ಬ್ಯಾನರ್‌ ಗಲಾಟೆ ಪ್ರಕರಣ: ಕಾರ್ಯಕರ್ತನ ದೇಹ ಹೊಕ್ಕಿದ್ದು ಪೊಲೀಸ್ ಬುಲೆಟ್ ಅಲ್ಲ-ಎಸ್‌ಪಿ ಸ್ಪಷ್ಟನೆ

Untitled design 2026 01 02T120910.805

ಬಳ್ಳಾರಿ, ಜನವರಿ 02, 2026: ಗಣಿ ನಾಡು ಬಳ್ಳಾರಿಯಲ್ಲಿ ಬ್ಯಾನರ್ ವಿವಾದದ ಹಿನ್ನೆಲೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತನ ಸಾವು ಈಗ ಹೊಸ ತಿರುವು ಪಡೆದುಕೊಂಡಿದೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ನಡೆಸಿದ ಫೈರಿಂಗ್‌ನಿಂದ ರಾಜಶೇಖರ್ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆದರೆ, ಇದನ್ನು ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ (SP) ರಂಜಿತ್ ಕುಮಾರ್ ಭಂಡಾರು ಅವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‌ಪಿ ರಂಜಿತ್ ಕುಮಾರ್ ಭಂಡಾರು, ಮೃತ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ದೇಹದಿಂದ ಹೊರತೆಗೆಯಲಾದ ಬುಲೆಟ್ ಪೊಲೀಸರದ್ದಲ್ಲ. ಅದು ಯಾವುದೋ ಖಾಸಗಿ ವ್ಯಕ್ತಿಯ ರಿವಾಲ್ವರ್‌ನಿಂದ ಸಿಡಿದ ಗುಂಡು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ನಿನ್ನೆ ಗಲಾಟೆ ತೀವ್ರ ಸ್ವರೂಪ ಪಡೆದಾಗ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದು ನಿಜ, ಆದರೆ ರಾಜಶೇಖರ್‌ಗೆ ತಗುಲಿರುವುದು ಖಾಸಗಿ ಆಯುಧದ ಬುಲೆಟ್ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಹೇಳಿಕೆಯು ಪ್ರಕರಣದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಗಲಾಟೆಯ ನಡುವೆ ಕಿಡಿಗೇಡಿಗಳು ಹತ್ಯೆ ಮಾಡುವ ಉದ್ದೇಶದಿಂದಲೇ ಗುಂಡು ಹಾರಿಸಿದ್ದಾರೆಯೇ ಎಂಬ ಅನುಮಾನ ಮೂಡಿಸಿದೆ.

ಈಗಾಗಲೇ ಘಟನೆ ನಡೆದ ಸ್ಥಳದ ಸುತ್ತಮುತ್ತಲಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯಾರು ಗುಂಡು ಹಾರಿಸಿದ್ದಾರೆ ಎಂಬ ಬಗ್ಗೆ ನಾವು ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಖಾಸಗಿ ವ್ಯಕ್ತಿ ಫೈರಿಂಗ್ ಮಾಡಿರುವ ಬಗ್ಗೆ ಸೂಕ್ತ ಸಾಕ್ಷ್ಯಗಳಿಗಾಗಿ ತಾಂತ್ರಿಕ ತನಿಖೆ ನಡೆಯುತ್ತಿದೆ ಎಂದು ಎಸ್‌ಪಿ ತಿಳಿಸಿದ್ದಾರೆ. ಇನ್ನು ಶಾಸಕ ನಾರಾ ಭರತ್ ರೆಡ್ಡಿ ಅವರ ಬೆಂಬಲಿಗರು ಈಗಾಗಲೇ ನಾಲ್ಕು ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದಾರೆ.

ಶಾಸಕ ಜನಾರ್ದನ ರೆಡ್ಡಿ ಅವರ ನಿವಾಸದ ಬಳಿ ವಾಲ್ಮೀಕಿ ಪ್ರತಿಮೆ ಅನಾವರಣದ ಬ್ಯಾನರ್ ಅಳವಡಿಸುವ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ಆರಂಭವಾಗಿತ್ತು. ಇದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿ, ಅಂತಿಮವಾಗಿ ಗುಂಡಿನ ದಾಳಿಯಲ್ಲಿ ಓರ್ವ ಯುವಕನ ಸಾವಿನಲ್ಲಿ ಅಂತ್ಯಗೊಂಡಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಬಿ. ಶ್ರೀರಾಮುಲು, ಸೋಮಶೇಖರ್ ರೆಡ್ಡಿ ಸೇರಿದಂತೆ ಒಟ್ಟು 11 ಪ್ರಮುಖ ನಾಯಕರ ವಿರುದ್ಧ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಖಾಸಗಿ ವ್ಯಕ್ತಿಯಿಂದ ಗುಂಡೇಟು ತಗುಲಿದೆ ಎಂಬ ಮಾಹಿತಿ ಹೊರಬರುತ್ತಿದ್ದಂತೆಯೇ ನಗರದಲ್ಲಿ ಮತ್ತಷ್ಟು ಆಕ್ರೋಶ ವ್ಯಕ್ತವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಸದ್ಯ ಪೊಲೀಸರು ಆ ಖಾಸಗಿ ರಿವಾಲ್ವರ್ ಯಾರದ್ದು ಮತ್ತು ಅದನ್ನು ಬಳಸಿದವರು ಯಾರು ಅಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

Exit mobile version