ್ಕೆ ಪ್ರವೇಶಿಸಿದ್ದ ಮಹಿಳೆ ತನ್ನ ಕಾಲಿನಲ್ಲಿದ್ದ ಚಪ್ಪಲಿಯನ್ನು ತೆಗೆದು ದೇವರ ಮೂರ್ತಿಯ ಮೇಲೆ ಎಸೆದಿದ್ದಾಳೆ ಎಂದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ.
ಈ ಘಟನೆಯು ಬೇಲೂರು ಪುರಸಭೆಯ ಆವರಣದಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ನಿನ್ನೆ ಬೆಳಿಗ್ಗೆ ನಡೆದಿದೆ. ದೇವಸ್ಥಾನಕ್ಕೆ ಆಗಮಿಸಿದ್ದ ಒಬ್ಬ ಮಹಿಳೆ, ಮುಖವನ್ನು ಮುಚ್ಚಿಕೊಂಡು ಒಳಗೆ ಪ್ರವೇಶಿಸಿದ್ದಾಳೆ. ಆಕೆ ಕಾಲಿನಲ್ಲಿ ಚಪ್ಪಲಿಗಳನ್ನು ಧರಿಸಿದ್ದು, ದೇವಾಲಯದಿಂದ ಹೊರಬಂದಾಗ ಚಪ್ಪಲಿಗಳಿಲ್ಲದಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ಈ ಕಾರಣದಿಂದಾಗಿ ಆಕೆಯ ಮೇಲೆ ಅನುಮಾನ ಬಂದಿದ್ದು, ಗಣೇಶ ಮೂರ್ತಿಯ ಮೇಲೆ ಚಪ್ಪಲಿಗಳನ್ನು ಇಟ್ಟಿರುವ ಸಾಧ್ಯತೆಯನ್ನು ಪೊಲೀಸರು ಪರಿಗಣಿಸಿದ್ದಾರೆ.
ಈ ಕೃತ್ಯ ಖಂಡಿಸಿ ಸ್ಥಳೀಯರು ಮತ್ತು ಭಕ್ತರು ದೇವಾಲಯದ ಆವರಣದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ದೃಶ್ಯಾವಳಿಗಳಲ್ಲಿ ಮಹಿಳೆಯ ಚಲನವಲನಗಳು ಸ್ಪಷ್ಟವಾಗಿ ಕಂಡುಬಂದಿದ್ದು, ಆಕೆಯೇ ಈ ಕೃತ್ಯವನ್ನು ಎಸಗಿದ್ದಾಲೆ ಎಂದು ದೃಢಪಟ್ಟಿದೆ. ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
